

ಸರಗೂರು: ‘ಕಷ್ಟದಿಂದ ಮುಕ್ತಿ ಕೊಟ್ಟು ನೆಮ್ಮದಿ ನೀಡು’ ಎಂದು ಜನ ಸಾಮಾನ್ಯರು ದೇವರ ಮೊರೆ ಹೋಗೋದು ಸಾಮಾನ್ಯ. ಅದರಂತೆ ಸಾಗರೆ ಮಾರಮ್ಮನ ಪವಾಡ ತಿಳಿದ ಭಕ್ತರು ದೇವಿಯ ದರ್ಶನ ಪಡೆಯಲು ಮುಗಿಬೀಳುತ್ತಾರೆ.
ಸರಗೂರು ತಾಲೂಕಿನ ಸಾಗರೆ ಗ್ರಾಮದಲ್ಲಿ ‘ಸಾಗರೆ ಮಾರಮ್ಮ’ ಎಂದು ಹೆಸರುವಾಸಿಯಾಗಿರುವ ತಾಯಿಯನ್ನು ಗ್ರಾಮದಲ್ಲಿರುವ 12 ಜನಾಂಗದವರೂ ಆರಾಧಿಸುತ್ತಾರೆ. ಪ್ರತಿಯೊಂದು ಜನಾಂಗ ತಾಯಿ ಆರಾಧನೆಗೆ ಒಂದೊಂದು ಜವಾಬ್ದಾರಿ ಹೊರುತ್ತ ಬಂದಿದೆ.
ಮಾರಮ್ಮನ ತಾಯಿಯ ಹಿನ್ನೆಲೆ: ಗ್ರಾಮದ ಒಕ್ಕಲಿಗಗೌಡರ ಮನೆಯ ಹಸುವಿನ ಕೆಚ್ಚಲಿನಲ್ಲಿ ಒಮ್ಮೆ ಹಾಲಿನ ಬದಲು ರಕ್ತ ಬಂದಿತು. ಇದರಿಂದ ಗೌಡರ ಮನೆಯವರು ಭಯಪಟ್ಟು ಅವರು ಹಸುವನ್ನು ಕಪಿಲಾ ನದಿಯ ದಡದಲ್ಲಿ ಮೇಯಲು ಬಿಟ್ಟು ಸ್ವಲ್ಪ ದೂರು ನಿಂತು ನೋಡುತ್ತಿದ್ದರು. ಆಗ ಹಸು ಮಾರಮ್ಮ ವಿಗ್ರಹಕ್ಕೆ ಹಾಲು ಎರೆಯುವುದನ್ನು ನೋಡಿ ಅಚ್ಚರಿಯಿಂದ ಹತ್ತಿರ ಹೋಗಿ ನೋಡಿದಾಗ ತಾಯಿಯ ವಿಗ್ರಹ ಇತ್ತು. ಇದರ ಪಕ್ಕದಲ್ಲೇ ಹಾವು ಸಹ ಕಂಡುಬರುತ್ತದೆ. ಈ ವಿಷಯವನ್ನು ಮನೆಯವರು ಊರಿನ ಗ್ರಾಮಸ್ಥರಿಗೆ ತಿಳಿಸುತ್ತಾರೆ. ನಂತರ ರಾತ್ರಿ ಅವರು ಮಲಗಿದ್ದಾಗ ತಾಯಿ ಅವರು ಕನಸಿನಲ್ಲಿ ಬಂದು ‘ಹೆದರಬೇಡಿ, ನಾನು ಮಾರಮ್ಮ. ನಿಮ್ಮ ಗ್ರಾಮದಲ್ಲಿ ಬಂದು ನೆಲೆಸಿದ್ದೇನೆ. ನನಗೆ ಗುಡಿಯನ್ನು ಕಟ್ಟಿಸಿಕೊಡಿ’ ಎಂದು ಹೇಳುತ್ತಾಳೆ. ಅವರು ಈ ವಿಷಯವನ್ನು ಗ್ರಾಮಸ್ಥರಿಗೆ ತಿಳಿಸಿ ಬೆಳಗ್ಗೆ ಮಾರಮ್ಮ ವಿಗ್ರಹವಿದ್ದ ಜಾಗಕ್ಕೆ ಹೋಗಿ ದೇವಾಲಯವನ್ನು ನಿರ್ಮಿಸುತ್ತಾರೆ. ದೇವಿಯ ಮಾರ್ಗದರ್ಶನದಂತೆ ಉತ್ತರ ಭಾಗಕ್ಕೆ ಬಾಗಿಲು, ದೇವಾಲಯ ಬಲಭಾಗದಲ್ಲಿ ಚಿಕ್ಕದಾಗಿ ಚಿಕ್ಕದೇವಮ್ಮನ ಗುಡಿ ನಿರ್ಮಿಸಲಾಗಿದೆ. ಸುಮಾರು ವರ್ಷಗಳಿಂದ ಪೂಜೆ ಕಾರ್ಯ ಮಾಡಿಕೊಂಡು ಬರಲಾಗುತ್ತಿದೆ.
15 ದಿನಗಳ ಜಾತ್ರೆ
15 ದಿನಗಳ ಕಾಲ ದೇವಿಯ ಜಾತ್ರೆ ನಡೆಯುತ್ತದೆ. ಮೊದಲನೇ ವಾರ ದೇವಿಗೆ ಹಸೆಮಣೆ ಶಾಸ್ತ್ರ ಮಾಡಿದ ನಂತರ ಯಭಾರ (ಡೋಲು) ಬೇವಿನ ಸೊಪ್ಪು, ಹೊಂಗೆ ಸೊಪ್ಪು, ಕುಕ್ಕೆ ಹೂವುಗಳಿಂದ ದೇವಸ್ಥಾನವನ್ನು ಸಿಂಗಾರ ಮಾಡಲಾಗುವುದು.
ಎರಡನೇ ವಾರ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಬಲಿ ಎಂಬ ಹೆಸರಿನಲ್ಲಿ ಅಮ್ಮನವರಿಗೆ ಪೂಜೆ ನಡೆಯುತ್ತದೆ. ನಂತರ ಆ ದಿವಸ ಪರಿಶಿಷ್ಟ ಪಂಗಡದವರು ಪೂಜೆ ಕುರಿಯನ್ನು ಮಾರಮ್ಮ ತಾಯಿಯ ದೇವಸ್ಥಾನದ ಎದುರಿಗೆ ಬಲಿ ಕೊಡಲಾಗುತ್ತದೆ. ತಾಯಿಗೆ ಹರಕೆ ಹೊತ್ತವರು ದೇವಸ್ಥಾನದ ಮುಂಭಾಗದ ರಕ್ತ ಹೋಳಿ ಮಂಟಪದಲ್ಲಿ ಕುರಿ, ಕೋಳಿಗಳನ್ನು ಬಲಿ ಕೊಡುವರು. ನಂಬಿದವರನ್ನು ತಾಯಿ ಎಂದಿಗೂ ಕೈಬಿಡುವುದಿಲ್ಲ ಎಂಬ ನಂಬಿಕೆ ಭಕ್ತರಲ್ಲಿದೆ.
ಅಮಾವಾಸ್ಯೆ ಪೂಜೆ:
ಭಾನುವಾರ, ಸೋಮವಾರ, ಮಂಗಳವಾರ, ಶುಕ್ರವಾರ ಅಮಾವಾಸ್ಯೆ ಪೂಜೆಗಳು ನಡೆಯುತ್ತದೆ. ದೇವಿಯ ದರ್ಶನಕ್ಕಾಗಿ ತುಂಬ ದೂರದ ಊರುಗಳಿಂದ ಜನರು ಬರುತ್ತಾರೆ. ಭಾನುವಾರ ವರವನ್ನು ತೆಗೆಯುತ್ತಾರೆ. ಸುತ್ತಮುತ್ತಲಿನ ಗ್ರಾಮಗಳಿಗೆ ಸಾಗರೆ ಮಾರಮ್ಮ ಎಂದರೆ ಅಪಾರವಾದ ನಂಬಿಕೆ. ಕಷ್ಟದಲ್ಲಿರುವ ಭಕ್ತರಿಗೆ ತಾಯಿಯು ಕುದುರೆ ಮೂಲಕ ಹಾಗೂ ಒಬ್ಬ ವಯಸ್ಸಾದ ಅಜ್ಜಿಯ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ ಎಂಬುದು ಗ್ರಾಮಸ್ಥರ ನಂಬಿಕೆ.
ತಾಯಿಯು ವಿಹಾರ ಅಥವಾ ಸ್ನಾನ ಮಾಡುವುದಕ್ಕಾಗಿ ದೇವಾಲಯದ ಒಳಭಾಗದಿಂದ ಕಪಿಲಾ ನದಿಗೆ ಸುರಂಗ ಮಾರ್ಗದ ಮೂಲಕ ತೆರಳುತ್ತಾಳೆ ಎಂದು ನಂಬಿಕೆ ಜನರಲ್ಲಿದೆ.
ಗ್ರಾಮದ ಜನರು ಸಣ್ಣ ಮಕ್ಕಳಿಗೆ ಆರೋಗ್ಯ ಸಮಸ್ಯೆ ಬಂದರೆ ಈರುಳ್ಳಿ ಸರ ಹಾಕುವ ಮೂಲಕ ದೇವಿಗೆ ಹರಕೆ ಕಟ್ಟುತ್ತಾರೆ. ಮಕ್ಕಳಿಲ್ಲದವರ, ನಿರುದ್ಯೋಗಿಗಳು ದೇವಿಯನ್ನು ಭಕ್ತಿಯಿಂದ ಪ್ರಾರ್ಥಿಸಿದರೆ ಅವರ ಇಷ್ಟಾರ್ಥ ಈಡೇರುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.
ಕಷ್ಟದಿಂದ ಮುಕ್ತಿ ಕೊಟ್ಟು ನೆಮ್ಮದಿ ನೀಡುವ ಶಕ್ತಿ ದೇವತೆ. ಈ ದೇವಿಯನ್ನು ನೋಡಿದ್ರೆ ಅದೇನೋ ಚೈತನ್ಯ. ಕೈ ಮುಗಿದು ನಮಸ್ಕರಿಸುವ ಭಾವನೆ ಎಲ್ಲರಲ್ಲೂ ಮೂಡುತ್ತೆ. ಅಷ್ಟೊಂದು ಶಕ್ತಿ ಈ ದೇವಿಗೆ ಇದೆ.
ಸುಸಾನ್, ಹಾದನೂರು ಭಕ್ತೆ.
ನೂರಾರು ವರ್ಷಗಳ ಇತಿಹಾಸವಿರುವ ಮಾರಮ್ಮ ದೇವಿಯನ್ನು ತಾತ ಮುತ್ತಾತನ ಕಾಲದಿಂದಲೂ ಪೂಜೆ ಮಾಡಿಕೊಂಡು ಬರಲಾಗುತ್ತಿದೆ. ಪ್ರತಿ ತಿಂಗಳ ಅಮಾವಾಸ್ಯೆ ಬಂದರೆ ಸಾಕು ಭಕ್ತರು ರಾಜ್ಯದ ನಾನಾ ಮೂಲೆಗಳಿಂದ ಈ ದೇವಾಲಯಕ್ಕೆ ತಂಡೋಪ ತಂಡವಾಗಿ ಭೇಟಿ ನೀಡುತ್ತಾರೆ. ಕಷ್ಟ ಅಂತ ಬಂದ ಭಕ್ತರಿಗೆ ಈ ದೇವಿ ಪವಾಡ ರೂಪದಲ್ಲಿ ಆಶೀರ್ವಾದ ನೀಡಿ ಪರಿಹಾರ ನೀಡುತ್ತಾಳೆ.
ಮಹೇಂದ್ರ ಸಾಗರೆ, ಭಕ್ತರು.
ಒಂದಲ್ಲ ಒಂದು ಸಮಸ್ಯೆಯನ್ನು ಎದುರಿಸುವ ಜನಸಾಮಾನ್ಯರು ಪರಿಹಾರಕ್ಕಾಗಿ ತಾಯಿ ಮಾರಮ್ಮನ ಮೊರೆ ಹೋಗ್ತಾರೆ. ಶಕ್ತಿ ದೇವತೆಗಳಲ್ಲಿ ಒಂದಾದ ಗ್ರಾಮದ ಮಾರಮ್ಮ ದೇವಿಯ ಪವಾಡ ಈ ಭಾಗದಲ್ಲಿ ಹೆಚ್ಚಾಗಿದೆ. ಸಾವಿರಾರು ಭಕ್ತಾದಿಗಳು ಅಮಾವಾಸ್ಯೆಯಂದು ಬಂದು ಕಷ್ಟಗಳನ್ನು ನಿವಾರಿಸಿಕೊಳ್ಳುತ್ತಿದ್ದಾರೆ.
ಪ್ರಸಾದ್ ಸಾಗರೆ, ಅರ್ಚಕರು.