

|| ಓಂ ಜಗದಾಧಾರಶಕ್ತ್ಯೈ ನಮಃ ||
ಯಾ ದೇವಿ ಸರ್ವಭೂತೇಷು ಶಕ್ತಿರೂಪೇಣ ಸಂಸ್ಥಿತಾ|
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ||
‘ಯಾವ ದೇವಿಯು ಶಕ್ತಿಸ್ವರೂಪಳಾಗಿ ಎಲ್ಲ ಭೂತಗಳಲ್ಲಿಯೂ ನೆಲೆಸಿರುವಳೋ ಅಂತಹ ಶಕ್ತಿರೂಪಿಣಿಗೆ ನಮೋ ನಮಃ’
ನವರಾತ್ರಿ ಉತ್ಸವದ ಒಂಬತ್ತು ದಿನಗಳಲ್ಲಿ ಆದಿಶಕ್ತಿಯ ಒಂಬತ್ತು ರೂಪಗಳನ್ನು ಆರಾಧಿಸುವುದು ರೂಢಿ. ನವರಾತ್ರಿಯ ಎರಡನೆಯ ದಿನ ನಡೆಯುವುದು ಎರಡನೆಯ ರೂಪವಾದ ಬ್ರಹ್ಮಚಾರಿಣೀ ರೂಪ. ಕಮಲ, ಅಕ್ಷಮಾಲಾ, ವರದಹಸ್ತ, ಮತ್ತು ಕಮಂಡಲುಗಳನ್ನು ಧರಿಸಿ ಶಕ್ತಿರೂಪದಿಂದ ವಿಜೃಂಭಿಸುವವಳು. ‘ಬ್ರಹ್ಮಚಾರಿಣೀ’ ಎಂದರೆ ತಪಸ್ಸಿನಲ್ಲಿ ಚಲಿಸುವವಳು. ಅಂದರೆ ತಪಸ್ಸನ್ನು ಆಚರಿಸುವವಳು ಎಂದರ್ಥ. ಈಕೆಯ ಸ್ವರೂಪವು ಜ್ಯೋತಿರ್ಮಯವಾದುದು ಮತ್ತು ಅತ್ಯಂತ ಭವ್ಯವಾದಂತಹದ್ದು.
ಶೈಲಪುತ್ರಿಯಾದ ಪಾರ್ವತಿಯು ನಾರದ ಮಹರ್ಷಿಯ ಉಪದೇಶದಂತೆ ಭಗವಾನ್ ಶಿವನನ್ನೇ ಪತಿಯಾಗಿ ಪಡೆಯಲು ಬಹಳ ವರ್ಷಗಳ ಕಾಲ ಕಠಿಣ ತಪಸ್ಸು ಮಾಡಿದಳು. ಅನ್ನಾಹಾರಗಳನ್ನು ತ್ಯಜಿಸಿ, ಫಲಮೂಲಗಳನ್ನು ಮಾತ್ರ ತಿಂದು ತಪಸ್ಸನ್ನಾಚರಿಸಿದಳು. ಹಲವು ವರ್ಷಗಳ ಕಾಲ ಗಿಡದ ಎಲೆಗಳನ್ನು ಮಾತ್ರ ತಿಂದು ಉಪವಾಸ ವ್ರತವನ್ನಾಚರಿಸಿ ತಪಸ್ಸನ್ನು ಮಾಡಿದಳು. ಹೀಗೆ ಸಾವಿರಾರು ವರ್ಷಗಳ ಕಾಲ ಹಗಲುರಾತ್ರಿಗಳ ಭೇದವಿಲ್ಲದೆ ಶಿವನನ್ನು ಕುರಿತು ತಪಸ್ಸು ಮಾಡಿದಳು. ಇವಳ ತಪಸ್ಸನ್ನು ನೋಡಿದ ದೇವತೆಗಳು ಮತ್ತು ಋಷಿಗಳು ಪಾರ್ವತಿಯ ಗುಣಗಾನ ಮಾಡಿದರು. ಇದರಿಂದ ಬ್ರಹ್ಮದೇವನಿಗೆ ಆಶ್ಚರ್ಯವಾಯಿತು. ಕೊನೆಗೆ ಅವನು ಪಾರ್ವತಿಯ ಎದುರು ಪ್ರತ್ಯಕ್ಷನಾಗಿ ‘ಹೇ ಪಾರ್ವತಿದೇವಿ, ನಿನ್ನಂತಹ ಸ್ತ್ರೀ ಇಷ್ಟು ಪ್ರಭಾವಪೂರ್ಣವಾಗಿ, ಕಠಿಣವಾದ ತಪಸ್ಸು ಮಾಡಿದ್ದನ್ನು ನಾವು ನೋಡಿರಲೇ ಇಲ್ಲ. ಯಾರೂ ಇಂತಹ ತಪಸ್ಸನ್ನು ಮಾಡಲೂ ಇಲ್ಲ. ಈ ತಪಸ್ಸಿನ ಫಲವಾಗಿ ನಿನ್ನ ಇಷ್ಟಾರ್ಥಗಳು ಶೀಘ್ರವೇ ಪೂರ್ಣವಾಗುತ್ತವೆ. ಶಿವನು ನಿನ್ನನ್ನು ಪತ್ನಿಯಾಗಿ ಸ್ವೀಕರಿಸುತ್ತಾನೆ. ಈಗ ನಿನ್ನ ತಪಸ್ಸನ್ನು ನಿಲ್ಲಿಸಿ ಮನೆಗೆ ಹೋಗು’ ಎಂದನು. ಅಲ್ಲಿ ಉಪಸ್ಥಿತರಿದ್ದ ದೇವತೆಗಳೆಲ್ಲ ಅವಳಿಗೆ ಆಶೀರ್ವಾದ ಮಾಡಿದರು. ನಂತರ ಅವಳು ಶಿವನನ್ನು ವರಿಸುವಂತಾದಳು. ಬರೀ ಎಲೆಗಳನ್ನು ತಿಂದು ಜೀವಿಸಿದ್ದಳು ಎನ್ನುವ ಕಾರಣಕ್ಕೆ ದೇವತೆಗಳು ಇವಳನ್ನು ‘ಅಪರ್ಣಾ’ ಎಂದು ಕರೆದರು.
ಬ್ರಹ್ಮಚಾರಿಣಿಯ ರೂಪದಲ್ಲಿ ದೇವಿಯನ್ನು ಪೂಜಿಸುವುದರಿಂದ ವೈರಾಗ್ಯ ಹೆಚ್ಚುತ್ತದೆ. ಮನಸ್ಸಿನಲ್ಲಿ ಭಕ್ತಿಭಾವಗಳು ಸದಾ ಜಾಗೃತವಾಗಿರುತ್ತವೆ. ಸದಾಚಾರ ವೃದ್ಧಿಯಾಗುತ್ತದೆ. ಸಂಯಮ ತಪಸ್ಸುಗಳು ಹೆಚ್ಚಾಗುತ್ತವೆ. ಬ್ರಹ್ಮಜ್ಞಾನ ಪ್ರಾಪ್ತಿಯಾಗುತ್ತದೆ. ಮನಸ್ಸಿಗೆ ಶಾಂತಿ, ನೆಮ್ಮದಿ, ಉತ್ತಮ ಆರೋಗ್ಯ ದೊರೆಯುತ್ತವೆ. ಯೋಗಿಗಳು ಬ್ರಹ್ಮಚಾರಿಣಿದೇವಿಯನ್ನು ಒಲಿಸಿಕೊಳ್ಳುವಾಗ ಮನಸ್ಸನ್ನು ಸ್ವಾಧಿಷ್ಠಾನಚಕ್ರದಲ್ಲಿ ನೆಲೆಗೊಳಿಸಿ ಆರಾಧಿಸುತ್ತಾರೆ. ಇದರಿಂದ ಬ್ರಹ್ಮಚಾರಿಣಿಯು ಒಲಿಯುತ್ತಾಳೆ ಮತ್ತು ಧ್ಯಾನ-ಆವಾಹನಾದಿ ಷೋಡಶೋಪಚಾರಗಳ ಮೂಲಕ ಪೂಜಿಸಿ, ಭಕ್ತಿಯಿಂದ ನಮಿಸಿದರೆ ಮನಸ್ಸಿನ ಕಾಮನೆಗಳು ಈಡೇರುತ್ತವೆ ಎಂಬುದು ಪ್ರತೀತಿ.
(ಲೇಖಕರು ಸಂಸ್ಕೃತ ವಿದ್ವಾಂಸರು)