ನೆಪ ಹೇಳದೇ ಸಂಬಳ ಬಿಡುಗಡೆಗೆ ಕಾಂಗ್ರೆಸ್ ಆಗ್ರಹ

Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಸಾರಿಗೆ ನೌಕರರ ಸಂಬಳವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಕಾಂಗ್ರೆಸ್ ಆಗ್ರಹಿಸಿದೆ.

ಸಂಬಳವಿಲ್ಲದೆ ದೀಪಾವಳಿಯಂತಹ ಸಡಗರದ ಹಬ್ಬವನ್ನು ಆಚರಿಸಲಾಗದ ಶೋಚನೀಯ ಸ್ಥಿತಿ ಸಾರಿಗೆ ನೌಕರರದ್ದು. ಸರ್ಕಾರ ನೆಪಗಳನ್ನು ಬದಿಗಿರಿಸಿ ಸಮಸ್ಯೆ ಬಗೆಹರಿಸುವುದು ಸೂಕ್ತ. ನೆಪಗಳೊಂದೇ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಮಾರ್ಗವಲ್ಲ ಎಂದು ಟೀಕಿಸಿದೆ.

ಈಗಲೂ ಕಾಲ ಮಿಂಚಿಲ್ಲ, ಸಾರಿಗೆ ಇಲಾಖೆಯ ಸಂಪನ್ಮೂಲ ಕ್ರೋಡೀಕರಣಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಂಡು, ಉತ್ತಮ ಯೋಜನೆ ರೂಪಿಸಿಕೊಂಡು, ಇಲಾಖೆಯ ನೌಕರರ ಪರಿಸ್ಥಿತಿ ಸುಧಾರಣೆಗೆ ಸಹಕರಿಸಿ ಎಂದು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಗೆ ಸಲಹೆ ನೀಡಿದೆ.

ಇದೇ ವಿಚಾರದಲ್ಲಿ ಪ್ರತಿಕ್ರಿಯಿಸಿರುವ ಶಾಸಕ ದಿನೇಶ್ ಗುಂಡೂರಾವ್, ಸಾರಿಗೆ ನೌಕರರ ಸಂಬಳ ಆಗದಿರುವುದಕ್ಕೆ ಸಚಿವ ಸವದಿ ಕರೊನಾ ನೆಪ ಹೇಳಿದ್ದಾರೆ. ಕರೊನಾ ಬಿಸಿ ಕೇವಲ ಸಾರಿಗೆ ಇಲಾಖೆಗೆ ಮಾತ್ರ ತಟ್ಟಿಲ್ಲ. ನೆಪ ಹೇಳುವುದು ಬಿಟ್ಟು ಸಾರಿಗೆ ಇಲಾಖೆ, ಸಂಪನ್ಮೂಲ ಕ್ರೋಡೀಕರಣಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಿತ್ತು. ಈಗ ಹಣಕಾಸು ಇಲಾಖೆ ಕಡೆ ಬೊಟ್ಟು ತೋರಿಸಿದರೆ ಸಾರಿಗೆ ನೌಕರರ ಜೀವನ ನಡೆಯುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net