

ಹುಕ್ಕೇರಿ: ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಜಯಗೌಡ ಪಾಟೀಲ ಅವಿರೋಧವಾಗಿ ಆಯ್ಕೆಯಾದರು.
ಅವಿಶ್ವಾಸ ಗೊತ್ತುವಳಿ ಮೂಲಕ ಈಚೆಗೆ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಜಯಗೌಡ ಪಾಟೀಲ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರೆಂದು ಚುನಾವಣಾಧಿಕಾರಿ ಶಶಿಕಲಾ ಪಾಟೀಲ ಘೋಷಿಸಿದರು.
ಅಧ್ಯಕ್ಷ ಜಯಗೌಡ ಪಾಟೀಲ ಮಾತನಾಡಿ, ಇನ್ನೂ ಮೂರು ತಿಂಗಳಲ್ಲಿ ಚುನಾವಣೆ ಜರುಗಲಿದ್ದು, ಅಷ್ಟರೊಳಗಾಗಿ ತೋಟಪಟ್ಟಿ ನಿವಾಸಿಗಳಿಗೆ ನಿರಂತರ ವಿದ್ಯುತ್ ಸರಬರಾಜು ಯೋಜನೆ ಜಾರಿಗೊಳಿಸಲು ಪ್ರಯತ್ನಿಸುತ್ತೇನೆ. ಜತೆಗೆ ತಾಲೂಕಿನಲ್ಲಿ ಸಂಘದ ೧೦ ಉಪ ಕೇಂದ್ರಗಳಿದ್ದು, ನಿರ್ದೇಶಕ ಮಂಡಳಿ ಅಲ್ಲಿಗೆ ತೆರಳಿ ಕೇಂದ್ರ ವ್ಯಾಪ್ತಿಯ ಗ್ರಾಹಕರ ಕುಂದುಕೊರತೆ ಆಲಿಸಿ ಅಲ್ಲಿಯೇ ಪರಿಹರಿಸುವ ಸಂಕಲ್ಪ ಮಾಡುವುದಾಗಿ ತಿಳಿಸಿದರು. ಅವಿರೋಧ ಆಯ್ಕೆಗೆ ಮಾರ್ಗದರ್ಶನ ಮಾಡಿದ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮತ್ತು ಜಾರಕಿಹೊಳಿ ಸಹೋದರರಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ನೂತನ ಅಧ್ಯಕ್ಷರನ್ನು ಸನ್ಮಾನಿಸಿದರು.
ಸಂಗಮ ಶುಗರ್ಸ್ ಅಧ್ಯಕ್ಷ ರಾಜೇಂದ್ರ ಪಾಟೀಲ, ಪುರಸಭೆ ಅಧ್ಯಕ್ಷ ಇಮ್ರಾನ್ ಮೋಮಿನ್, ಅಮರ ನಲವಡೆ, ಪವನ ಪಾಟೀಲ, ಬಸವರಾಜ ಕೋಳಿ, ಸುರೇಶ ಹುಣಶ್ಯಾಳಿ, ಚಿದಾನಂದ ಕಿಲ್ಲೇದಾರ, ಮಹಾವೀರ ಬಾಗಿ, ಮೋಹನ ಕೋಠಿವಾಲೆ, ಭೀಮಗೌಡ ಪಾಟೀಲ, ಗಿರೀಶ ಪಾಟೀಲ, ಜಿನಗೌಡ ಇಮಗೌಡನವರ ಇತರರು ಇದ್ದರು.
ಗೈರಾದವರು: ಸಂಘದ ೧೫ ಸದಸ್ಯರಲ್ಲಿ ನಿಕಟಪೂರ್ವ ಅಧ್ಯಕ್ಷ ಕಲಗೌಡ ಪಾಟೀಲ, ನಿರ್ದೇಶಕರಾದ ಪೃಥ್ವಿ ಕತ್ತಿ, ಕೆ.ಕೆ.ಬೆಣಚಿನಮರಡಿ, ಸಂಗೀತಾ ದಪ್ಪಾಧೂಳಿ, ಶಿವಲೀಲಾ ಮಣಗುತ್ತಿ ಗೈರಾಗಿದ್ದರು.