

ಸಾಲಿಗ್ರಾಮ: ನುಡಿದಂತೆ ನಡೆಯುತ್ತಿರುವ ಸರ್ಕಾರ ಇದ್ದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಸಾಲಿಗ್ರಾಮ ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಕ್ಷೇತ್ರದ ಮತದಾರರಿಗೆ ಆಯೋಜಿಸಿದ್ದ ಕೃತಜ್ಞತಾ ಸಭೆಯಲ್ಲಿ ಮಾತನಾಡಿ, ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಕೊಟ್ಟ ಭರವಸೆಗಳನ್ನು ಸಮರ್ಪಕವಾಗಿ ಈಡೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಈಗಾಗಲೇ ಮೂರು ಭರವಸೆಗಳನ್ನು ಈಡೇರಿಸಲು ಕ್ರಮ ವಹಿಸಿದ್ದು, ಉಳಿದ ಯೋಜನೆಗಳನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಇದನ್ನು ಸಹಿಸಲಾಗದೆ ವಿರೋಧ ಪಕ್ಷದವರು ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಆದರೆ ಯಾವ ಟೀಕೆಗೂ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ನಾವು ಕೊಟ್ಟ ಯೋಜನೆಗಳನ್ನು ಜಾರಿಗೆ ತರುವುದು ಒಂದೇ ನಮ್ಮ ಗುರಿ ಎಂದರು.
ನಮ್ಮ ತಾಲೂಕಿನಲ್ಲಿ ಸಮಗ್ರ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಕೆ.ಆರ್.ನಗರ ಮತ್ತು ಸಾಲಿಗ್ರಾಮ ಎರಡು ತಾಲೂಕು ಸಮಗ್ರವಾಗಿ ಅಭಿವೃದ್ಧಿ ಆಗಲಿದೆ ಎಂದ ಶಾಸಕರು, ಹರದನಹಳ್ಳಿ ಗ್ರಾಮದಲ್ಲಿ ತುರ್ತಾಗಿ ಆಗಬೇಕಾದ ಕೆಲಸ, ಕಾರ್ಯಗಳ ಪಟ್ಟಿಯನ್ನು ಗ್ರಾಮದ ಹಿರಿಯ ಮುಖಂಡರು, ಕಾರ್ಯಕರ್ತರು ಹಾಗೂ ಮತದಾರರು ಸಿದ್ಧಪಡಿಸಿ ನೀಡಿದರೆ ಹಂತ ಹಂತವಾಗಿ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದರು.
ಶುದ್ಧ ಕುಡಿಯುವ ನೀರು, ರಸ್ತೆ, ಚರಂಡಿ, ದೇವಸ್ಥಾನಗಳ ಅಭಿವೃದ್ಧಿ, ಸಮುದಾಯ ಭವನಗಳ ಅಭಿವೃದ್ಧಿ, ಸಾರಿಗೆ ವ್ಯವಸ್ಥೆ, ವಿದ್ಯುತ್ ಸೌಲಭ್ಯ ವ್ಯವಸ್ಥೆ ಸೇರಿದಂತೆ ಇನ್ನಿತರ ಕೆಲಸ, ಕಾರ್ಯಗಳ ಬಗ್ಗೆ ಹೆಚ್ಚು ಒತ್ತು ನೀಡಲಾಗುವುದು. ನನಗೆ ಹರದನಹಳ್ಳಿ ಗ್ರಾಮದಲ್ಲಿ ಹೆಚ್ಚು ಮತ ನೀಡುವ ಮೂಲಕ ಶಾಸಕರನ್ನಾಗಿ ಮಾಡಿದ್ದೀರಿ. ಹಾಗಾಗಿ ನಿಮ್ಮೊಂದಿಗೆ ಇದ್ದು ನಿಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಡುತ್ತೇನೆ ಎಂದು ಶಾಸಕರು ಭರವಸೆ ನೀಡಿದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹರದನಹಳ್ಳಿ ಮಂಜಪ್ಪ ಮಾತನಾಡಿ, ಕಾಂಗ್ರೆಸ್ ಕೊಟ್ಟ ಭರವಸೆಗಳನ್ನು ಹೇಗೆ ಈಡೇರಿಸುತ್ತಿದೆಯೋ ಅದೇ ರೀತಿ ನಮ್ಮ ಗ್ರಾಮದ ಸಮಸ್ಯೆಗಳನ್ನು ಶಾಸಕ ರವಿಶಂಕರ್ ಅವರು ಈಡೇರಿಸುವ ಭರವಸೆ ನಮಗಿದೆ ಎಂದ ಅವರು, ಗ್ರಾಮದಲ್ಲಿ ತುರ್ತಾಗಿ ಆಗಬೇಕಾದ ಕೆಲಸಗಳ ಕುರಿತು ಮನವಿ ಪತ್ರವನ್ನು ಶಾಸಕರಿಗೆ ನೀಡಿದರು.
ಕಾರ್ಯಕ್ರಮಕ್ಕೂ ಮುನ್ನ ಶಾಸಕ ರವಿಶಂಕರ್ ಅವರನ್ನು ಗ್ರಾಮಕ್ಕೆ ಅದ್ದೂರಿಯಾಗಿ ಸ್ವಾಗತಿಸಿದ ಗ್ರಾಮಸ್ಥರು, ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮ ಆಚರಿಸಿದರು. ನಂತರ ಕಾಂಗ್ರೆಸ್ ಮುಖಂಡರು ಶಾಸಕ ರವಿಶಂಕರ್ ಅವರನ್ನು ಅಭಿನಂದಿಸಿದರು.
ಮುಖಂಡರಾದ ರಾಮೇಗೌಡ, ತಿಮ್ಮೇಗೌಡ, ಪ್ರಕಾಶ್, ಪಾಂಡು, ಟಿ.ರವಿ, ತೇಜಮೂರ್ತಿ, ಮಂಜುನಾಥ್, ಸಂದೀಪ್, ರಾಜಶೆಟ್ಟಿ, ಗೋವಿಂದೇಗೌಡ, ಕೋಟೆಗೌಡ , ಚಿನ್ನಿಗೌಡ, ನಟರಾಜ್, ಪೃಥ್ವಿ, ಸಂದೇಶ ಕಾರ್ಯಕರ್ತರು ಇದ್ದರು.