

ಮೈಸೂರು: ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ನ್ಯಾಯಾಧಿಕರಣ ಮಾನವೀಯತೆ ಮೆರೆಯಬೇಕಾಗಿತ್ತು ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಕಾವೇರಿ ನದಿ ನೀರು ನಿರ್ವಹಣ ಪ್ರಾಧಿಕಾರ ಮತ್ತು ಸುಪ್ರಿಂಕೋರ್ಟ್ ವಾಸ್ತವ ಪರಿಸ್ಥಿತಿಯನ್ನು ಎರಡೂ ಪ್ರಾಂತಗಳ ಹೊರಗಿನ ತಜ್ಞರ ಮೂಲಕ ಪರಿಶೀಲಿಸಿ, ಜನರ ಬದುಕಿಗೆ ರಕ್ಷಣೆ ಕೊಡಬೇಕು. ತನ್ಮೂಲಕ ಒಕ್ಕೂಟ ವ್ಯವಸ್ಥೆಯಲ್ಲಿ ವಿಶ್ವಾಸ ಉಳಿಯುವಂತೆ ಮಾಡಬೇಕು. ಕಾಯಂ ಸಂಕಷ್ಟ ಸೂತ್ರ ರೂಪಿಸಬೇಕು ಎಂದು ಕನ್ನಡಿಗರ ಪರವಾಗಿ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.
ಕಾವೇರಿ ನದಿ ನೀರಿನ ಹಂಚಿಕೆ ವಿಷಯವಾಗಿ ತಮಿಳುನಾಡು ಮತ್ತು ಕರ್ನಾಟಕದ ನಡುವೆ ಮೊದಲಿನಿಂದಲೂ ಕದನ ನಡೆಯುತ್ತಲೇ ಇತ್ತು. ತಮಿಳುನಾಡು ತನ್ನ ರಾಜಕೀಯ ಚದುರಂಗದಾಟದಿಂದ ಕಾವೇರಿ ನೀರು ನಿರ್ವಹಣ ಪ್ರಾಧಿಕಾರ ಮತ್ತು ಸುಪ್ರಿಂಕೋರ್ಟ್‌ನಿಂದ ತನಗೆ ಬೇಕಾದ ರೀತಿಯಲ್ಲಿ ಆದೇಶಗಳನ್ನು ಪಡೆದುಕೊಳ್ಳುವಲ್ಲಿ ಸದಾ ಯಶಸ್ವಿಯಾಗುತ್ತಲೇ ಇದೆ ಎಂದಿದ್ದಾರೆ.
ನದಿಯ ಮೇಲಿನ ಪಾತ್ರದಲ್ಲಿದ್ದರೂ ಕರ್ನಾಟಕ ಇದರ ಲಾಭವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ವ್ಯವಸಾಯ ಮತ್ತು ಕುಡಿಯುವ ನೀರಿನ ಪ್ರಶ್ನೆ ಬಂದಾಗ ಜೀವನಾಧಾರವಾದ ಕುಡಿಯುವ ನೀರಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು. ಕರ್ನಾಟಕದ ಜನರು ಕುಡಿಯುವ ನೀರಿಗಾಗಿ ಹಾಹಾಕಾರ ಪಡುತ್ತಿರುವಾಗ ತಮಿಳುನಾಡಿಗೆ ಮೂರನೇ ಬೆಳೆ ಕುರುವೈ ಉಳಿಸಿಕೊಳ್ಳುವ ಚಿಂತೆ. ಅದಕ್ಕಾಗಿ ಭೂಮ್ಯಾಕಾಶಗಳನ್ನು ಒಂದು ಮಾಡುವಂಥ ತಮಿಳರ ಗಲಾಟೆಯ ಮುಂದೆ ಕನ್ನಡಿಗರ ಅಳಲು ಕೇವಲ ಅರಣ್ಯರೋದನವಾಗಿದೆ ಎಂದು ವಿಷಾದಿಸಿದ್ದಾರೆ.
ತಮಿಳುನಾಡಿನಲ್ಲಿ ಮುಂಗಾರು ಮಳೆ ಇನ್ನೂ ಬರುವ ಸಂಭವವಿದೆ. ಅಲ್ಲಿಯ ಅಣೆಕಟ್ಟುಗಳೂ ಭರ್ತಿಯಾಗಿವೆ. ಬೆಂಗಳೂರಿನ ಜನರಿಗೆ ಕುಡಿಯುವ ನೀರು ದೊರಕಿಸುವ ಯೋಜನೆಗೆ ತಮಿಳುನಾಡಿನವರು ಸರ್ವ ರೀತಿಯಲ್ಲೂ ಅಡ್ಡಿಪಡಿಸುತ್ತಿರುವುದು ಅವರ ಅಮಾನವೀಯ ಧೋರಣೆಗೆ ಹಿಡಿದ ಕೈಗನ್ನಡಿ. ಕೇಂದ್ರ ಸರ್ಕಾರವೂ ಈ ನಿಟ್ಟಿನಲ್ಲಿ ಅಸಹಾಯಕತೆಯನ್ನೋ, ಉದ್ದೇಶಪೂರ್ವಕ ಮೌನವನ್ನೋ ಆಶ್ರಯಿಸಿರುವುದು ಕನ್ನಡಿಗರ ದುರದೃಷ್ಟವೇ ಸರಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಸರ್ಕಾರ ಇದುವರೆಗೂ ನದಿ ನೀರಿನ ಹಂಚಿಕೆ ವಿಷಯದಲ್ಲಿ ಅತ್ಯಂತ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಲೇ ಇದೆ. ಸಭ್ಯ ರೀತಿಯಲ್ಲಿ ಕಾನೂನಿಗೆ ಗೌರವ ಸಲ್ಲಿಸುತ್ತ ಸುಪ್ರೀಂಕೋರ್ಟ್ ಮತ್ತು ಕಾವೇರಿ ನ್ಯಾಯಾಧಿಕರಣದ ಎಲ್ಲ ಆದೇಶಗಳನ್ನೂ ಪಾಲಿಸುತ್ತಲೇ ಇದೆ. ಜನಾಭಿಪ್ರಾಯದ ಕಡು ವಿರೋಧವಿದ್ದರೂ ಕಾನೂನಾತ್ಮಕ ಆದೇಶಗಳಿಗೆ ಗೌರವ ನೀಡುತ್ತಲೇ ಬಂದಿದೆ. ಆದರೆ ಈ ವರ್ಷ ಒದಗಿರುವ ಘನಘೋರ ಪರಿಸ್ಥಿತಿ ಹಿಂದೆಂದೂ ಬಂದಿರಲಿಲ್ಲ. ಕೊಡಗಿನಲ್ಲಿ ಸಾಕಷ್ಟು ಮಳೆಯಾಗದೆ ಕೆಆರ್‌ಎಸ್‌ನಲ್ಲಿ ನೀರಿನ ಮಟ್ಟ ಸಾರ್ವಕಾಲಿಕ ಕೆಳಮಟ್ಟಕ್ಕೆ ಇಳಿದಿದೆ. ಕೆಲವು ದಿನ ಕಳೆದರೆ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೇ ತತ್ವಾರವಾಗುತ್ತದೆ. ಇಂಥ ಸಂಕಷ್ಟ ಪರಿಸ್ಥಿತಿಯನ್ನು ಕರ್ನಾಟಕ ಹಿಂದೆಂದೂ ಎದುರಿಸಿರಲಿಲ್ಲ ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದ್ದಾರೆ.