

ಕೋಲಾರ/ಶ್ರೀನಿವಾಸಪುರ
ಕೆಸಿ ವ್ಯಾಲಿ ನೀರು ಮೂರನೇ ಹಂತದಲ್ಲಿ ಶುದ್ಧೀಕರಣ ಆಗದಿದ್ದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಕೋಲಾರ ಜಿಲ್ಲೆಯ ಕೆ ಸಿ ವ್ಯಾಲಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಎಚ್.ಎನ್.ವ್ಯಾಲಿ ಯೋಜನೆಯನ್ನು ರದ್ದುಗೊಳಿಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ ಸಮೀಪದ ನಕ್ಕಲಗಡ್ಡದಲ್ಲಿ ಮಂಗಳವಾರ ರಾತ್ರಿ ವಾಸ್ತವ್ಯ ಹೂಡಿ ಬುಧವಾರ ಬೆಳಗ್ಗೆ ಚಿಕ್ಕಬಳ್ಳಾಪುರ ಜಿಲ್ಲೆಗೆ ರಥಯಾತ್ರೆ ಮುಂದುವರಿಸುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದರು.
ಗಡಿ ಕ್ಯಾತೆ ಬಗೆಹರಿಸುವಲ್ಲಿ ಡಬಲ್ ಸರ್ಕಾರ ವಿಲ: ಮಹಾರಾಷ್ಟ್ರ ಗಡಿ ಕ್ಯಾತೆ ಕುರಿತು ಎಚ್ಡಿಕೆ ಆಕ್ರೋಶವ್ಯಕ್ತಪಡಿಸಿ, ಡಬಲ್ ಇಂಜಿನ್ ಸರ್ಕಾರದಿಂದ ಗಡಿವಿವಾದ ಬಗೆ ಹರಿಯುವ ವಿಶ್ವಾಸವಿಲ್ಲ. ಇದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಮ್ಮ ರಾಜ್ಯಕ್ಕೆ ದ್ರೋಹ ಎಸಗುತ್ತಿವೆ. ಡಬಲ್ ಇಂಜಿನ್ ಸರ್ಕಾರಗಳು ನೆಲ, ಜಲ, ಭಾಷೆ ಕಾಪಾಡುವಲ್ಲಿ ವಿಫಲವಾಗಿವೆ ಎಂದು ಎಚ್ಡಿಕೆ ಆರೋಪಿಸಿದರು.
ಕೋಲಾರದಲ್ಲಿ ಕಳೆದ 5 ದಿನಗಳಿಂದ 5 ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದೇನೆ. ಎಲ್ಲ್ಲಕ್ಷೇತ್ರಗಳಲ್ಲೂ ಉತ್ತಮ ಬೆಂಬಲ ವ್ಯಕ್ತವಾಗಿದೆ. 5 ಕ್ಷೇತ್ರಗಳಲ್ಲಿಯೂ 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ಎಂಎಲ್ಸಿ ಇಂಚರ ಗೋವಿಂದರಾಜು, ಮಾಜಿ ಶಾಸಕ ಜೆ.ಕೆ. ವೆಂಕಟಶಿವಾರೆಡ್ಡಿ, ಚಿಂತಾಮಣಿ ಶಾಸಕ ಜಿ.ಕೆ. ಕೃಷ್ಣಾರೆಡ್ಡಿ, ಮಾಜಿ ಎಂಎಲ್ಸಿ ಚೌಡರೆಡ್ಡಿ, ಮುಳಬಾಗಿಲು ಜೆಡಿಎಸ್ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ಇದ್ದರು.
ರಾಯಲ್ಪಾಡು: ಜೆಡಿಎಸ್ ಆಡಳಿತಕ್ಕೆ ಬಂದ 24 ಗಂಟೆಗಳಲ್ಲಿ ಸಿ ಶಕ್ತಿ ಸಂಗಳ ಎಲ್ಲ ಸಾಲವನ್ನು ಮನ್ನಾ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.
ರಾಯಲ್ಪಾಡಿನ ಬಸ್ ನಿಲ್ದಾಣದಲ್ಲಿ ಮಂಗಳವಾರ ಜೆಡಿಎಸ್ನಿಂದ ನಡೆದ ಪಂಚರತ್ನ ಯಾತ್ರೆಯಲ್ಲಿ ಮಾತನಾಡಿದರು.
ಈ ಹಿಂದೆ ಜೆಡಿಎಸ್&ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವು ಬೀಳಲು ಸಿದ್ದರಾಮಯ್ಯ ಹಾಗೂ ರಮೇಶ್ಕುಮಾರ್ ಅವರೇ ನೇರ ಹೊಣೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಲು ರಮೇಶ್ಕುಮಾರ್ ಅವರೇ ಕಾರಣ ಎಂದು ಆರೋಪಿಸಿದರು.
ಪಂಚರತ್ನ ಯಾತ್ರೆಯ ಮುಖಾಂತರ ನೂರು ದಿನಗಳ ಕಾಲ ಇಡಿ ರಾಜ್ಯದ 22 ಜಿಲ್ಲೆಯಲ್ಲಿ ಪ್ರವಾಸ ಮಾಡಿ ದಿನಕ್ಕೆ 65 ರಿಂದ 70 ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದೇನೆ. ನನ್ನ ಆರೋಗ್ಯಕಿಂತ ನಾಡಿನ ಜನರ ಬದುಕು ಮುಖ್ಯ. ಈ ಹಿನ್ನೆಲೆಯಲ್ಲಿ ಶ್ರಮ ಪಡುತ್ತಿದ್ದೇನೆ ಎಂದರು. ಜೆಡಿಎಸ್ ಆಡಳಿತಕ್ಕೆ ಬಂದರೆ ಕೊಳಚೆ ನೀರಿನ ಯೋಜನೆಯಲ್ಲಿ ನಿಲ್ಲಿಸಿ, ಎತ್ತಿನ ಹೊಳೆ ನೀರನ್ನು ಜಿಲ್ಲೆಗೆ ಹರಿಸುವುದಾಗಿ ಭರವಸೆ ನೀಡಿದರು.
ಪಂಚರತ್ನ ಯೋಜನೆಗಳಾದ ಶಿಕ್ಷಣವೇ ಆಧುನಿಕ ಶಕ್ತಿ, ರೈತ ಚೈತನ್ಯ, ಯುವಜನ ಮಾರ್ಗ ಮತ್ತು ಮಹಿಳಾ ಸಬಲೀಕರಣ, ಆರೋಗ್ಯವೇ ಸಂಪತ್ತು, ವಸತಿಯ ಆಸರೆ ಯೋಜನೆಗಳ ಮೂಲಕ ರಾಜ್ಯದ ಜನತೆ ಸೇವೆ ಸಲ್ಲಿಸುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಗೌನಿಪಲ್ಲಿ , ಅಡ್ಡಗಲ್ನಲ್ಲಿ ಪಂಚರತ್ನ ಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಜಿ.ಪಂ.ಮಾಜಿ ಅಧ್ಯಕ್ಷ ತೂಪಲ್ಲಿ ಆರ್. ನಾರಾಯಣಸ್ವಾಮಿ, ಮುಖಂಡರಾದ ಸಿಎಂಆರ್ ಶ್ರೀನಾಥ್, ಸಮೃದ್ಧಿ ಮಂಜುನಾಥ್, ಬಿ.ವಿ. ಶಿವಾರೆಡ್ಡಿ, ಕೆ.ವಿ. ಶಿವಾರೆಡ್ಡಿ ಹಾಗೂ ಕಾರ್ಯಕರ್ತರು ಇದ್ದರು.