

ಕೆ.ಆರ್.ಪೇಟೆ: ಕೇಂದ್ರ ಸರ್ಕಾರದ ಅಮೃತ್-2 ಯೋಜನೆಯಡಿ ಸುಮಾರು 33.69 ಕೋಟಿ ರೂ. ವೆಚ್ಚದ ಸಮಗ್ರ ನೀರು ಪೂರೈಕೆ ಯೋಜನೆ ಕಾಮಗಾರಿ ಆರಂಭಕ್ಕೆ ಪುರಸಭೆ ಅನುಮೋದನೆ ನೀಡಿತು.
ಅಧ್ಯಕ್ಷೆ ಮಹಾದೇವಿ ನಂಜುಂಡ ಅಧ್ಯಕ್ಷತೆಯಲ್ಲಿ ನಡೆದ ಪುರಸಭೆಯ ತುರ್ತುಸಭೆಯಲ್ಲಿ ಅನುಮೋದನೆ ನೀಡಲಾಯಿತು.
1 ಲಕ್ಷ ಜನಸಂಖ್ಯೆಗಿಂತ ಕಡಿಮೆಯಿರುವ ಪಟ್ಟಣಗಳ ಕುಡಿಯುವ ನೀರಿನ ಸಮಸ್ಯೆಯ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ರೂಪಿಸಿರುವ ಯೋಜನೆಯಾಗಿದೆ. ಕೇಂದ್ರ ಸರ್ಕಾರ ಶೇ.50, ರಾಜ್ಯ ಸರ್ಕಾರ ಶೇ. 40 ಮತ್ತು ಯೋಜನೆಯ ಲಾಭ ಪಡೆಯಲಿರುವ ಸ್ಥಳೀಯ ಸಂಸ್ಥೆಗಳು ಶೇ.10ರಷ್ಟು ವೆಚ್ಚ ಭರಿಸಬೇಕಾಗುತ್ತದೆ. ಪಟ್ಟಣಕ್ಕೆ ನಿತ್ಯ 75 ಲಕ್ಷ ಲೀಟರ್ ನೀರಿನ ಅಗತ್ಯವಿದೆ. ಸದ್ಯ 7.5 ಎಂಎಲ್‌ಡಿ ಸಾಮರ್ಥ್ಯದ ನೀರು ಪೂರೈಕೆ ಘಟಕವಿದ್ದರೂ ಹಳೆಯ ಕಾಲದ ಪೈಪ್‌ಲೈನ್‌ಗಳಿಂದಾಗಿ 3 ಎಂಎಲ್‌ಡಿ ನೀರು ಸರಬರಾಜಾಗುತ್ತಿದೆ. ಹೆಚ್ಚಿನ ಪ್ರಮಾಣದ ನೀರು ಸರಬರಾಜು ತಡೆಯುವ ಸಾಮರ್ಥ್ಯ ಹಳೆಯ ಪೈಪ್‌ಲೈನ್ ಗಳಿಗಿಲ್ಲದಿರುವುದರಿಂದ ಹೊಸ ಯೋಜನೆಯಡಿ ಹೊಸದಾಗಿ ಪೈಪ್‌ಲೈನ್ ಮಾಡಬೇಕಾಗಿದೆ. ಸುಮಾರು 74 ಕಿಮೀ ಉದ್ದದ ಹೊಸ ಪೈಪ್‌ಲೈನ್ ಮಾಡಬೇಕಾಗಿದೆ. ಗೃಹಸಂಪರ್ಕ ನೀರು ಸರಬರಾಜು ಜಾಲವನ್ನು ಸರಿಪಡಿಸಿ ಪ್ರತಿ ಮನೆಗೂ ಮೀಟರ್ ಅಳವಡಿಸಲಾಗುವುದು. ಟೆಂಡರ್ ಆದ 18 ತಿಂಗಳೊಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಇಂಜಿನಿಯರ್ ಗುರುರಾಜ್ ಯೋಜನೆಯ ಮಾಹಿತಿ ನೀಡಿದರು.
ರಸ್ತೆ ಕಾಮಗಾರಿ ಮಾಡಬೇಡಿ: ಪಟ್ಟಣದ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಯೋಜನೆಯಡಿ 3 ಕೋಟಿ ಮತ್ತು ನಗರೋತ್ಥಾನ ಯೋಜನೆಯಡಿ 3.80 ಕೋಟಿ ರೂ. ಅನುದಾನ ಬಂದಿದೆ. ಅನುದಾನ ಬಳಸಿ ರಸ್ತೆ ಅಭಿವೃದ್ಧಿಪಡಿಸಿದರೆ ಅಮೃತ್2 ಯೋಜನೆಗಾಗಿ ಹೊಸ ಪೈಪ್‌ಲೈನ್ ಮಾಡಲು ರಸ್ತೆಗಳನ್ನು ಅಗೆಯ ಬೇಕಾಗುತ್ತದೆ. ಇದರಿಂದಾಗಿ ಹೊಸದಾಗಿ ನಿರ್ಮಿಸಿದ ರಸ್ತೆಗಳು ಮತ್ತೆ ಹಾಳಾಗಿ ಕೋಟ್ಯಂತರ ರೂ. ಪೋಲಾಗುತ್ತದೆ. ಆದ ಕಾರಣ ಹೊಸ ಪೈಪ್‌ಲೈನ್ ಕಾಮಗಾರಿ ಮುಗಿಯುವವರೆಗೂ ಹೊಸದಾಗಿ ಯಾವುದೇ ರಸ್ತೆಗಳನ್ನು ಅಭಿವೃದ್ಧಿ ಮಾಡಬಾರದೆಂದು ಸದಸ್ಯರು ಸೂಚಿಸಿದರು.
ಅನುದಾನ ತಾರತಮ್ಯ: ಅನುದಾನ ನೀಡಿಕೆಯಲ್ಲಿ ಪುರಸಭೆ ಪಕ್ಷ ರಾಜಕಾರಣ ಮಾಡುತ್ತಿದೆ. ಆಡಳಿತ ಪಕ್ಷದ ವಾರ್ಡ್‌ಗಳ ಅಭಿವೃದ್ಧಿಗೆ 20 ಲಕ್ಷ ರೂ. ಅನುದಾನ ನೀಡಿದರೆ ಕಾಂಗ್ರೆಸ್ ಪಕ್ಷದ ಸದಸ್ಯರ ವಾರ್ಡ್‌ಗಳಿಗೆ 4 ಲಕ್ಷ ರೂ. ನೀಡಲಾಗಿದೆ. ಪಟ್ಟಣದ 4ನೇ ವಾರ್ಡ್ ಮತ್ತು 19ನೇ ವಾರ್ಡ್‌ನ ಅಭಿವೃದ್ಧಿಗೆ ಒಂದೇ ಒಂದು ಪೈಸೆ ಅನುದಾನ ನೀಡಿಲ್ಲ. ಈ ವಾರ್ಡ್‌ಗಳ ಜನರ ಹಿತ ಪುರಸಭೆಗೆ ಬೇಕಿಲ್ಲವೆ? ತಕ್ಷಣ ಅನುದಾನ ಹಂಚಿಕೆಯ ತಾರತಮ್ಯ ರಾಜಕಾರಣವನ್ನು ನಿಲ್ಲಿಸಿ ಎಂದು ಕೆ.ಬಿ. ಮಹೇಶ್ ಆಕ್ರೋಶ ವ್ಯಕ್ತಪಡಿಸಿದರು.
ತಾವು ಪ್ರತಿನಿಧಿಸುವ ಹೊಸಹೊಳಲಿನ 4ನೇ ವಾರ್ಡ್‌ನ ಅನುದಾನವನ್ನು ಪುರಸಭಾ ವ್ಯಾಪ್ತಿಗೆ ಸೇರದೆ ಹರಿಹರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಂಗಮ್ಮ ದೇವಾಲಯದ ಸಮೀಪದ ಅಭಿವೃದ್ಧಿಗೆ ಬಳಕೆ ಮಾಡಲಾಗಿದೆ. ಸಿಂಗಮ್ಮ ದೇವಾಲಯದ ಬಳಿಯಿರುವ ಸಮುದಾಯ ಭವನದ ಮಾಲೀಕನಿಗೆ ಅನುಕೂಲ ಮಾಡಿಕೊಡಲು ಪುರಸಭೆಯ ಅನುದಾನವನ್ನು ದುರ್ಬಳಕೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಕೆ.ಬಿ. ಮಹೇಶ್ ಪುರಸಭೆಯ ಅನುದಾನವನ್ನು ಪುರಸಭೆಯ ಅಭಿವೃದ್ಧಿಗೆ ಬಳಕೆ ಮಾಡುವಂತೆ ಒತ್ತಾಯಿಸಿದರು.
ರಸ್ತೆ ನಿರ್ಮಾಣದ ಹೆಸರಿನಲ್ಲಿ ಪುರಸಭೆಯ 23ನೇ ವಾರ್ಡ್‌ನಲ್ಲಿ ರಸ್ತೆಗೆ ಜಲ್ಲಿ ಸುರಿದು ಎರಡು ತಿಂಗಳಾಗಿದೆ. ಇದರಿಂದ ಜನ ಸಂಚಾರಕ್ಕೆ ಅಡ್ಡಿಯಾಗಿದೆ. ತಕ್ಷಣವೇ ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಎಂದು ಎಚ್.ಡಿ. ಅಶೋಕ್ ಒತ್ತಾಯಿಸಿದರು.
ಪುರಸಭೆಯ ಉಪಾಧ್ಯಕ್ಷೆ ಗಾಯತ್ರಿ, ಮುಖ್ಯಾಧಿಕಾರಿ ಬಸವರಾಜು, ಸದಸ್ಯರಾದ ಕೆ.ಸಿ. ಮಂಜುನಾಥ್, ಡಿ.ಪ್ರೇಮ್‌ಕುಮಾರ್, ಎಚ್.ಎನ್. ಪ್ರವೀಣ್, ಕೆ.ಬಿ. ಮಹೇಶ್, ಎಚ್.ಆರ್. ಲೋಕೇಶ್, ಗಿರೀಶ್, ಪ್ರಮೋದ್ ಕುಮಾರ್, ಯೋಗೀಶ್, ಸುಗುಣ ರಮೇಶ್, ಖಮರುಲ್ಲಾ ಬೇಗಂ ಸಲ್ಲು, ಶುಭಾ, ಪದ್ಮಾ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದ್ದರು.