ಸ್ವಚ್ಛತೆಗಿಳಿದ ಸಂಸದ ಮುನಿಸ್ವಾಮಿ

30 Srinivaspur 1a
Published on

ಶ್ರೀನಿವಾಸಪುರ: ನಮ್ಮ ಪೂರ್ವಜರು ಸಂರಕ್ಷಿಸಿಕೊಂಡು ಬಂದಿರುವ ನೀರಿನ ಮೂಲಗಳಾದ ಕೆರೆ-ಕುಂಟೆ, ಕಲ್ಯಾಣಿ ಸಂರಕ್ಷಿಸಿ ಮುಂದಿನ ಪೀಳಿಗೆಯವರಿಗೆ ನೀರಿನ ಅಭಾವವಾಗದಂತೆ ನೋಡಿಕೊಳ್ಳಬೇಕು ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.

ಶ್ರೀನಿವಾಸಪುರ ತಾಲೂಕಿನ ಯಲ್ದೂರು ಗ್ರಾಮದಲ್ಲಿರುವ ದೊಡ್ಡಕುಂಟೆ ಕಲ್ಯಾಣಿ ಪುನಶ್ಚೇತನಗೊಳಿಸಿ ಯಾತ್ರಸ್ಥಳವಾಗಿ ಪರಿರ್ವತಿಸಲು ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಬರಡು ಜಿಲ್ಲೆಯಾಗಿರುವ ಕೋಲಾರದಲ್ಲಿ ನೀರಿನ ಅಭಾವ ಹೆಚ್ಚಾಗುತ್ತಿದೆ. ಸಾವಿರ ಅಡಿ ಬೋರ್‌ವೆಲ್ ಕೊರೆಸಿದರೂ ನೀರು ಸಿಗುವುದು ಕಷ್ಟವಾಗುತ್ತಿದೆ. ನಾವೆಲ್ಲರೂ ನಮ್ಮ ಗ್ರಾಮಗಳಲ್ಲಿರುವ ನೀರಿನ ಮೂಲವನ್ನು ಜೋಪಾನವಾಗಿಸಬೇಕು ಮತ್ತು ಹಿಂದಿನ ಕಾಲದ ಜಲಮೂಲ ಸ್ವಚ್ಛ ಭಾರತ ಯೋಜನೆಯಡಿ ಸ್ವಚ್ಛತೆ ಮಾಡಿ ಸಂರಕ್ಷಿಸಬೇಕು ಎಂದರು.

ಕಲ್ಯಾಣಿ ಸ್ವಚ್ಛತೆಗಾಗಿ ಬುಧವಾರ ಬೆಳಗ್ಗೆ ಬೆಂಗಳೂರಿನ ಹಲಸೂರಿನ ಮಿಲಿಟರಿ ಕ್ಯಾಂಪಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಜತೆ ಯಲ್ದೂರು ಗ್ರಾಮದ ಯುವಕರ ಗುಂಪು ತೊಡಗಿಸಿಕೊಂಡಿದೆ. ಎರಡು ದಿನ ಯಲ್ದೂರಿನಲ್ಲೇ ಇದ್ದು ಸ್ವಚ್ಛತಾ ಕಾರ್ಯ ಪೂರ್ಣಗೊಳಿಸಲಾಗುವುದು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ ಮಾತನಾಡಿ, ಜಿಲ್ಲಾ ಬಿಜೆಪಿ ಕಾರ್ಯಕರ್ತರಿಂದ ಹಾಗೂ ಗ್ರಾಮದ ನಾಗರಿಕರ ಸಹಯೋಗದಿಂದ ಕಲ್ಯಾಣಿ ಸ್ವಚ್ಛತೆ ಕೈಗೊಂಡಿದ್ದು, ಜಿಲ್ಲೆಯ ಎಲ್ಲ ಕಲ್ಯಾಣಿಗಳನ್ನು ಹಂತ-ಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದರು. ತಹಸೀಲ್ದಾರ್ ಶ್ರೀನಿವಾಸ್, ಇಒ ಎಸ್. ಆನಂದ್, ಪೊಲೀಸ್ ವೃತ್ತ ನಿರೀಕ್ಷಕ ರವಿಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿ.ಎಲ್.ಚಿನ್ನಪ್ಪ, ಕಾರ್ಯದರ್ಶಿ ಪಿ.ಎನ್. ಮುರಳಿಮೋಹನ್, ಬಿಜೆಪಿ ಮುಖಂಡರಾದ ಅಪ್ಪಿ ನಾರಾಯಣಸ್ವಾಮಿ, ಬಾಲಾಜಿ, ರಮೇಶ್, ರೋಟರಿ ಎಸ್.ಶಿವಮೂರ್ತಿ, ವಕೀಲ ಬಂಗವಾದಿ ಕೆ. ನಾಗರಾಜ್, ಶ್ಯಾಗತ್ತೂರು ನಾರಾಯಣಸ್ವಾಮಿ ಇತರರಿದ್ದರು.

ಕರೊನಾ ಕಷ್ಟಕಾಲದಲ್ಲಿ ಕರೊನಾ ಸೋಂಕಿತರ ನೆರವಿಗೆ ನಿಂತಿದ್ದ ಸಂಸದ ಮುನಿಸ್ವಾಮಿ, ಬುಧವಾರ ಯಲ್ದೂರು ದೊಡ್ಡ ಕಲ್ಯಾಣಿ ಸ್ವಚ್ಛತಾ ಕಾರ್ಯದಲ್ಲಿ ಗ್ರಾಮಸ್ಥರೊಂದಿಗೆ ಇಡೀ ದಿನ ಭಾಗವಹಿಸಿ ಅಧಿಕಾರಿಗಳಿಗೆ ಮತ್ತು ಯುವಕರ ಗುಂಪಿಗೆ ಸ್ಫೂರ್ತಿ ತುಂಬಿದರು. ಕಲ್ಯಾಣಿ ಸ್ವಚ್ಛವಾದ ನಂತರ ಸುತ್ತ ಬೇಲಿ ಹಾಕಿ ವಾಕಿಂಗ್ ಪಾಥ್ ನಿರ್ಮಿಸಿ ಪರಿಸರ ಪ್ರೇಮಿಗಳಿಗೆ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net