ನಿಷೇಧದ ನಡುವೆಯೂ ಕೋಣ ಬಲಿ?

IMG_20200304_121334.jpg
Published on
ದಾವಣಗೆರೆ : ಮಧ್ಯ ಕರ್ನಾಟಕದಲ್ಲಿ ಪ್ರಸಿದ್ಧವಾದ ದಾವಣಗೆರೆ ನಗರದೇವತೆ ದುರ್ಗಾಂಬಿಕಾ ದೇವಿಯ ಜಾತ್ರೆಯು ಬುಧವಾರ ಶ್ರದ್ಧಾಭಕ್ತಿಯಿಂದ ನೆರವೇರಿದ್ದು, ನಿಷೇಧದ ನಡುವೆಯೂ ಕೋಣ ಬಲಿ ನಡೆದಿದೆ ಎನ್ನಲಾಗಿದೆ. ಕೋಣಬಲಿ ತಡೆಗಟ್ಟಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿತ್ತು. ಪ್ರಾಣಿಬಲಿ ನೀಡಿದರೆ ಶಿಸ್ತುಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ಕೊಡಲಾಗಿತ್ತು. ಅದರ ನಡುವೆಯೂ ಬುಧವಾರ ಬೆಳಗಿನ ಜಾವ ಕೋಣಬಲಿ ನೀಡಲಾಯಿತು ಎಂದು ತಿಳಿದು ಬಂದಿದೆ. ದೇವಸ್ಥಾನದ ಸುತ್ತಮುತ್ತ ಪ್ರಾಣಿಬಲಿ ನಡೆದಿಲ್ಲ, ಆದರೆ ದೂರದ ಪ್ರದೇಶದಲ್ಲಿ ಬಲಿ ನೀಡಲಾಯಿತು ಎಂಬ ಮಾತು ಕೇಳಿಬಂದಿದೆ. ಆದರೆ ಅಧಿಕಾರಿಗಳ ಪ್ರಕಾರ ಸಾಂಕೇತಿಕವಾಗಿ ಸಿರಿಂಜ್ ಬಳಸಿ ಕೋಣದ ರಕ್ತವನ್ನು ಪಡೆದು ಸಂಪ್ರದಾಯದಂತೆ ಚರಗದಲ್ಲಿ ಮಿಶ್ರಣ ಮಾಡಲಾಯಿತು. ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಎಸ್ಪಿ ಹನಮಂತರಾಯ, ತಹಸೀಲ್ದಾರ್ ಸಂತೋಷ್‌ಕುಮಾರ್, ಪಶುವೈದ್ಯಾಧಿಕಾರಿಗಳು ಹಾಗೂ ಧರ್ಮದರ್ಶಿ ಗೌಡ್ರ ಚನ್ನಬಸಪ್ಪ ಇನ್ನಿತರ ಮುಖಂಡರು ಹಾಜರಿದ್ದರು. ಜಾತ್ರೆಯ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ 7ರಿಂದ 8 ಕೋಣಗಳನ್ನು ಬಲಿ ನೀಡಲಾಯಿತು ಎನ್ನಲಾಗಿದೆ. ಅಂದಾಜು 30 ಸಾವಿರಕ್ಕೂ ಹೆಚ್ಚು ಕುರಿಗಳು, ಸಾವಿರಾರು ಕೋಳಿಗಳನ್ನು ಬಲಿ ಕೊಡಲಾಯಿತು ಎಂದು ತಿಳಿದುಬಂದಿದೆ. ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಜಾತ್ರೆಗೆ ಸುತ್ತಮುತ್ತಲಿನ ಜಿಲ್ಲೆಗಳಿಂದಲೂ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು. ಹರಕೆ ಹೊತ್ತಿದ್ದ ಮಹಿಳೆಯರು, ಮಕ್ಕಳು ಬೇವಿನುಡುಗೆ ಸೇವೆ ಸಲ್ಲಿಸಿದರು. ದೀರ್ಘದಂಡ ನಮಸ್ಕಾರ ಮಾಡಿದರು. ಜಗಳೂರು ಶಾಸಕ ಎಸ್.ವಿ. ರಾಮಚಂದ್ರ ದೇವಿಗೆ ಉರುಳುಸೇವೆ ಸಲ್ಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net