

ಹುಣಸೂರು: ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದ ಲಕ್ಷ್ಮಣತೀರ್ಥ ನದಿ ದಂಡೆಯ ಪಕ್ಕದಲ್ಲಿ ವಾಸವಿರುವ 20ಕ್ಕೂ ಹೆಚ್ಚು ನಿರ್ಗತಿಕ ಕುಟುಂಬಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಿ.ಕೆ.ಮನು ಹೇಳಿದರು.
ನಿರ್ಗತಿಕ ಕುಟುಂಬಗಳನ್ನು ಬುಧವಾರ ಭೇಟಿ ಮಾಡಿ ಮಾತನಾಡಿ, 7 ಹಾವಾಡಿಗ ಕುಟುಂಬಗಳು ಮತ್ತು 15ಕ್ಕೂ ಹೆಚ್ಚು ಬುಂಡೆಬೆಸ್ತ(ಅಲೆಮಾರಿ) ಕುಟುಂಬಗಳು ವಾಸವಿದ್ದು, ನದಿ ದಂಡೆಯಲ್ಲಿ ಮೀನು ಹಿಡಿದು ಮಾರಾಟ ಮಾಡಿ ಜೀವನ ನಡೆಸುತ್ತಿದ್ದಾರೆ. ಈ ಕುಟುಂಬಗಳಿಗೆ ಮೂಲಸೌಕರ್ಯ ಕಲ್ಪಿಸಲು ಜಿಲ್ಲಾಧಿಕಾರಿ ನಿರ್ದೇಶನದಂತೆ ಭೇಟಿ ನೀಡಿರುವುದಾಗಿ ತಿಳಿಸಿದ ಅವರು, ಈ ಎಲ್ಲ ಕುಟುಂಬಗಳಿಗೂ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವುದಾಗಿ ತಿಳಿಸಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ ಮಾತನಾಡಿ, ನಿರ್ಗತಿಕ ಕುಟುಂಬಗಳ ಬವಣೆ ಕುರಿತು ಸಮಿತಿ ಸತತ ಹೋರಾಟ ನಡೆಸಿದೆ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಅವರಿಗೆ ಮನವಿ ಸಲ್ಲಿಸಿ ಈ ಬಡಜನರ ಬವಣೆ ಕುರಿತು ಮಾಹಿತಿ ನೀಡಿದ ಪರಿಣಾಮ ಕೂಡಲೇ ಸ್ಪಂದಿಸಿ ಅಧೀನ ಅಧಿಕಾರಿಗಳನ್ನು ಸ್ಥಳ ಪರಿಶೀಲನೆಗೆ ಕಳುಹಿಸಿದ್ದಾರೆ. ಎಲ್ಲ ಕುಟುಂಬಗಳಿಗೆ ಮೂಲಸೌಕರ್ಯ ಕಲ್ಪಿಸಬೇಕೆಂದು ಅವರು ಒತ್ತಾಯಿಸಿದರು.
ಕಟ್ಟೆಮಳಲವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಿನ್ನಮುತ್ತು ಪುಟ್ಟರಾಜು, ತಾ.ಪಂ.ಯೋಜನಾಧಿಕಾರಿ ರಾಜೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮೀ, ಕಾರ್ಯದರ್ಶಿ ಕುಮಾರ್, ಅಲೆಮಾರಿ ಮುಖಂಡರಾದ ರವಿ, ಕುಮಾರ, ಮಂಜಪ್ಪ ಇತರರು ಇದ್ದರು.