ನಿರುದ್ಯೋಗ ನಿವಾರಣೆಗೆ ಕೇಂದ್ರ ಸಂಕಲ್ಪ

3
Published on

ಮೈಸೂರು: ದೇಶದ ಯುವಜನರಿಗೆ ಉದ್ಯೋಗ ಕಲ್ಪಿಸುವ ಮೂಲಕ ನಿರುದ್ಯೋಗ ನಿವಾರಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ನಗರದ ಮಾನಸಗಂಗೋತ್ರಿಯ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಜ್ಞಾನ ಉದ್ಯಾನ ಸಭಾಂಗಣದಲ್ಲಿ ಮಂಗಳವಾರ ಗೃಹ ಸಚಿವಾಲಯ, ರೈಲ್ವೆ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಮತ್ತು ಸಂಪರ್ಕ ಲೆಕ್ಕ ನಿಯಂತ್ರಕರ ಸಹಯೋಗದಲ್ಲಿ ಭಾರತೀಯ ಅಂಚೆ ಇಲಾಖೆಯಿಂದ ಆಯೋಜಿಸಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲವೆಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರದಿಂದ ಉದ್ಯೋಗ ನೀಡುತ್ತಿರುವುದನ್ನು ಜನರಿಗೆ ಮನವರಿಕೆ ಮಾಡಿಕೊಡಲು ಉದ್ಯೋಗ ಮೇಳ ನಡೆಸಲಾಗುತ್ತಿದೆ. ಕೇಂದ್ರದ ಎಲ್ಲ ಇಲಾಖೆಗಳೂ ಸ್ಪರ್ಧಾತ್ಮಕವಾಗಿ ಕೆಲಸ ಮಾಡಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪವಾಗಿದೆ ಎಂದು ಹೇಳಿದರು.
ಮುಂದಿನ 25 ವರ್ಷಗಳಲ್ಲಿ ಭಾರತ ಹೇಗಿರಬೇಕು ಎನ್ನುವ ಬಗ್ಗೆ ಪ್ರಧಾನಿ ಮೋದಿ ಅವರು ಚಿಂತನೆ ನಡೆಸಿದ್ದಾರೆ. ಭಾರತ ಸ್ವಾತಂತ್ರೊೃೀತ್ಸವ ಶತಮಾನೋತ್ಸವ ಸಂಭ್ರಮಾಚರಣೆ ಹೊತ್ತಲ್ಲಿ ವಿಶ್ವದಲ್ಲೇ ದೇಶ ಒಂದನೇ ಅಥವಾ ಎರಡನೇ ಸ್ಥಾನದಲ್ಲಿರುವಂತೆ ಮಾಡಲಾಗುವುದು ಎಂದು ತಿಳಿಸಿದರು.
ಕಳೆದ ಅಕ್ಟೋಬರ್‌ನಲ್ಲಿ ನಡೆದ ಉದ್ಯೋಗ ಮೇಳದಲ್ಲಿ 3.59 ಲಕ್ಷ ಯುವಜನರಿಗೆ ಉದ್ಯೋಗ ನೀಡಲಾಗಿದೆ. ಮತ್ತೆ 9 ತಿಂಗಳಲ್ಲೇ 71 ಸಾವಿರ ಮಂದಿಗೆ ಉದ್ಯೋಗ ನೀಡಲಾಗುತ್ತಿದೆ. ಮೊದಲು ಅಂಚೆ ಇಲಾಖೆ ಪತ್ರ ವ್ಯವಹಾರಕ್ಕೆ ಸೀಮಿತವಾಗಿತ್ತು. ಆದರೆ, ಇದೀಗ ನೇರ ನಗದು ಪಾವತಿ ಸೇರಿದಂತೆ ಇನ್ನಿತರ ಹಣಕಾಸಿನ ವ್ಯವಹಾರಗಳು ನಡೆಯುತ್ತಿರುವುದರಿಂದ ಅಂಚೆ ಇಲಾಖೆಯಲ್ಲಿ ಹುದ್ದೆಗಳಿಗೆ ಬೇಡಿಕೆ ಬಂದಿದೆ. ಸ್ಟಾರ್ಟ್‌ಅಪ್ ಇಂಡಿಯಾ ಬಂದ ಮೇಲೂ ಉದ್ಯೋಗ ಸಿಗುವಂತಾಗಿದೆ. ಮುಂದೆ ಎಂಎಸ್‌ಎಂಇನಲ್ಲಿ ಉದ್ಯೋಗ ಸಿಗುವಂತೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ಉಚಿತ ಕೊಡುಗೆಯಿಂದ ಹಿಂಜರಿತ:
ಸಂಸದ ಪ್ರತಾಪಸಿಂಹ ಮಾತನಾಡಿ, ಉಚಿತ ಕೊಡುಗೆಗಳು ವಿಶ್ವದಲ್ಲಿ ವೇಗವಾಗಿ ಮುನ್ನುಗ್ಗುತ್ತಿರುವ ದೇಶದ ಆರ್ಥಿಕತೆಗೆ ಹಿಂಜರಿಕೆಯಾಗುವ ಸಾಧ್ಯತೆ ಇದೆ. 9 ವರ್ಷಗಳಿಂದ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲಾಗಿದ್ದು, ಅಭಿವೃದ್ಧಿಗೆ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ ಎಂದರು.
ದೇಶದಲ್ಲಿ ಈಗ ನವೋದ್ಯಮಗಳು ಸ್ಥಾಪನೆಯಾಗುತ್ತಿವೆ. ಯುವ ಸಮುದಾಯವೇ ಉದ್ಯಮಿಗಳಾಗಿ ಉದ್ಯೋಗ ಸೃಷ್ಟಿಸುತ್ತಿದ್ದಾರೆ. ಶಿಕ್ಷಣದ ನಂತರ ಉದ್ಯೋಗ ಪಡೆಯುವುದು ಪ್ರತಿಯೊಬ್ಬರ ಗುರಿಯಾಗಿರುತ್ತದೆ. ಸ್ಪರ್ಧೆ ಹಾಗೂ ಆಕಾಂಕ್ಷಿಗಳು ಹೆಚ್ಚಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲರಿಗೂ ಉದ್ಯೋಗ ಕಲ್ಪಿಸುವ, ಸ್ವಾವಲಂಬಿಯಾಗಿ ಬದುಕುವ ವಾತಾವರಣ ನಿರ್ಮಿಸಿದ್ದಾರೆ ಎಂದರು.
ಆಯಿಷ್ ನಿರ್ದೇಶಕಿ ಡಾ.ಎಂ.ಪುಷ್ಪಾವತಿ, ನೈರುತ್ಯ ರೈಲ್ವೆ ಮೈಸೂರು ವಿಭಾಗೀಯ ವ್ಯವಸ್ಥಾಪಕಿ ಶಿಲ್ಪಿ ಅಗರವಾಲ್, ಅಂಚೆ ಇಲಾಖೆ ದಕ್ಷಿಣ ಕರ್ನಾಟಕ ಪ್ರಾದೇಶಿಕ ನಿರ್ದೇಶಕ ಟಿ.ಎಸ್.ಅಶ್ವತ್ಥನಾರಾಯಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net