

ಚಿತ್ರದುರ್ಗ: ಮೇಲ್ನೋಟಕ್ಕೆ ಮಾನಸಿಕ ಅಸ್ವಸ್ಥನೆಂದು ಜನ ಭಾವಿಸಿದ್ದ, ವಿವಿಧ ವೇಷ ಧರಿಸಿ ತಲೆಮರೆಸಿಕೊಂಡು ಸಂಚರಿಸುತ್ತಿದ್ದ, ಕೊನೆಗೆ ತಾಲೂಕಿನ ಗೋನೂರಿನ ನಿರಾಶ್ರಿತರ ಕೇಂದ್ರದಲ್ಲಿ ತಂಗಿದ್ದ ಅನ್ಯ ರಾಜ್ಯದ ರೌಡಿಶೀಟರ್ ಒಬ್ಬನನ್ನು ಹೈದರಾಬಾದ್ ಪೊಲೀಸರಿಗೆ ಶುಕ್ರವಾರ ಒಪ್ಪಿಸಲಾಗಿದೆ.
2018ರಲ್ಲಿ ಅತ್ಯಾಚಾರ, ಕೊಲೆ ಯತ್ನ ಸೇರಿ ಮೂರು ಪ್ರಕರಣ ಈ ರೌಡಿಶೀಟರ್‌ನ ಮೇಲಿದ್ದು, ತೆಲಂಗಾಣ ರಾಜ್ಯದ ಹೈದರಾಬಾದ್‌ನ ರಾಜೇಂದ್ರನಗರದ ವಂಶಿ (ಪ್ಯಾರ‌್ಲಾ ವಂಶಿ) ಎಂದು ತಿಳಿದುಬಂದಿದೆ.
ರಂಗಾರೆಡ್ಡಿ ಜಿಲ್ಲೆಯ ಎಲ್.ಬಿ.ನಗರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ಹೆಚ್ಚುವರಿ ಮೆಟ್ರೊಪಾಲಿಟಿಯನ್ ಸೆಷನ್ಸ್ ನ್ಯಾಯಾಲಯ 2024ರ ಮಾ. 13ರೊಳಗೆ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರು ಪಡಿಸುವಂತೆ ಆದೇಶಿಸಿದೆ ಎಂಬ ಮಾಹಿತಿ ಇದೆ.
ಘಟನೆ ವಿವರ: ಪ್ರಕರಣ ಸಂಬಂಧ ಒಂದೂವರೆ ವರ್ಷ ಹೈದರಾಬಾದ್‌ನ ಜೈಲಿನಲ್ಲಿದ್ದು, ಆರೋಪಿಯ ಅಜ್ಜ ಜಾಮೀನು ನೀಡಿದ್ದರಿಂದ ಆ ಆಧಾರದ ಮೇಲೆ ಬಿಡುಗಡೆಯಾಗಿದ್ದ. ಒಂದು ತಿಂಗಳು ಕುಟುಂಬದವರೊಂದಿಗೆ ಇದ್ದ. ನಂತರ ಮನೆ ಬಿಟ್ಟು ಬಂದಿದ್ದ.
ಭಿಕ್ಷೆ ಬೇಡುತ್ತಿದ್ದ: ಸತತ 2 ವರ್ಷ ಬಾಗೇಪಲ್ಲಿ ಟೋಲ್‌ನಲ್ಲಿ ತೃತೀಯ ಲಿಂಗಿಗಳ ಜತೆ ಪಂಜಾಬಿ ವೇಷ ಧರಿಸಿ ಭಿಕ್ಷೆ ಬೇಡುತ್ತಿದ್ದ. ದಿನಕ್ಕೆ 3 ರಿಂದ 4ಸಾವಿರ ರೂ. ಸಂಗ್ರಹಿಸಿ, ಭಿಕ್ಷೆ ಉಸ್ತುವಾರಿಯ ಮುಖ್ಯಸ್ಥನಿಗೆ ಕೊಡುತ್ತಿದ್ದ ಎಂಬ ಮಾಹಿತಿ ಇದೆ. ಕೊನೆಗೆ ನನ್ನ ವಿರುದ್ಧ 3 ಪ್ರಕರಣಗಳಿವೆ ಎಂದಾಗ ತೃತೀಯ ಲಿಂಗಿಗಳೇ 4 ಸಾವಿರ ರೂ. ನೀಡಿ, ಕೇಸುಗಳಿದ್ದರೆ ನಮ್ಮ ಜೊತೆಯಲ್ಲಿ ಇರಬೇಡವೆಂದು ಹೇಳಿ ಕಳುಹಿಸಿದ್ದಾರೆ.
ನಂತರ ಮದ್ಯ ಸೇವಿಸಿ ದೇವನಹಳ್ಳಿ, ಬೆಂಗಳೂರಿಗೆ ಬಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ. ಅನುಮಾನಾಸ್ಪದ ವ್ಯಕ್ತಿ ಎಂಬ ಸಾರ್ವಜನಿಕರ ದೂರಿನ ಮೇರೆಗೆ ಆತನನ್ನು ಬಂಧಿಸಿ ವಿಚಾರಿಸಿದಾಗ ಹುಬ್ಬಳ್ಳಿಯಲ್ಲಿ ನಮ್ಮವರಿದ್ದು, ಸೆಂಟ್ರಿಂಗ್ ಕೆಲಸ ಮಾಡಲು ಬಂದಿರುವುದಾಗಿ ಆರೋಪಿ ತಿಳಿಸಿದ್ದಾನೆ.
ಚಿತ್ರದುರ್ಗ-ದಾವಣಗೆರೆ ರಾಷ್ಟ್ರೀಯ ಹೆದ್ದಾರಿಯಲ್ಲಿ 2024ರ ಫೆ. 10ರಂದು ಭಿಕ್ಷೆ ಬೇಡುತ್ತಿದ್ದ ಎಂಬ ಮಾಹಿತಿ ಆಧರಿಸಿ ಗೋನೂರು ನಿರಾಶ್ರಿತರ ಪರಿಹಾರ ಕೇಂದ್ರದ ಅಧೀಕ್ಷಕ ಮಹದೇವಯ್ಯ, ಸಿಬ್ಬಂದಿ ಕೇಂದ್ರಕ್ಕೆ ಕರೆತಂದಿದ್ದರು.
ಆರೋಪಿಯ ಕುರಿತು ಅಲ್ಪ-ಸ್ವಲ್ಪ ಮಾಹಿತಿ ತಿಳಿದ ನಂತರ ಕೇಂದ್ರದಲ್ಲಿ ಇರುವುದಾಗಿ ಫೆ. 27ರಂದು ಹೈದರಾಬಾದ್ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ವಾಟ್ಸ್‌ಆ್ಯಪ್ ಮೂಲಕ ವಿಳಾಸ, ಭಾವಚಿತ್ರ ಕಳುಹಿಸಿದ್ದೇವೆ. ಆತನೇ ಎಂಬುದು ಖಚಿತವಾದ ನಂತರ ಮೇಲಧಿಕಾರಿಗಳ ಪತ್ರದೊಂದಿಗೆ ಕೇಂದ್ರಕ್ಕೆ ಬಂದಿದ್ದ ಪೊಲೀಸರೊಂದಿಗೆ ಕಳುಹಿಸಿಕೊಡಲಾಗಿದೆ ಎಂದು ಮಹದೇವಯ್ಯ ತಿಳಿಸಿದ್ದಾರೆ.