ನಿರಾಶ್ರಿತ ಕೂಲಿ ಕಾರ್ಮಿಕರನ್ನು ತವರಿಗೆ ಕಳುಹಿಸಲು ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದ ಶಾಸಕ ಸಿ.ಎನ್.ಬಾಲಕೃಷ್ಣ

IMG-20200426-WA0021.jpg
Published on

ಚನ್ನರಾಯಪಟ್ಟಣ: ತಾಲೂಕಿನ ಬರಗೂರು ಹ್ಯಾಂಡ್ ಪೋಸ್ಟ್ ಬಳಿ ಗುಡಿಸಲಿನಲ್ಲಿದ್ದ ಗದಗ ಜಿಲ್ಲೆ ಮೂಲದ ಐದು ಕುಟುಂಬಗಳನ್ನು ಸಾರಿಗೆ ಬಸ್ ವ್ಯವಸ್ಥೆ ಮಾಡಿ ಶನಿವಾರ ಸಂಜೆ ಸ್ವಗ್ರಾಮಕ್ಕೆ ಕಳಿಸಿಕೊಡುವ ಮೂಲಕ ಶಾಸಕ ಸಿ.ಎನ್.ಬಾಲಕೃಷ್ಣ ಮಾನವೀಯತೆ ಮೆರೆದರು.

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕು ಸುರಣಗಿ ಗ್ರಾಮದಿಂದ ಕಳೆದ ನಾಲ್ಕು ತಿಂಗಳ ಹಿಂದೆ ಕೆಲಸ ಹರಸಿ ಬಂದಿದ್ದ ಐದು ಕಾರ್ಮಿಕ ಕುಟುಂಬಗಳು ತಾಲೂಕಿನ ಬರಗೂರು ಹ್ಯಾಂಡ್‌ಪೋಸ್ಟ್ ಬಳಿ ಬಿಡಾರ ಹೂಡಿದ್ದು ಮಕ್ಕಳು ಸೇರಿದಂತೆ ಒಟ್ಟು 21 ಮಂದಿ ಇದ್ದರು.

ಪೈಪ್‌ಲೈನ್, ತೆಂಗು, ಬಾಳೆ ಹಾಗೂ ಅಡಕೆ ಗಿಡಗಳನ್ನು ನೆಡಲು ಗುಂಡಿ ತೆಗೆಯುವ ಕೆಲಸ ಸೇರಿದಂತೆ ಇನ್ನಿತರ ಕೂಲಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದರು. ಲಾಕ್‌ಡೌನ್ ಬಳಿಕ ಊರಿಗೆ ತೆರಳಲು ಸಾಧ್ಯವಾಗದೆ ಇತ್ತ ಕೂಲಿ ಕೆಲಸವೂ ಸಿಗದೆ ದುಡಿಮೆ ಇಲ್ಲದ ಕಾರಣ ಊಟ-ತಿಂಡಿಗೆ ಸಮಸ್ಯೆಯಾಗಿದ್ದು ಸಂತ್ರಸ್ತರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು.

ತಾಲೂಕು ಕಚೇರಿಗೆ ಆಗಮಿಸಿದ ಸಂತ್ರಸ್ತ ಕಾರ್ಮಿಕರು ಶಾಸಕ ಸಿ.ಎನ್.ಬಾಲಕೃಷ್ಣ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದು ಶಾಸಕರು ನೆರವಿಗೆ ನಿಂತರು, ಅಳಲಿಗೆ ಸ್ವಂಧಿಸಿದ ಶಾಸಕ ಅವರನ್ನು ಸ್ವಗ್ರಾಮಕ್ಕೆ ಕಳಿಸುವ ಸಲುವಾಗಿ 21 ಜನರಿಗೆ ಸಾರಿಗೆ ಬಸ್ ಟಿಕೆಟ್ ದರ 39 ಸಾವಿರ ರೂ. ಹಣ, ಮಾಸ್ಕ್, ಸ್ಯಾನಿಟೇಸರ್ ಹಾಗೂ ಊಟಕ್ಕೆ ವ್ಯವಸ್ಥೆ ಮಾಡಿಕೊಟ್ಟರು. ತಾಲೂಕು ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸಿದ್ದು ಬಸ್ ಏರುವ ಮೊದಲು 21 ಮಂದಿಯನ್ನು ತಪಾಸಣೆಗೆ ಒಳಪಡಿಸಿತು.

ಊರಿಗೆ ತೆರಳಲು ಅವಕಾಶ ಸಿಕ್ಕಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಸಂತ್ರಸ್ತರು ಶಾಸಕರಿಗೆ ಕೃತಜ್ಞತೆ ಸಲ್ಲಿಸಿ ಶನಿವಾರ ಸಂಜೆ ಬಸ್ ಹತ್ತಿ ಗದಗ ಕಡೆ ಪ್ರಯಾಣಿಸಿದರು, ತಹಸೀಲ್ದಾರ್ ಜೆ.ಬಿ.ಮಾರುತಿಗೌಡ, ಎಸ್ಪಿ ಬಿ.ಜಿ.ಕುಮಾರ್, ಪಿಎಸ್‌ಐ ಕಿರಣ್‌ಕುಮಾರ್, ನೋಡಲ್ ಅಧಿಕಾರಿ ಮಂಜುನಾಥ್ ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net