

ವಕೀಲರಾಗುವವರು ಜ್ಞಾನವನ್ನು ಹೆಚ್ಚಿಸಿಕೊಳ್ಳಲು ನಿರಂತರವಾಗಿ ಅಧ್ಯಯನ ಮಾಡುತ್ತಾ ಪ್ರಸ್ತುತದ ಆಗು-ಹೋಗುಗಳನ್ನು ಗಮನಿಸುತ್ತಿರಬೇಕು ಎಂದು ಕೇರಳ ಹೈಕೋರ್ಟ್ ನ್ಯಾಯಮೂರ್ತಿ ವಿ.ಎಂ.ಶ್ಯಾಮ್‌ಕುಮಾರ್ ಕಿವಿಮಾತು ಹೇಳಿದರು.
ನಗರದ ಕುವೆಂಪುನಗರದ ಜೆಎಸ್‌ಎಸ್ ಕಾನೂನು ಕಾಲೇಜಿನ ಬೆಳ್ಳಿ ಮಹೋತ್ಸವ ಸಭಾಂಗಣದಲ್ಲಿ ಶನಿವಾರ ನಡೆದ 22ನೇ ಸುರಾನಾ ಮತ್ತು ಸುರಾನಾ ರಾಷ್ಟ್ರೀಯ ಕಾರ್ಪೊರೇಟ್ ಕಾನೂನು ಅಣಕು ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಕೀಲ ವೃತ್ತಿಯೂ ನಿರಂತರ ಕಲಿಕೆಯನ್ನು ಬಯಸುವುದರಿಂದ ವಕೀಲರಾಗುವವರು ಯಾವಾಗಲೂ ಅಧ್ಯಯನಶೀಲರಾಗಿ ಇರಬೇಕಾದ ಅಗತ್ಯವಿದೆ ಎಂದರು.
ಬೇರೆ ವಿಷಯಗಳಲ್ಲಿ ಒಂದು ಸಲ ವೃತ್ತಿಗೆ ಸೇರ್ಪಡೆಗೊಂಡರೆ ಹೆಚ್ಚಿನ ರೀತಿಯಲ್ಲಿ ಅಭ್ಯಾಸ ಮಾಡುವ ಅಗತ್ಯವಿರುವುದಿಲ್ಲ. ಆದರೆ ವಕೀಲ ವೃತ್ತಿಯಲ್ಲಿ ಆ ರೀತಿ ಆಗುವುದಿಲ್ಲ. ಹೊಸದಾಗಿ ವೃತ್ತಿಗೆ ಸೇರಿದ ಕಿರಿಯ ವಕೀಲರು ತಮಗೆ ಮಾರ್ಗದರ್ಶನ ಮಾಡುವ ಹಿರಿಯ ವಕೀಲರು ಯಾವ ರೀತಿ ಸಿದ್ಧತೆ ಮಾಡಿಕೊಳ್ಳುತ್ತಾರೆ ಎನ್ನುವುದನ್ನು ಗಮನಿಸಬೇಕು. ನ್ಯಾಯಾಲಯಗಳಲ್ಲಿ ಪ್ರಕಟವಾಗುವ ತೀರ್ಪುಗಳನ್ನು ಓದಿಕೊಳ್ಳಬೇಕು. ಹೊಸ-ಹೊಸ ಕಾಯಿದೆಗಳು, ಕಾನೂನುಗಳು ಜಾರಿಯಾಗುತ್ತಲೇ ಇರುತ್ತವೆ. ಇವುಗಳ ಬಗ್ಗೆಯೂ ತಿಳಿದುಕೊಳ್ಳಬೇಕು ಎಂದರು.
ಅಣಕು ನ್ಯಾಯಾಲಯ ಸ್ಪರ್ಧೆಯು ಕಾನೂನು ವಿದ್ಯಾರ್ಥಿಗಳ ಮಾನಸಿಕ ಸದೃಢತೆಯನ್ನು ಅನಾವರಣ ಮಾಡುತ್ತದೆ. ಕ್ಲಿಷಕರ ಸಮಸ್ಯೆಗಳನ್ನು ಕಾನೂನಾತ್ಮಕವಾಗಿ ಯಾವ ರೀತಿ ಪರಿಹರಿಸಬೇಕು. ಸಮಸ್ಯೆಗಳಿಗೆ ಪರಿಹಾರವನ್ನು ಹೇಗೆ ಕಂಡು ಹಿಡಿದುಕೊಳ್ಳಬೇಕು ಎನ್ನುವ ಜ್ಞಾನವನ್ನು ಪ್ರಾಯೋಗಿಕವಾಗಿ ತಿಳಿದುಕೊಳ್ಳಲು ಇಂತಹ ಸ್ಪರ್ಧೆಗಳು ನೆರವಾಗುತ್ತವೆ. ನ್ಯಾಯಾಲಯಗಳಲ್ಲಿ ಹೇಗೆ ವಾದ ಮಾಡಬೇಕು ಎನ್ನುವುದನ್ನು ಕಲಿಸುವುದಕ್ಕೆ ವೇದಿಕೆಯಾಗಿರುತ್ತದೆ ಎಂದರು.
ಇಲ್ಲಿ ವಿದ್ಯಾರ್ಥಿಗಳಿಗೆ ನೆರವು ನೀಡಲು ಉಪನ್ಯಾಸಕರು, ವಿಷಯ ಸಂಪನ್ಮೂಲ ವ್ಯಕ್ತಿಗಳು, ಪುಸ್ತಕಗಳು ಸಹಾಯ ಮಾಡುತ್ತವೆ. ಇಂತಹ ಸ್ಪರ್ಧೆಯಲ್ಲಿ ಭಾಗವಹಿಸಿದರೆ ಧೈರ್ಯ ಬರುವುದಲ್ಲದೆ, ವಿಷಯವನ್ನು ಮಂಡಿಸುವ ರೀತಿಯೂ ಗೊತ್ತಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಸೋಲು-ಗೆಲುವು ಎನ್ನುವುದನ್ನು ಬಿಟ್ಟು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ ಬೆಟಸೂರಮಠ್, ಎಸ್‌ಎಸ್‌ಐಎ ಮುಖ್ಯಸ್ಥ ಪ್ರೀತಮ್ ಸುರಾನಾ, ಜೆಎಸ್‌ಎಸ್ ಕಾನೂನು ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಕೆ.ಎಸ್.ಸುರೇಶ್, ಪ್ರಾಂಶುಪಾಲೆ ಡಾ.ಎನ್.ವಾಣಿಶ್ರೀ, ಸಹಾಯಕ ಪ್ರಾಧ್ಯಾಪಕ ಎಂ.ಪಿ.ನಾಗೇಂದ್ರಮೂರ್ತಿ ಹಾಜರಿದ್ದರು.