ನಿರಂತರ ಅಭ್ಯಾಸದಿಂದ ಕೌಶಲ ವೃದ್ಧಿ

11bnk1 tejasvi
ತೇಜಸ್ವಿ ಪ್ರತಿಷ್ಠಾನದಲ್ಲಿ ನಡೆದ ಕಾರ್ಯಾಗಾರದ ಸಮಾರೋಪದಲ್ಲಿ ರಾಘವೇಂದ್ರ ಮಾತನಾಡಿದರು. ಸಂಜಯ ಗೌಡ ಕೊಟ್ಟಿಗೆಹಾರ, ಸತೀಶ್ ಪ್ರಸಾದ್ ಜೈಸ್ವಾಲ್, ನಯನಾ ಬಾಬುರಾವ್ ಇತರರಿದ್ದರು.
Published on

ಬಣಕಲ್: ಶಿಬಿರಾರ್ಥಿಗಳು ವ್ಯಂಗ್ಯಚಿತ್ರ, ಚಿತ್ರಕಲೆ ಮತ್ತು ಹಸ್ತಾಕ್ಷರ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಸಿಕೊಂಡರೆ ಕೌಶಲ ವೃದ್ಧಿಯಾಗಿ ಪರಿಪೂರ್ಣತೆ ಪಡೆಯಲು ಸಾಧ್ಯ ಎಂದು ತೇಜಸ್ವಿ ಪ್ರತಿಷ್ಠಾನದ ಸದಸ್ಯ ರಾಘವೇಂದ್ರ ಹೇಳಿದರು.

ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ನಡೆದ ವ್ಯಂಗ್ಯಚಿತ್ರ, ಹಕ್ಕಿಕೀಟ ಚಿತ್ರಕಲೆ, ಕನ್ನಡ ಹಸ್ತಾಕ್ಷರ ಕಾರ್ಯಾಗಾರದ ಸಮಾರೋಪದಲ್ಲಿ ಮಾತನಾಡಿದರು. ನಿರಂತರ ಅಭ್ಯಾಸದಲ್ಲಿ ತೊಡಗುವುದರಿಂದ ಆ ಕ್ಷೇತ್ರದಲ್ಲಿ ಪರಿಣಿತಿ ಪಡೆದುಕೊಳ್ಳಲು ಸಾಧ್ಯ. ತೇಜಸ್ವಿ ಪ್ರತಿಷ್ಠಾನವೂ ನಿರಂತರ ಚಟುವಟಿಕೆಗಳ ಮೂಲಕ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಕಲಾವಿದ ಬಾಪು ದಿನೇಶ್ ಮಾತನಾಡಿ, ಬಹುಮುಖ ವ್ಯಕ್ತಿತ್ವದ ತೇಜಸ್ವಿ ಅವರು ಚಿತ್ರಕಲಾ ಕ್ಷೇತ್ರದಲ್ಲಿಯೂ ಆಸಕ್ತಿ ಉಳ್ಳವರಾಗಿದ್ದರು. ವ್ಯಂಗ್ಯಚಿತ್ರ ರಚನೆ ಮನುಷ್ಯನ ಮುಖದ ಚಹರೆಗಳನ್ನು ಖಾಲಿ ಹಾಳೆಯಲ್ಲಿ ಗೆರೆಯ ಮೂಲಕ ಅಭಿವ್ಯಕ್ತಿ ಪಡಿಸುವ ಕಲೆಯಾಗಿದೆ ಎಂದರು.

ತೇಜಸ್ವಿ ಒಡನಾಡಿಗಳಾದ ಶಿವು ಮಾತನಾಡಿ, ತೇಜಸ್ವಿ ಅವರಿಗೆ ಬದುಕು ಮತ್ತು ಬರಹ ಬೇರೆ ಬೇರೆ ಆಗಿರಲಿಲ್ಲ. ಜೀವಾನುಭವದಿಂದ ಬಂದ ಕಾರಣದಿಂದಾಗಿಯೇ ತೇಜಸ್ವಿ ಅವರ ಬರಹ ಅಷ್ಟೊಂದು ಆಪ್ತ ಎನಿಸುತ್ತದೆ ಎಂದರು.

ವ್ಯಂಗ್ಯಚಿತ್ರ ಕಲಾವಿದರಾದ ಜಿ.ಎಸ್.ನಾಗನಾಥ್ ಮಾತನಾಡಿ, ವ್ಯಂಗ್ಯಚಿತ್ರ ರಚನೆಗೆ ಶ್ರದ್ಧೆ ಮತ್ತು ತಾಳ್ಮೆ ಅವಶ್ಯಕ. ವ್ಯಂಗ್ಯಚಿತ್ರ ಕಲಾವಿದರಿಗೆ ವಿಪುಲ ಅವಕಾಶಗಳಿವೆ ಎಂದರು.

ಹಕ್ಕಿಕೀಟ ಚಿತ್ರಕಲೆ ರಚಿಸಿದ ಆಯ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ದಕ್ಷಿಣ ಕನ್ನಡ, ಉಡುಪಿ, ಹಾಸನ, ಚಿಕ್ಕಮಗಳೂರು ಮುಂತಾದ ಜಿಲ್ಲೆಗಳಿಂದ 80ಕ್ಕೂ ಹೆಚ್ಚು ಶಿಬಿರಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಕಲಾವಿದರಾದ ರಕ್ಷಾ ಪೂಜಾರಿ, ದಿನೇಶ್ ಹೊಳ್ಳ, ಸಾಮಾಜಿಕ ಕಾರ್ಯಕರ್ತ ಸಂಜಯ ಗೌಡ ಕೊಟ್ಟಿಗೆಹಾರ, ಏಕಲವ್ಯ ಮಾದರಿ ವಸತಿ ಶಾಲೆ ಪ್ರಾಚಾರ್ಯ ಸತೀಶ್ ಪ್ರಸಾದ್ ಜೈಸ್ವಾಲ್, ಕಲಾ ಶಿಕ್ಷಕಿ ನಯನಾ ಬಾಬುರಾವ್, ತೇಜಸ್ವಿ ಪ್ರತಿಷ್ಠಾನದ ತಾಂತ್ರಿಕ ಸಂಯೋಜಕ ಪ್ರಜ್ವಲ್, ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿ ಸತೀಶ್ ತರುವೆ, ಸಂಗೀತಾ, ಕೀಟತಜ್ಞ ಡಾ. ಅವಿನಾಶ್, ಲೇಖಕ ಪೂರ್ಣೇಶ್ ಮತ್ತಾವರ, ಕಸಾಪ ನಿಕಟಪೂರ್ವ ಅಧ್ಯಕ್ಷ ಶಾಂತಕುಮಾರ್, ಕಲಾವಿದರಾದ ವಿಶ್ವಕರ್ಮ ಆಚಾರ್ಯ, ಹರ್ಷಕಾವಾ ಶಿಕ್ಷಕಿ ರೇಖಾ ಪೂರ್ಣೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net