ನಿರಂತರ ಅಧ್ಯಯನದಿಂದ ಜ್ಞಾನವಂತರಾಗಿ

Published on

ಪ್ರತಿಯೊಬ್ಬ ವಿದ್ಯಾರ್ಥಿಯೂ ತಾವು ಅಧ್ಯಯನ ಮಾಡುವ ವಿಷಯದ ಮೇಲೆ ಹೆಚ್ಚು ಒತ್ತು ನೀಡಿ ಜ್ಞಾನವಂತರಾಗಬೇಕು ಎಂದು ಉಪನ್ಯಾಸಕ ನಾಗರಾಜ್ ಬೀಜಗನಹಳ್ಳಿ ಹೇಳಿದರು.

ಮಹಾರಾಜ ಕಾಲೇಜಿನ ಜೂನಿಯರ್ ಬಿ.ಎ. ಹಾಲ್‌ನಲ್ಲಿ ಸೋಮವಾರ ಆಯೋಜಿಸಿದ್ದ ಸ್ವಾಗತ ಹಾಗೂ ಅಭಿವಿನ್ಯಾಸ ಕಾರ್ಯಕ್ರಮ-2025-26 ಉದ್ಘಾಟಿಸಿ ಮಾತನಾಡಿದರು.

ಸಮಯಗಳು ಸಂಕಷ್ಟಕ್ಕೆ ದೂಡುತ್ತವೆ, ಸಂಭ್ರಮಗಳನ್ನು ನೀಡುತ್ತವೆ. ಸಂಭ್ರಮಕ್ಕಷ್ಟೇ ಆದ್ಯತೆ ನೀಡಿದರೆ ಜೀವನ ಕಷ್ಟ. ನಮ್ಮ ಮೇಲೆ ನಂಬಿಕೆಯಿರಬೇಕು. ತೋಳ್ಬಲ ಕಡಿಮೆಯಾಗುತ್ತದೆ. ಆದರೆ ಮಿದುಳಿನ ಶಕ್ತಿ ಕಡಿಮೆಯಾಗುವುದಿಲ್ಲ ಹೀಗಾಗಿ ಜ್ಞಾನವಂತರಾಗಬೇಕು ಎಂದರು.

ಜ್ಞಾನವಂತರಾಗಲು, ನಿರಂತರ ಓದುವಿಕೆ, ಹೊಸ ವಿಷಯಗಳನ್ನು ಕಲಿಯುವ ಆಸಕ್ತಿ ಮತ್ತು ನಿಮ್ಮ ಜ್ಞಾನವನ್ನು ಹಂಚಿಕೊಳ್ಳುವುದು ಮುಖ್ಯ. ನಿಮ್ಮನ್ನು ನಿಮ್ಮ ಬದುಕಿನ ಶಿಲ್ಪಿ ಎಂದು ಭಾವಿಸಿ, ನಿರಂತರ ಕಲಿಯುವ ಮೂಲಕ ಮತ್ತು ಅನುಭವಗಳನ್ನು ಅಳವಡಿಸಿಕೊಳ್ಳುವ ಮೂಲಕ ಜ್ಞಾನವನ್ನು ಬೆಳೆಸಿಕೊಳ್ಳಬಹುದು ಎಂದರು.

ಪಾಲಕರ ಶ್ರಮವನ್ನು ಎಂದಿಗೂ ಮರೆಯಬಾರದು. ಸಮಯವ್ಯರ್ಥ ಮಾಡಿದರೆ ನಿಮ್ಮನ್ನು ಎಲ್ಲಿಗೂ ಸಲ್ಲದವರನ್ನಾಗಿ ಮಾಡುತ್ತದೆ. ಸಾಧಕರೊಂದಿಗೆ ಸೇರಿ ಸಾಧಕರಾಗಬೇಕು. ದೂರದೃಷ್ಟಿಯುಳ್ಳ ಸ್ನೇಹಿತರೊಂದಿಗೆ ಇರಬೇಕು. ತಮ್ಮ ಸಹವಾಸಗಳು ಸೂಕ್ತವಾಗಿರಬೇಕು. ತಿಂಗಳಿಗೊಂದು ಪುಸ್ತಕ ಓದಿ. ಕಲಿಯುವ ಸ್ಥಳದಲ್ಲಿ ಗಲಾಟೆ ಮಾಡದೆ ಜ್ಞಾನ ಸಂಪಾದನೆ ಮಾಡಿದರೆ ಸಾಧಕರಾಗುತ್ತಾರೆ ಎಂದರು.

ಪ್ರಾಂಶುಪಾಲ ಪ್ರೊ.ಎಚ್.ಸಿ.ದೇವರಾಜೇಗೌಡ, ಆಡಳಿತಾಧಿಕಾರಿ ಪ್ರೊ.ಕೆ.ತಿಮ್ಮಯ್ಯ, ಸ್ವಾಗತ ಹಾಗೂ ಬೀಳ್ಕೊಡುಗೆ ಸಮಿತಿ ಸಂಚಾಲಕ ಡಾ.ಬಸವರಾಜ ಕೆ.ಬಾರಕೇರ, ರಾಷ್ಟ್ರೀಯ ಸೇವಾ ಯೋಜನೆ ಘಟಕ-1 ಕಾರ್ಯಕ್ರಮಾಧಿಕಾರಿ ಡಾ.ಎಸ್.ಕೃಷ್ಣಪ್ಪ, ಎನ್‌ಸಿಸಿ ಅಧಿಕಾರಿ ಟಿ.ಎಸ್.ರವಿ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಆರ್.ಕಿರಣ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net