ನಾಳೆಯಿಂದ ಸಿಗಲಿದೆ ಡಿಆರ್​ಡಿಒ ಸಂಜೀವಿನಿ; ಕೋವಿಡ್ ವಿರುದ್ಧ ಯಶಸ್ವಿಯಾದೀತೇ ಹೊಸ ಅಸ್ತ್ರ?

Drdo
ಡಿಆರ್​ಡಿಒ ಅಭಿವೃದ್ಧಿ ಪಡಿಸಿರುವ ಔಷಧ ಬಳಕೆಗೆ ಮುನ್ನ ಮತ್ತು ಬಳಕೆ ನಂತರ ಕೋವಿಡ್ ಸೋಂಕಿನ ಚಿತ್ರ.
Published on

ಕೋವಿಡ್ ವಿರುದ್ಧ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಎಆರ್​ಡಿಒ) ಅಭಿವೃದ್ಧಿ ಪಡಿಸಿರುವ ಕರೊನಾ ನಿರೋಧಕ ಔಷಧ ತುರ್ತು ಸಂದರ್ಭದ ಬಳಕೆಗೆ ಮಂಗಳವಾರದಿಂದಲೇ ಲಭ್ಯವಾಗಲಿದೆ. ಈಗಾಗಲೇ 2ನೇ ಹಂತದಲ್ಲಿ ಕ್ಲಿನಿಕಲ್ ಟ್ರಯಲ್​ಗೆ ಔಷಧಗಳ ಗುಣಮಟ್ಟ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ) ಅನುಮತಿ ನೀಡಿರುವುದರಿಂದ ಮೇ 11ರಿಂದಲೇ ಸೋಂಕಿತರ ಚಿಕಿತ್ಸೆಗೆ ಮುಕ್ತವಾಗಲಿದೆ ಎಂದು ಡಿಆರ್​ಡಿಒ ಮುಖ್ಯಸ್ಥ ಜಿ.ಸತೀಶ್ ರೆಡ್ಡಿ ತಿಳಿಸಿದ್ದಾರೆ. ಈ ಕುರಿತು ಖಾಸಗಿ ಸುದ್ದಿವಾಹಿನಿಗೆ ಅವರು ವಿಶೇಷ ಸಂದರ್ಶನ ನೀಡಿದ್ದಾರೆ.

ದೇಹದಲ್ಲಿ ವೈರಾಣುಗಳ ಬಲ ಕುಂದಿಸಿ, ಇತರ ಭಾಗಗಳಿಗೆ ಹಬ್ಬದಂತೆ ರಕ್ಷಾಕವಚ ನಿರ್ವಿುಸುವ ಈ ಔಷಧ ಕೋವಿಡ್ ಸೋಂಕಿತರ ಆರೋಗ್ಯಕ್ಕೆ ಸಹಕಾರಿಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಎಲ್ಲ ಆಸ್ಪತ್ರೆಗಳಲ್ಲೂ ಯಾವುದೇ ಅಡಚಣೆ ಇಲ್ಲದಂತೆ ಸೋಂಕಿತರಿಗೆ ಲಭಿಸುವಂತೆ ಮಾಡಲು ತಂಡಗಳು ಸಿದ್ಧತೆ ಮಾಡಿವೆ. ಈ ಔಷಧ ಬಳಸಿದ ಮೂರೇ ದಿನದಲ್ಲಿ ಸೋಂಕಿತರು ಚೇತರಿಸಿಕೊಳ್ಳುವ ಸಾಮರ್ಥ್ಯ ಇದಕ್ಕಿದೆ. ಕ್ಲಿನಿಕಲ್ ಟ್ರಯಲ್​ನಲ್ಲಿ ಇದು ಸಾಬೀತಾಗಿದೆ ಎಂದಿದ್ದಾರೆ.

ಫಲಿತಾಂಶವೇನು?: ಕರೊನಾ ವಿರುದ್ಧ ಸಿದ್ಧಪಡಿಸಲಾಗಿರುವ 2-ಡಿಜೆ ಔಷಧ ಬಳಸಿದ ಸೋಂಕಿತರು ವೇಗವಾಗಿ ಚೇತರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ವೈದ್ಯಕೀಯ ಆಮ್ಲಜನಕ ಬಳಕೆಯ ಅಗತ್ಯವೂ ಭಾರಿ ಪ್ರಮಾಣದಲ್ಲಿ ತಗ್ಗಿದೆ. ಇದು ಭವಿಷ್ಯದಲ್ಲಿ ಚಿಕಿತ್ಸೆಗೆ ಹೆಚ್ಚಿನ ನೆರವಾಗಲಿದೆ ಎಂದು ಎಂದು ಡಿಸಿಜಿಐ ಖಚಿತಪಡಿಸಿದೆ.

2 ಡಿಜೆ ರೂಪ ಯಾವುದು?: ಪುಡಿಯ ರೂಪದಲ್ಲಿರುವ ಈ ಔಷಧವನ್ನು ಸೋಂಕಿತರು ಯಾವುದೇ ಭಯವಿಲ್ಲದೆ ನೀರಿನಲ್ಲಿ ಬೆರೆಸಿ ಕುಡಿಯಬಹುದು. ಇದು ಕೋವಿಡ್ ರೋಗಿಗಳು ಗುಣಮುಖರಾಗಿ ಶೀಘ್ರ ಆಸ್ಪತ್ರೆಯಿಂದ ಹೊರಬರಲು ನೆರವಾಗುತ್ತಿದೆ.

ಕಾರ್ಯನಿರ್ವಹಣೆ ಹೇಗೆ?: ಕರೊನಾ ಸೋಂಕಿತರ ಜೀವಕೋಶಗಳನ್ನು ಸೇರುವ ಈ ಔಷಧ ಅಲ್ಲಿನ ವೈರಸ್​ನ ಸಂಶ್ಲೇಷಣೆ ಮತ್ತು ಶಕ್ತಿ ಉತ್ಪಾದನೆಗೆ ತಡೆಯೊಡ್ಡುತ್ತಿದೆ. ಹಾಗೂ ಅದು ಬೆಳವಣಿಗೆ ಆಗದಂತೆ ನಿಗ್ರಹಿಸುತ್ತದೆ.

ಎಲ್ಲೆಲ್ಲಿ ಪ್ರಯೋಗ?: ಕರ್ನಾಟಕ , ಉತ್ತರಪ್ರದೇಶ, ಆಂಧ್ರಪ್ರದೇಶ ಸೇರಿ ಒಟ್ಟು 10 ರಾಜ್ಯಗಳಲ್ಲಿನ ಸೋಂಕಿತರ ಮೇಲೆ ಪ್ರಯೋಗ ನಡೆಸಲಾಗಿದೆ. ಇದರ ಯಶಸ್ಸೇ ಚಿಕಿತ್ಸೆ ಅಭಿವೃದ್ಧಿಪಡಿಸಲು ಪ್ರೇರಣೆ ಆಗಿದೆ ಎಂದು ಔಷಧ ಗುಣಮಟ್ಟ ನಿಯಂತ್ರಣ ಪ್ರಾಧಿಕಾರ (ಡಿಸಿಜೆಐ)ಕ್ಕೆ ವರದಿ ಸಲ್ಲಿಕೆಯಾಗಿದೆ.

ಲಾಭಗಳೇನು?

  • ಈ ಔಷಧದಿಂದ ಜೀವಹಾನಿ ತಗ್ಗಲಿದೆ.
  • ಸೋಂಕಿತರು ಮೂರೇ ದಿನದಲ್ಲಿ ಚೇತರಿಸಿಕೊಂಡರೆ ದೇಶಾದ್ಯಂತ ಆಸ್ಪತ್ರೆಗಳಲ್ಲಿ ಕಾಡುತ್ತಿರುವ ಹಾಸಿಗೆಗಳ ಕೊರತೆ ಸಮಸ್ಯೆ ಬಗೆಹರಿಯಲಿದೆ.
  • ಎಲ್ಲ ಸೋಂಕಿತರಿಗೂ ಬೆಡ್ ಸೌಲಭ್ಯ ಸಿಗಲಿದೆ.
  • ಆಮ್ಲಜನಕದ ಕೊರತೆ ತಗ್ಗಿ ರೋಗಿಗಳ ಚೇತರಿಕೆಗೆ ನೆರವಾಗಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net