

ತುಮಕೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಡಿ.10ರಂದು ಚುನಾವಣೆ ನಡೆಯಲಿದ್ದು, ಗೆಲುವಿಗಾಗಿ ಎಲ್ಲ ಅಭ್ಯರ್ಥಿಗಳು ವಿವಿಧ ಕಸರತ್ತು ಆರಂಭಿಸಿದ್ದಾರೆ.
ಮಂಗಳವಾರ ಸಂಜೆ ಬಹಿರಂಗ ಪ್ರಚಾರ ಅಂತ್ಯವಾಗಲಿದ್ದು, ಮನೆಮನೆಗೆ ತೆರಳಿ ಮತ ಸೆಳೆಯುವ ಕಸರತ್ತು ಆರಂಭವಾಗಲಿದೆ, ಗ್ರಾಪಂ ಸದಸ್ಯರಿಗೆ ಕೊಡುಗೆ ನೀಡಲು ಅಭ್ಯರ್ಥಿಗಳು ಮುಂದಾಗಿದ್ದು, ಅಭ್ಯರ್ಥಿಗಳ ಕುಟುಂಬ ಸದಸ್ಯರು ಅಖಾಡಕ್ಕಿಳಿದು ಇದರ ಮೇಲುಸ್ತುವಾರಿ ನೋಡಿಕೊಳ್ಳಲಾರಂಭಿಸಿದ್ದಾರೆ.
ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರು ಮತಬೇಟೆಗೆ ವಿಶೇಷ ಆಸಕ್ತಿ ವಹಿಸಿದ್ದು ಗ್ರಾಮಗಳಲ್ಲಿ ಬೀಡುಬಿಟ್ಟಿದ್ದಾರೆ. ಚುನಾವಣೆಯಲ್ಲಿ ಕೊಡುಗೆಯ ನಿರೀಕ್ಷೆಯಲ್ಲಿದ್ದ ಮತದಾರರೂ ಮತದಾನದ ಮೊದಲೆರಡು ದಿನಕ್ಕಾಗಿ ಕಾಯುತ್ತಿದ್ದು ನಿರೀಕ್ಷೆ ಹೆಚ್ಚಿಸಿದೆ.
ರಾಜ್ಯದ ಪ್ರಮುಖ ನಾಯಕರೆಲ್ಲ ಆಯಾ ಪಕ್ಷದ ಅಭ್ಯರ್ಥಿ ಪರವಾಗಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದು ಮತ ಸೆಳೆಯುವ ವಿಶ್ವಾಸದಲ್ಲಿದ್ದಾರೆ, ಜೆಡಿಎಸ್‌ಗೆ ವರಿಷ್ಠ ನಾಯಕ ಎಚ್.ಡಿ.ದೇವೇಗೌಡರೇ ನೇತೃತ್ವವಹಿಸಿ ಚುನಾವಣೆ ನಡೆಸುತ್ತಿರುವುದು ಆ ಪಕ್ಷದ ಕಾರ್ಯಕರ್ತರಲ್ಲಿ ಗೆಲುವಿನ ಆಸೆ ಹುಟ್ಟಿಸಿದೆ, ಕಾಂಗ್ರೆಸ್ ಕೂಡ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ಕರೆಸಿ ಪ್ರಚಾರ ನಡೆಸಿದೆ.
ಬಿಜೆಪಿ ಬಹಿರಂಗ ಪ್ರಚಾರಕ್ಕೆ ಆದ್ಯತೆ ನೀಡದೆ ಮನೆಮನೆ ಪ್ರಚಾರಕ್ಕೆ ಮೊರೆಹೋಗಿದೆ, ಸಿಎಂ ಬಸವರಾಜ ಬೊಮ್ಮಾಯಿ ತುಮಕೂರಿಗೆ ಆಗಮಿಸಿ ಸುದ್ದಿಗೋಷ್ಠಿ ನಡೆಸಿ ಮತಯಾಚಿಸಿದ್ದು ಬಿಟ್ಟರೆ ಉಳಿದ್ಯಾವ ನಾಯಕರು ಜಿಲ್ಲೆಗೆ ಆಗಮಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮನೆಮನೆಗೆ ತೆರಳಿ ಮತ ಕೇಳುತ್ತಿದ್ದು ಗೆಲುವಿನ ವಿಶ್ವಾಸದಲ್ಲಿದ್ದಾರೆ.
ಜಿಲ್ಲೆಯ ಕೆಲವು ಭಾಗದಲ್ಲಿ ಬೆಂಗಳೂರು, ತುಮಕೂರು ನಗರದ ಕಾರ್ಯಕರ್ತರನ್ನು ಬಳಸಿಕೊಂಡು ಕೊನೇ ಕ್ಷಣದ ಪ್ರಚಾರ ನಡೆಸಲು ಅಭ್ಯರ್ಥಿಗಳು ಮುಂದಾಗಿದ್ದು ಸ್ಥಳೀಯ ಕಾರ್ಯಕರ್ತರ ಕಣ್ಣು ಕೆಂಪಾಗಿಸಿದೆ.
ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಜಯರಾಮಯ್ಯ ಕೂಡ ಮನೆಮನೆಗೆ ತೆರಳಿ ಮತಯಾಚಿಸುತ್ತಿದ್ದಾರೆ. ಆಯಾ ಸ್ಥಳೀಯ ಸಂಸ್ಥೆಗಳ ಕಚೇರಿಯಲ್ಲಿಯೇ ಮತದಾನಕ್ಕೆ ಅವಕಾಶವಿದ್ದು ಸದಸ್ಯರು ಅಲ್ಲಿಯೇ ಮತದಾನ ಮಾಡಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ.
ಕರೊನಾ ಮಾರ್ಗಸೂಚಿ ಪಾಲನೆ ಕಡ್ಡಾಯ: ವಿಧಾನ ಪರಿಷತ್‌ಗೆ ತುಮಕೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಡಿ.10ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲ ರಾಜಕೀಯ ಪಕ್ಷ, ಅಭ್ಯರ್ಥಿಗಳು ಕಡ್ಡಾಯವಾಗಿ ಕರೊನಾ ನಿಯಮ ಪಾಲಿಸುವುದು ಕಡ್ಡಾಯವಾಗಿದೆ. ಮತದಾನ ಮುಕ್ತಾಯಗೊಳ್ಳುವ 72 ಗಂಟೆಗಳ ಮುಂಚಿತವಾಗಿ ಸಾರ್ವಜನಿಕ ಸಭೆ, ಬೈಕ್ ರ‌್ಯಾಲಿ, ಬೀದಿ ನಾಟಕ ಸೇರಿ ಮತ್ತಿತರ ಬಹಿರಂಗ ಪ್ರಚಾರ ನಿಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್.ಪಾಟೀಲ ಸೂಚಿಸಿದ್ದಾರೆ. ಚುನಾವಣಾಧಿಕಾರಿ ಸೂಚನೆ ಹಿನ್ನೆಲೆಯಲ್ಲಿ ಬಹಿರಂಗ ಚುನಾವಣಾ ಪ್ರಚಾರ ಡಿ.7ರ ಸಂಜೆ 4ಕ್ಕೆ ಮುಕ್ತಾಯವಾಗಬೇಕಿದ್ದು ಮನೆಮನೆ ಪ್ರಚಾರಕ್ಕೆ ಮಾತ್ರ ಅವಕಾಶವಿದೆ.