

ಹಾಸನ: ಭಾರತೀಯ ವೈದ್ಯಕೀಯ ಸಂಘ ಹಾಸನ ಶಾಖೆ ವತಿಯಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಜು.28ರ ಭಾನುವಾರ ಸಂಜೆ ಅಶೋಕ ಹೋಟೆಲ್‌ನಲ್ಲಿ 7.30ಕ್ಕೆ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಉಪ- ಕುಲಪತಿ ಡಾ.ಎಂ.ಕೆ.ರಮೇಶ್ ಆಗಮಿಸಲಿದ್ದಾರೆ. ಗೌರವ ಅತಿಥಿಯಾಗಿ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ, ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಐಎಂಎ ರಾಜ್ಯ ಘಟಕದ ಉಪಾಧ್ಯಕ್ಷೆ ಡಾ. ಎ.ಸಾವಿತ್ರಿ ಮತ್ತು ಐಎಂಎ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಡಾ. ಬಿ.ಕೆ.ಸೌಮ್ಯಮಣಿ ಉಪಸ್ಥಿತರಿರುತ್ತಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐಎಂಎ ಜಿಲ್ಲಾಧ್ಯಕ್ಷರಾದ ಡಾ.ಎಚ್.ಆರ್. ದೇವದಾಸು ವಹಿಸಲಿದ್ದಾರೆ.
ಜೀವಮಾನದ ಸಾಧನೆಗಾಗಿ ಹಾಸನದ ಹಿರಿಯ ವೈದ್ಯರಾದ ಡಾ.ಎಂ.ಆರ್.ಸೋಮನಾಥ್ ಅವರನ್ನು ಸನ್ಮಾನಿಸಲಾಗುವುದು. ಕಳೆದ ಎರಡು ತಿಂಗಳಿಂದ ಡಾ.ಶ್ವೇತಾ ನಾಡಿಗ್ ಪ್ರಭು, ಡಾ.ಕುಮಾರ್ ಮತ್ತು ಡಾ.ಜೆ.ಎನ್.ರಘು ಅವರ ನೇತೃತ್ವದಲ್ಲಿ ನಡೆದ ಸಾಂಸ್ಕೃತಿಕ ಹಾಗೂ ಆಟೋಟ ಸ್ಪರ್ಧೆಗಳಲ್ಲಿ ಜಯ ಗಳಿಸಿದ ವೈದ್ಯರು ಹಾಗು ಅವರ ಕುಟುಂಬದವರಿಗೆ ಬಹುಮಾನ ವಿತರಿಸಲಾಗುವುದು. ಈ ಕಾರ್ಯಕ್ರಮದಲ್ಲಿ 300ಕ್ಕೂ ಹೆಚ್ಚು ವೈದ್ಯರು ಭಾಗವಹಿಸುತ್ತಾರೆ ಎಂದು ಐಎಂಎ ಕಾರ್ಯದರ್ಶಿ ಡಾ.ದಿನೇಶ್ ಬೈರೇಗೌಡ ಅವರು ತಿಳಿಸಿದ್ದಾರೆ.