

ಮಂಡ್ಯ: ಮದ್ದೂರು ತಾಲೂಕು ಚೊಟ್ಟನಹಳ್ಳಿ ಗ್ರಾಮದಲ್ಲಿ 2015ರಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರಿಗೆ ಐದು ವರ್ಷ ಸಜೆ ಹಾಗೂ ತಲಾ 10 ಸಾವಿರ ರೂ ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಬಿ.ವಸ್ತ್ರಮಠ ಆದೇಶಿಸಿದ್ದಾರೆ.
ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕು ಹೊನ್ನೂರು ಗ್ರಾಮದ ಕೆಂಪರಾಜು, ಶಿವಣ್ಣ, ನಂಜುಂಡ, ರಾಜು ಶಿಕ್ಷೆಗೆ ಒಳಗಾದವರು. ಇವರು ಅದೇ ಗ್ರಾಮದ ಸಿದ್ದಶೆಟ್ಟಿ ಎಂಬುವರನ್ನು ಕೊಲೆ ಮಾಡಿದ್ದರು.
ಇವರೆಲ್ಲರೂ ಚೊಟ್ಟನಹಳ್ಳಿ ಗ್ರಾಮದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. 2015 ಸೆ.24ರಂದು ಅಡುಗೆ ಮಾಡಿಲ್ಲವೆಂಬ ಕಾರಣಕ್ಕೆ ಕೆಂಪರಾಜು, ಕಪಾಲಕ್ಕೆ ಹೊಡೆದ ಪರಿಣಾಮ ಸಿದ್ದಶೆಟ್ಟಿ ಮೃತಪಟ್ಟಿದ್ದನು. ಈ ಬಳಿಕ ನೇಣು ಹಾಕಿಕೊಂಡು ಮೃತನಾಗಿರುವಂತೆ ಚಿತ್ರಣ ಸೃಷ್ಟಿಸಿ ಟಾಟಾಸುಮೋದಲ್ಲಿ ಶವವನ್ನು ಗ್ರಾಮಕ್ಕೆ ಕಳುಹಿಸಿದ್ದರು. ಆದರೆ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಕುಟುಂಬದವರು, ಶವವನ್ನು ಮತ್ತೆ ಮಂಡ್ಯ ಜಿಲ್ಲಾಸ್ಪತ್ರೆಗೆ ತೆಗೆದುಕೊಂಡು ಬಂದು ಪರೀಕ್ಷೆ ನಡೆಸಿದ್ದರು. ಜತೆಗೆ ಸಾವಿನ ಬಗ್ಗೆ ತನಿಖೆ ಮಾಡುವಂತೆ ಬೆಸಗರಹಳ್ಳಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.