

ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಇಡೀ ಆಡಳಿತದುದ್ದಕ್ಕೂ ಮಾಡಿದಂತಹ ಕೆಲಸಗಳು ಪ್ರಸ್ತುತ ನಮ್ಮ ಕಣ್ಣ ಮುಂದೆ ಗೋಚರಿಸುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬುಧವಾರ ಆಯೋಜಿಸಿದ್ದ ‘ನಾಲ್ವಡಿ ಕೃಷ್ಣರಾಜ ಒಡೆಯರ್’ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು. ಜನರ ಜೀವನದ ಬಗ್ಗೆ ಸಾಕಷ್ಟು ಪರಿಕಲ್ಪನೆ ಇಟ್ಟುಕೊಂಡಿದ್ದ ನಾಲ್ವಡಿ ಅವರು, ಗೃಹಬಳಕೆ, ಕೃಷಿ ಮತ್ತು ಕೈಗಾರಿಕೆ ಅವಶ್ಯಕತೆ ಬೇಕಾದಂತಹ ವಿದ್ಯುತ್‌ಚ್ಛಕ್ತಿಯನ್ನು ನಾಡಿಗೆ ತಂದುಕೊಟ್ಟರು. ಏಷ್ಯಾ ಖಂಡದಲ್ಲೇ ಜಲವಿದ್ಯುತ್ ಉತ್ಪಾದನೆ ಮಾಡಿದ ಮೊದಲ ರಾಜ್ಯ ಎಂಬ ಖ್ಯಾತಿಗೆ ಒಳಗಾದರು. ಅವರು ಕೇವಲ ಒಬ್ಬ ರಾಜನಾಗಿರಲಿಲ್ಲ .ಶಿಕ್ಷಣದಲ್ಲಿ ಉನ್ನತ ಅಧ್ಯಯನವನ್ನು ಮಾಡಿದವರು. ಶಿಕ್ಷಣಕ್ಕೆ ಮಹತ್ವ ಕೊಟ್ಟವರು. ಬುದ್ಧ ಹೇಳಿರುವಂತೆ ನಿನಗೆ ನೀನೆ ಗುರು ನಿನಗೆ ನೀನೆ ಬೆಳಕು ಎಂಬತೆ ನಮಗೆ ಶಿಕ್ಷಣ ಬೇಕೇ ಬೇಕು ಎಂದು ಶಿಕ್ಷಣಕ್ಕೆ ಮಹತ್ವ ನೀಡಿದರು ಎಂದರು.
ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದರೆ ಇಡೀ ಭಾರತ ದೇಶವನ್ನು ಮೈಸೂರಿನ ಕಡೆಗೆ ಆಕರ್ಷಿಸುವಂತಹ ವ್ಯಕ್ತಿತ್ವ. ಈ ವ್ಯಕ್ತಿತ್ವ ಬರುವುದಕ್ಕೆ ಮೂಲ ಕಾರಣ ಅವರ ನಡೆ-ನುಡಿ, ನಿರ್ಧಾರಗಳು ಹಾಗೂ ಅವರ ಆದರ್ಶ. ನಾಲ್ವಡಿ ಅವರ ಆಡಳಿತ ದಾರಿಯು ಎಲ್ಲ ಕಾಲದಲ್ಲೂ ಜನರ ಪರವಾಗಿ, ಅಭಿವೃದ್ಧಿಯ ಪರವಾಗಿ, ಮಾನವನ ಸಂಪನ್ಮೂಲದ ಸದುಪಯೋಗಕ್ಕಾಗಿ ದೊಡ್ಡ ಶಕ್ತಿಯಾಗಿ ದೇಶದ ಮುಂದೆ ಕಾಣಿಸುತ್ತದೆ. ಸ್ವಾತಂತ್ರ್ಯ ಬರುವುದಕ್ಕೂ ಮೊದಲೇ ಉತ್ತಮ ದೃಷ್ಟಿಕೋನವು ಅವರ ಆಡಳಿತದಲ್ಲಿ ಇತ್ತು. ಆಡಳಿತ ಮಾಡುವವರು ಪ್ರಜಾಪ್ರಭುತ್ವವಾದಿಗಳಾಗಿ ಇರಬೇಕು. ಪ್ರಜಾಪ್ರಭುತ್ವವಾದಿಯು ಜನರಿಗೋಸ್ಕರ, ಜನರ ಬದುಕಿಗೋಸ್ಕರ, ಅವರ ಏಳಿಗೆಗೋಸ್ಕರ ಎನ್ನುವ ಆದರ್ಶಗಳನ್ನು ಮೈಗೊಡಿಸಿಕೊಂಡಿದ್ದರು ಎಂದು ಸ್ಮರಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್.ತಂಗಡಗಿ ಮಾತನಾಡಿ, ಇಡೀ ದೇಶವೇ ಮೈಸೂರಿನ ಕಡೆ ತಿರುಗಿ ನೋಡುವಂತಹ ಆಡಳಿತವನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಮಾಡಿದ್ದಾರೆ. ಅವರು ಮಾಡಿದಂತಹ ಕೆಲಸಗಳನ್ನು ನಮ್ಮ ಯುವ ಪೀಳಿಗೆಗೆ ಹಾಗೂ ಯುವಕರಿಗೆ ತಿಳಿಸುವುದಕ್ಕಾಗಿ ಅವರ ಜಯಂತ್ಯುತ್ಸವವನ್ನು ದೊಡ್ಡ ಮಟ್ಟದಲ್ಲಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಡಾ.ಎಂ.ಎಸ್.ಅನಿತಾ ಮಾತನಾಡಿ, ಮಾಹಿತಿ ತಂತ್ರಜ್ಞಾನ, ಕೈಗಾರಿಕೆಗಳು, ಸ್ಟಾರ್ಟ್‌ಅಪ್, ಶೈಕ್ಷಣಿಕ ವಲಯ ಹೀಗೆ ಬೆಂಗಳೂರು ಹತ್ತು ಹಲವು ಕ್ಷೇತ್ರಗಳಲ್ಲಿ ಇಂದು ವಿಶ್ವವ್ಯಾಪ್ತಿಯಾಗಿದೆ. ಆದರೆ, ಈ ಸಾಧನೆ ಕೇವಲ ಒಂದೆರಡು ದಶಕಗಳಲ್ಲಿ ಸಾಧನೆಯಾದದ್ದಲ್ಲ. ಅದರ ಹಿಂದೆ ನೂರಾರು ವರ್ಷಗಳ ಪರಿಶ್ರಮವಿದೆ. ಈ ಎಲ್ಲವೂ ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹಾಕಿದ ಅಡಿಪಾಯದ ಮೇಲೆ ಎದ್ದು ನಿಂತಿರುವ ಭವ್ಯ ಸೌಧವಾಗಿದೆ ಎಂದು ತಿಳಿಸಿದರು.
ಶಾಸಕ ಟಿ.ಎಸ್.ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ ಪಿ.ಶಿವರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್ ಮತ್ತಿತರರು ಹಾಜರಿದ್ದರು.