ನಾಲ್ವಡಿ ಚರಿತ್ರೆ ಮುಚ್ಚಿಟ್ಟಿದ್ದ ಪ್ರಬಲ ವರ್ಗ: ಡಾ.ಶಿವಕುಮಾರ್ ಆರೋಪ

25
Published on

ಮೈಸೂರು: ಎಲ್ಲ ವರ್ಗದವರಿಗೆ ಸಮಾನ ಅವಕಾಶ ನೀಡಿದ ಕಾರಣಕ್ಕೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಚರಿತ್ರೆಯನ್ನು ಪ್ರಬಲವಾಗಿದ್ದ ಒಂದು ವರ್ಗ ಉದ್ದೇಶ ಪೂರ್ವಕವಾಗಿ ಮುಚ್ಚಿಟ್ಟಿತ್ತು ಎಂದು ಬೆಂಗಳೂರಿನ ಅಕ್ಕ ಐಎಎಸ್ ಅಕಾಡೆಮಿ ನಿರ್ದೇಶಕ ಡಾ.ಶಿವಕುಮಾರ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮೈಸೂರು ನಗರಪಾಲಿಕೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರು ಅರಮನೆ ಮಂಡಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅರಸು ಮಂಡಳಿ ಸಂಘ ಹಾಗೂ ಅರಸು ಬಳಗಗಳ ಒಕ್ಕೂಟದಿಂದ ನಗರದ ಕಲಾಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ರಾಜರ್ಷಿ ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 139ನೇ ಜಯಂತಿಯಲ್ಲಿ ಮುಖ್ಯಭಾಷಣ ಮಾಡಿದರು.
ತೆರಿಗೆ ಪಾವತಿಸುವ ಎಲ್ಲರೂ ರಾಜ್ಯದಲ್ಲಿ ಸಮಾನರು. ಒಂದು ವರ್ಗದವರು ಮಾತ್ರ ಆಡಳಿತ ವ್ಯವಸ್ಥೆಯಲ್ಲಿ ಇರುವುದು ಸರಿಯಲ್ಲ ಎನ್ನುವ ಅಭಿಪ್ರಾಯ ಹೊಂದಿದ್ದರು. ಅದಕ್ಕಾಗಿ ನ್ಯಾಯಧೀಶರಾಗಿದ್ದ ಲೆಸ್ಲಿ ಮಿಲ್ಲರ್ ನೇತೃತ್ವದಲ್ಲಿ ಆಯೋಗವನ್ನು ರಚಿಸಿದ್ದರು. ಅದುವೇ ದೇಶದ ಮೊದಲ ಹಿಂದುಳಿದ ಆಯೋಗವಾಯಿತು ಎಂದರು.
ಆಯೋಗದ ವರದಿ ಅನ್ವಯ ಒಕ್ಕಲಿಗರು, ಲಿಂಗಾಯತರು ಸೇರಿದಂತೆ ಇನ್ನಿತರ ವರ್ಗದವರಿಗೆ ಶೇ.75ರಷ್ಟು ಮೀಸಲಾತಿ ನೀಡುವ ಮೂಲಕ ಆಡಳಿತದಲ್ಲಿ ಅವಕಾಶ ಮಾಡಿಕೊಟ್ಟರು. ಆದರೆ ಅದಾಗಲೇ ಅಧಿಕಾರದಲ್ಲಿದ್ದ ಮೇಲ್ವರ್ಗದ ಜನರು ಇದನ್ನು ವಿರೋಧಿಸಿದರು. ಅಂದು ದಿವಾನರಾಗಿದ್ದ ಸರ್ ಎಂ.ವಿಶ್ವೇಶ್ವರಯ್ಯ ರಾಜೀನಾಮೆ ನೀಡಿ ಹೊರಬಂದರು ಎಂದು ಹೇಳಿದರು.
ಆದರೂ ಎದೆಗುಂದದೆ ತಾವು ಅಂದುಕೊಂಡಿದ್ದನ್ನು ನಾಲ್ವಡಿ ಅನುಷ್ಠಾನ ಮಾಡಿದರು. ಚಿನ್ನಾಭರಣ ಮಾರಿ ಅಣೆಕಟ್ಟೆ ಕಟ್ಟಿದರು. ಹಲವು ಕಾರ್ಖಾನೆ, ಶಾಲಾ, ಕಾಲೇಜು, ಆಸ್ಪತ್ರೆ, ಕೃಷಿ ಸೇರಿದಂತೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ನಾಂದಿಯಾಡಿದರು. ಇಷ್ಟೆಲ್ಲ ಅಭಿವೃದ್ಧಿ ಕಾರ್ಯ ಮಾಡಿದರೂ ಸಂಸ್ಥಾನದಲ್ಲಿ ಕೇವಲ ಆರು ವರ್ಷ ಅಧಿಕಾರದಲ್ಲಿದ್ದ ವಿಶ್ವೇಶ್ವಯ್ಯ ಅವರ ಬಗ್ಗೆ ದಾಖಲಾದಷ್ಟು ಚರಿತ್ರೆ, ನಾಲ್ವಡಿ ಕೃಷ್ಣರಾಜ ಒಡೆಯರ ಕುರಿತು ದಾಖಲಾಗಲಿಲ್ಲ. ಈಗ ನಾಲ್ವಡಿ ಅವರ ಕುರಿತು ಹೆಚ್ಚಿನ ಸಂಶೋಧನೆ, ದಾಖಲೆ ಆಗುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ರಾಜಪ್ರಭುತ್ವದಲ್ಲಿ ರಾಜ ಪ್ರತ್ಯೇಕ್ಷ ದೇವರು ಎನ್ನುವ ಕಾಲದಲ್ಲಿ ರಾಜ ಪ್ರಭುತ್ವದ ನೈಜ ಅರ್ಥವನ್ನು ಅರ್ಥೈಸಿ, ಪ್ರಜಾಪ್ರಭುತ್ವವನ್ನು ತಿಳಿಸಿಕೊಟ್ಟರು. ಸಾಮಾಜಿಕ ಸಮಾನತೆ, ದೇವದಾಸಿ, ಗೆಜ್ಜೆಪೂಜೆ ಪದ್ಧತಿ ಸಂಪೂರ್ಣ ನಿರ್ಮೂಲನೆ, ವೇಶ್ಯಾವೃತ್ತಿ ತಡೆಗಟ್ಟುವ ಕಾಯ್ದೆ ಜಾರಿ, ವಿಧವೆಯರಿಗೆ ಮರುವಿವಾಹ ಮಾಡಿಕೊಳ್ಳುವ ಕಾಯ್ದೆ ಜಾರಿ, ಸ್ತ್ರೀಯರು ಸೇರಿದಂತೆ ಎಲ್ಲರಿಗೂ ಶಿಕ್ಷಣ ವ್ಯವಸ್ಥೆ ಜಾರಿ ಮಾಡಿದರು ಎಂದರು.
ಮೇಯರ್ ಶಿವಕುಮಾರ್ ಮಾತನಾಡಿ, 200 ವರ್ಷಗಳ ಹಿಂದೆಯೇ ಇಡೀ ಏಷ್ಯಾದಲ್ಲಿ ಮೈಸೂರು ಯೋಜಿತ ನಗರವಾಗಿ ರೂಪುಗೊಂಡಿತ್ತು. ಇದಕ್ಕೆ ಕಾರಣೀಭೂತರು ನಾಲ್ವಡಿ ಕೃಷ್ಣರಾಜ ಒಡೆಯರು. ದೇಶದ ಇತಿಹಾಸದಲ್ಲಿಯೇ ಜನರಿಗಾಗಿ ಸಾಲ ಮಾಡಿ ಅಣೆಕಟ್ಟು ನಿರ್ಮಿಸಿದ ಏಕೈಕ ರಾಜ ನಾಲ್ವಡಿ ಎಂದು ಬಣ್ಣಿಸಿದರು.
ಮೈಸೂರಿಗೆ ಹಲವು ಪ್ರಥಮಗಳ ಕೊಡುಗೆ ನೀಡಿದ ದಕ್ಷ ಆಡಳಿತ ನಡೆಸಿದ ಹೆಮ್ಮೆಯ ರಾಜರು, ಸಾಕಷ್ಟು ದೂರದೃಷ್ಟಿತ್ವ ಹೊಂದಿದ್ದರು. ಹೀಗಾಗಿ ದೇಶದ ಇತರ ರಾಜರಿಗೆ ಮಾದರಿಯಾಗಿದ್ದು, ಮಹಾತ್ಮ ಗಾಂಧಿ ಅವರಿಂದ ‘ರಾಜರ್ಷಿ’ ಎಂದು ಕರೆಸಿಕೊಂಡರೆಂದು ತಿಳಿಸಿದರು.
ಶಾಸಕ ಟಿ.ಎಸ್. ಶ್ರೀವತ್ಸ, ಉಪ ಮೇಯರ್ ಡಾ.ಜಿ.ರೂಪಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಎಂ.ಡಿ. ಸುದರ್ಶನ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜೆ. ಗೋವಿಂದರಾಜು, ಅರಸು ಮಂಡಳಿ ಅಧ್ಯಕ್ಷ ಲಿಂಗರಾಜು ಅರಸ್, ಇತಿಹಾಸ ತಜ್ಞ ನಂಜರಾಜ ಅರಸು, ವಿವಿಧ ಸಂಘಟನೆಯ ಯಮುನಾ, ಅರವಿಂದ ಶರ್ಮ, ಸಿದ್ದರಾಜು, ಶಿವಶಂಕರ್ ಇತರರು ಇದ್ದರು.
ನಾಲ್ವಡಿ ಜಯಂತಿ ಅಂಗವಾಗಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net