ನಾಲ್ಕು ಸಾವಿರ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ: ಸರ್ಕಾರದ ನಡೆ ಖಂಡಿಸಿ ಕನ್ನಡ ಕ್ರಿಯಾ ಸಮಿತಿಯಿಂದ ಸಿಎಂಗೆ ಪತ್ರ

district koppal cm siddaramayya mspl
Published on

ಶಿಕ್ಷಣ ಇಲಾಖೆ ಈ ವರ್ಷ ನಾಲ್ಕು ಸಾವಿರಕ್ಕೂ ಹೆಚ್ಚು ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತೆರೆಯುವುದಾಗಿ ಪ್ರಕಟಣೆ ಕೊಟ್ಟಿರುವುದನ್ನು ಕನ್ನಡ ಕ್ರಿಯಾ ಸಮಿತಿ ಖಂಡಿಸಿದೆ.

ಜತೆಗೆ ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಪತ್ರ ಬರೆದಿದೆ. ಸರ್ಕಾರದ ನೀತಿಯನ್ನು ಕನ್ನಡ ಕ್ರಿಯಾ ಸಮಿತಿ ಖಂಡಿಸುವುದಲ್ಲದೆ, ಹೋರಾಟವನ್ನು ಹಮ್ಮಿಕೊಳ್ಳುತ್ತದೆ ಎಂದು ಎಚ್ಚರಿಸಿದ್ದಾರೆ.

ಪತ್ರದಲ್ಲಿ ಏನಿದೆ?: ಒಂದರಿಂದ ಐದನೇ ತರಗತಿವರೆಗೆ ಮಾತೃಭಾಷೆ ಅಥವಾ ರಾಜ್ಯ ಭಾಷೆಯನ್ನು ಎಲ್ಲ ಶಾಲೆಗಳಲ್ಲಿ, ಸರ್ಕಾರಿ ಹಾಗೂ ಖಾಸಗಿ ಎರಡರಲ್ಲೂ, ಕಡ್ಡಾಯ ಶಿಕ್ಷಣ ಮಾಧ್ಯಮವಾಗಿ ವಿಧಿಸುವ ಉಚಿತ ಕಡ್ಡಾಯ ಶಿಕ್ಷಣ ಮಸೂದೆ-2015ಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಕೊಡಬೇಕೆಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಖುದ್ದಾಗಿ ಒತ್ತಾಯಿಸಿದ ನಿಮ್ಮ ನಡೆಯನ್ನು ಕನ್ನಡ ಕ್ರಿಯಾ ಸಮಿತಿ ಸ್ವಾಗತಿಸಿತ್ತು. ಆದರೆ ಅದರ ಬೆನ್ನಲ್ಲೇ ನಿಮ್ಮ ಸರ್ಕಾರದ ಶಿಕ್ಷಣ ಇಲಾಖೆ ಈ ವರ್ಷ ನಾಲ್ಕು ಸಾವಿರಕ್ಕೂ ಹೆಚ್ಚು ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತೆರೆಯುವುದಾಗಿ ಪ್ರಕಟಣೆ ಕೊಟ್ಟಿರುವುದನ್ನು ನೋಡಿ ಆಘಾತವಾಯಿತು. ಮಾತೃಭಾಷೆ ಶಿಕ್ಷಣ ಮಾಧ್ಯಮದಲ್ಲಿ ನಂಬಿಕೆಯನ್ನು ಪ್ರತಿಪಾದಿಸುತ್ತಾ ಬಂದಿರುವ ನಿಮ್ಮ ನೇತೃತ್ವದ ಸರ್ಕಾರದ ಈ ದ್ವಂದ್ವ ನೀತಿಯನ್ನು ಕನ್ನಡ ಕ್ರಿಯಾ ಸಮಿತಿ ಖಂಡಿಸುತ್ತದೆ ಎಂದು ಸಮಿತಿ ಅಧ್ಯಕ್ಷ ಮ.ಗು.ಸದಾನಂದಯ್ಯ, ಪ್ರಧಾನ ಕಾರ್ಯದರ್ಶಿ ಸ.ರ.ಸುದರ್ಶನ ಪತ್ರ ಬರೆದಿದ್ದಾರೆ.

ಉಚಿತ ಕಡ್ಡಾಯ ಶಿಕ್ಷಣ ಮಸೂದೆ (2015) ಈ ಹಿಂದೆ ನಿಮ್ಮ ಸರ್ಕಾರದಿಂದಲೇ ಮಂಡಿತವಾದ, ಸರ್ವ ಪಕ್ಷಗಳಿಂದ ಬೆಂಬಲ ಪಡೆದ ಮಸೂದೆ. ಮಗುವನ್ನು ಸಾಕಿ ಸಲಹುವ ತಾಯಿಯಾಗಿ. ಗರ್ಭಪಾತ ಮಾಡಿಸುವ ತಾಯಿಯಾಗಬೇಡಿ ಎಂದು ಆಗ್ರಹಿಸಿದ್ದಾರೆ.

ಈ ಕೂಡಲೇ ಈ ಶೈಕ್ಷಣಿಕ ವರ್ಷದಿಂದಲೇ ನಾಲ್ಕು ಸಾವಿರ ಸರ್ಕಾರಿ ಇಂಗ್ಲಿಷ್ ಶಾಲೆಗಳನ್ನು ತೆರೆಯುವ ಆದೇಶವನ್ನು ತಡೆಹಿಡಿಯಿರಿ. ಉಚಿತ ಕಡ್ಡಾಯ ಶಿಕ್ಷಣ ಮಸೂದೆಗೆ ರಾಷ್ಟ್ರಪತಿಗಳ ಒಪ್ಪಿಗೆ ದೊರೆಯುವವರಿಗೆ ಯಾವುದೇ ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯುವುದನ್ನು ಕೈಬಿಡಿ. ಹೊಸದಾಗಿ ರಾಜ್ಯ ಹಾಗೂ ಸಿಬಿಎಸ್ಸಿ ಪಠ್ಯಕ್ರಮದ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಗೂ ಅನುಮತಿ ಕೊಡಬೇಡಿ ಎಂದು ಒತ್ತಾಯಿಸಿದ್ದಾರೆ.

ವಿಧಾನಸಭೆಯಲ್ಲಿ ಉಚಿತ ಕಡ್ಡಾಯ ಶಿಕ್ಷಣ ಮಸೂದೆಗೆ ಆಕ್ಷೇಪಣೆ ಎತ್ತಿದ್ದರೆ ಅದನ್ನು ಮುಚ್ಚಿಟ್ಟು ‘ತಿರಸ್ಕರಿಸಿದೆ’ ಎಂದು ತಪ್ಪು ಮಾಹಿತಿ ನೀಡಿದ, ವಿಧಾನಸಭೆಯಲ್ಲಿ ಅಂಗೀಕರಿಸಿದ್ದ ಉಚಿತ ಕಡ್ಡಾಯ ಶಿಕ್ಷಣ ಮಸೂದೆಗೆ ವಿರುದ್ಧವಾಗಿ ಶಿಕ್ಷಣ ಮಾಧ್ಯಮ ಪೋಷಕರ ಆಯ್ಕೆಗೆ ಬಿಟ್ಟಿದ್ದು ಎಂಬ ಹೇಳಿಕೆ ಕೊಟ್ಟ ಶಿಕ್ಷಣ ಸಚಿವರಿಂದ ರಾಜೀನಾಮೆ ಪಡೆದು ಕನ್ನಡ ಉಳಿಸಿ ಎಂದು ಆಗ್ರಹಿಸಿದ್ದಾರೆ.

ಸರ್ಕಾರ ಆಂಗ್ಲ ಮಾಧ್ಯಮ ತರಗತಿಗಳನ್ನು ಪ್ರಾರಂಭಿಸಬಾರದೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅವರು ಹೇಳಿರುವುದನ್ನು ಕನ್ನಡ ಕ್ರಿಯಾ ಸಮಿತಿ ಸ್ವಾಗತಿಸುತ್ತದೆ. ಆಂಗ್ಲ ಮಾಧ್ಯಮದ ಬದಲಿಗೆ ನಾಲ್ಕೈದು ಶಾಲೆಗಳಿಗೆ ಒಬ್ಬರಂತೆ ಇಂಗ್ಲಿಷ್ ಮಾತುಗಾರಿಕೆಯ (ಸ್ಪೋಕನ್ ಇಂಗ್ಲೀಷ್) ಶಿಕ್ಷಕರನ್ನು ನೇಮಿಸಬೇಕೆಂದು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net