ನಾಯಿಗಳ ಅಟ್ಟಹಾಸಕ್ಕೆ ಕೆ.ಜಿ.ಎಫ್. ನಗರದ ಬಾಲಕನಿಗೆ ಗಾಯ / ಕಿರುಚಾಡಿದರು ಬಿಡದ ನಾಯಿಗಳ ದಂಡು / ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಇತ್ತೀಚೆಗೆ ಜಿಲ್ಲೆಯಲ್ಲಿ ಬೀದಿ ನಾಯಿಗಳ ಅಟ್ಟಹಾಸ ಹೆಚ್ಚಾಗಿದ್ದು, ಕೆ.ಜಿ.ಎಫ್. ನಗರದ ಬಾಲಕೃಷ್ಣ ಬಡಾವಣೆಯ ಅಸ್ಸಾಂ ಮೂಲದ ೪ ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ ಬಾಲಕನಿಗೆ ಕಚ್ಚಿ ಗಾಯಗೊಳಿಸಿವೆ.

ಸೋಮವಾರ ಬೆಳ್ಳಗ್ಗಿನ ಜಾವ ಬಾಲಕೃಷ್ಣ ಬಡಾವಣೆಯ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ೪ ವರ್ಷದ ಅಲೆಕ್ಸ್ ಎಂಬ ಬಾಲಕನನ್ನು ನಾಯಿಗಳ ದಂಡು ದಾಳಿ ಮಾಡಿ ಬಾಲಕನನ್ನು ಅಟ್ಟಾಡಿಸಿಕೊಂಡು ಹೋಗಿ ಗಾಯಗೊಳಿಸಿವೆ. ತೀವ್ರವಾಗಿ ಗಾಯಗೊಂಡ ಬಾಲಕ ಕೆ.ಜಿ.ಎಫ್. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಹೋಟೆಲ್ ಕಾರ್ಮಿರಾಗಿರುವ ಬಂದಿರುವ ಅಸ್ಸಾಂ ಮೂಲದ ದಂಪತಿಗಳ ಪುತ್ರ ಅಲೆಕ್ಸ್ ಬೆಳ್ಳಗ್ಗಿನ ಜಾವ ಮನೆಗೆ ನಡೆದು ಹೋಗುತ್ತಿರುವ ಸಂದರ್ಭದಲ್ಲಿ ಮರ‍್ನಾಲ್ಕು ನಾಯಿಗಳ ದಂಡು ಬಾಲಕನ ಮೇಲೆ ದಾಳಿ ಮಾಡಿವೆ. ಬಾಲಕ ತಪ್ಪಿಸಿಕೊಂಡು ಹೋಡುವ ರಭಸದಲ್ಲಿ ನೆಲಕ್ಕೆ ಉರುಳಿದಾಗ ನಾಯಿಗಳು ತೊಡೆ ಮತ್ತು ಕಾಲುಗಳನ್ನು ಕಚ್ಚಿ ಗಾಯಗೊಳಿಸಿವೆ.

ಬಾಲಕನ ಚೀರಾಟ ಕೇಳಿ ಅಕ್ಕಪಕ್ಕದ ಮನೆಗಳವರು ಈಚೆ ಬಂದು ನಾಯಿಗಳ ದಂಡನ್ನು ಓಡಿಸಿದ್ದಾರೆ. ಇತ್ತೀಚೆಗೆ ಕೆ.ಜಿ.ಎಫ್. ನಗರದಲ್ಲಿ ನಾಯಿಗಳ ಸಂತತಿ ಹೆಚ್ಚಾಗಿದ್ದು, ಜನ ನಿಬಿಡ ರಸ್ತೆ ಮತ್ತು ವೃತ್ತಗಳಲ್ಲಿ ನಾಯಿಗಳ ದಂಡು ಹೆಚ್ಚಾಗಿದ್ದು, ದ್ವಿಚಕ್ರದಲ್ಲಿ ಹೋಗುವ ವಾಹನ ಸವಾರರನ್ನು ಅಟ್ಟಿಸಿಕೊಂಡು ಹೋಗುತ್ತಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ನಗರಸಭೆಯ ನಿರ್ಲಕ್ಷತನವೇ ಇದಕ್ಕೆ ಕಾರಣ. ನಾಯಿಗಳ ಸಂತತಿ ಹೆಚ್ಚಾಗಲು ನಗರಸಭೆಯವರೇ ಕಾರಣರಾಗಿದ್ದಾರೆ. ನಗರದ ಮಾಂಸದ ಅಂಗಡಿಗಳ ಬಳಿ ಬೀಳುವ ತ್ಯಾಜ್ಯವನ್ನು ರಸ್ತೆಗಳಲ್ಲಿಯೇ ಸುರಿಯುತ್ತಿದ್ದಾರೆ. ಇದರಿಂದ ನಾಯಿಗಳು ಸಂತತಿ ಹೆಚ್ಚಾಗಲು ಕಾರಣವಾಗಿದೆ. ನಿಯಂತ್ರಿಸಲು ಪುರಸಭೆಯವರು ಮುಂದಾಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಜಿಲ್ಲೆಯಾದ್ಯಂತ ನಾಯಿಗಳ ಸಂತತಿ ದಿನೇ ದಿನೇ ಹೆಚ್ಚಾಗುತ್ತಿದೆ. ಯಾವುದೇ ರಸ್ತೆಯಲ್ಲಿ ಒಬ್ಬಂಟಿಯಾಗಿ ಮಕ್ಕಳು ಮತ್ತು ವಯೋವೃದ್ಧರು ಓಡಾಡಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ದ್ವಿಚಕ್ರ ವಾಹನಗಳ ಮೇಲೆ ಸಂಚಾರ ಮಾಡುವ ಸಾರ್ವಜನಿಕರನ್ನು ನಾಯಿಗಳು ಅಟ್ಟಿಸಿಕೊಂಡು ಹೋಗುತ್ತಿವೆ. ಹೀಗೆ ಮುಂದುವರೆದರೆ ಮನೆಗಳಿಂದ ಈಚೆ ಬರಲು ಹೆದರಿ ಕೂರುವ ಪರಿಸ್ಥಿತಿ ನಿರ್ಮಾಣವಾಗುತ್ತದೆಂದು ಸಾರ್ವಜನಿಕರು ದೂರಿದ್ದು, ಜಿಲ್ಲಾಡಳಿತ ಕೂಡಲೇ ನಾಯಿಗಳ ಸಂತತಿ ಕಡಿತಗೊಳಿಸುವುದಲ್ಲದೆ ಇರುವ ನಾಯಿಗಳನ್ನು ಸ್ಥಳಾಂತರಿಸಲು ಒತ್ತಾಯಿಸಿದ್ದಾರೆ.

ಚಿತ್ರ ೦೬ ಕೆ.ಎಲ್.ಆರ್. ೦೫ : ನಾಯಿಗಳು ಬಾಲಕನನ್ನು ಕಚ್ಚಿರುವ ಚಿತ್ರ

ಚಿತ್ರ ೦೬ ಕೆ.ಎಲ್.ಆರ್. ೦೫ : ಕೆ.ಜಿ.ಎಫ್. ನಗರದಲ್ಲಿ ನಾಯಿಗಳ ದಂಡು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net