ನಾನು ರಾಜಕೀಯ ಸಂಧ್ಯಾಕಾಲದಲ್ಲಿದ್ದೇನೆ / ರಾಜಕೀಯ ಜನ್ಮ ಕೊಟ್ಟ ಕ್ಷೇತ್ರದ ಜನರ ಋಣ ತೀರಿಸಿಕೊಳ್ಳುತ್ತೇನೆ / ತಾಲ್ಲೂಕಿಗೆ ಕೈಗಾರಿಕಾ ವಲಯ ತರತ್ತೇನೆ / ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ನಾನು ರಾಜಕೀಯ ಸಂದ್ಯಾ ಕಾಲದಲ್ಲಿದ್ದೇನೆ, ನನಗೆ ಜನ್ಮ ಕೊಟ್ಟಿದ್ದು ನನ್ನ ತಂದೆ ತಾಯಿಯಾದರೆ ನನಗೆ ರಾಜಕೀಯ ಜೀವನ ರೂಪಿಸಿದ್ದು ಶ್ರೀನಿವಾಸಪುರ ಕ್ಷೇತ್ರದ ಜನತೆ, ಸುಮಾರು ಐವತ್ತು ವರ್ಷಗಳಿಂದ ರಾಜಕೀಯ ಜೀವನದಲ್ಲಿದ್ದೇನೆ ನನ್ನ ೭೭ ವರ್ಷದ ಅವಧಿಯಲ್ಲಿ ನನಗೆ ಜನ್ಮ ಕೊಟ್ಟ ತಂದೆ ತಾಯಿಗೂ ಮತ್ತು ರಾಜಕೀಯ ಜೀವನ ರೂಪಿಸಿದ ಜನತೆಗೂ ಕೆಟ್ಟ ಹೆಸರು ಬಾರದಂತೆ ತುಂಬಾ ಜಾಗರೂಕತೆಯಿಂದ ಸಾರ್ವಜನಿಕವಾಗಿ ಬದುಕಿದ್ದೇನೆ ಎಂದು ಶಾಸಕ ಜಿ.ಕೆ ವೆಂಕಟಶಿವಾರೆಡ್ಡಿ ಭಾವುಕರಾದರು.

ಶಾಸಕ ವೆಂಕಟಶಿವಾರೆಡ್ಡಿಯವರ ೭೭ನೇ ಹುಟ್ಟು ಹಬ್ಬದ ಪ್ರಯುಕ್ತ ಶ್ರೀನಿವಾಸಪುರ ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಸಾರ್ವಜನಿಕರು ಏರ್ಪಡಿಸಿದ್ದ ೭೭ ಕೆ.ಜಿ ತೂಕದ ಕೇಕ್ ಕತ್ತರಿಸಿ ಮಾತನಾಡಿ, ನಾನು ೧೦ ಭಾರಿ ಚುನಾವಣೆ ಎದರುರಿಸಿ ೫ನೇ ಭಾರಿ ಶಾಸಕನಾಗಿದ್ದೇನೆ. ಜನತೆ ನನಗೆ ಅಧಿಕಾರ ಕೊಟ್ಟಾಗಲೆಲ್ಲಾ ನಾನು ವಿರೋಧ ಪಕ್ಷದ ಶಾಸಕನಾಗಿ ಕೆಲಸ ಮಾಡಿದ್ದೇನೆ. ವಿರೋಧ ಪಕ್ಷದಲ್ಲಿದ್ದರೂ ಯಾರನ್ನೂ ವಿರೋಧ ಮಾಡದೆ ನನ್ನ ಕ್ಷೇತ್ರದ ಅಭಿವೃದ್ದಿಗೆ ಪೂರಕವಾದ ಕೆಲಸಗಳನ್ನು ಮಾಡಿದ್ದೇನೆ. ಪಟ್ಟಣದಲ್ಲಿರುವ ಶೇ.೯೦ ರಷ್ಟು ಸರ್ಕಾರಿ ಕಛೇರಿಗಳು ನನ್ನ ಅಧಿಕಾರ ಅವಧಿಯಲ್ಲಿಯೇ ಆಗಿರುವುದು. ಅಂಬೇಡ್ಕರ್ ಉದ್ಯಾನವನ ಮಾಡಿದ್ದೂ ನಾನೇ, ಇದೀಗ ಪಟ್ಟಣದಲ್ಲಿ ಅಂಬೇಡ್ಕರ್ ಭವನ ಮಾಡುತ್ತಿದ್ದೇನೆ. ತಾಲ್ಲೂಕಿನಲ್ಲಿ ಕೈಗಾರಿಕಾ ವಲಯ ಮಾಡಲು ನನ್ನ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದೇನೆ. ಆದರೂ ಅಡೆ ತಡೆಗಳು ಬರುತ್ತಿವೆ. ಅವುಗಳನ್ನು ನಿವಾರಿಸಿ ತಾಲ್ಲೂಕಿಗೆ ಕೈಗಾರಿಕಾ ವಲಯ ಕೊಟ್ಟು ತಾಲ್ಲೂಕಿನ ಜನತೆ ಸ್ವಾಭಿಮಾನ ಜೀವನ ಕಟ್ಟಿಕೊಳ್ಳಲು ಯೋಜನೆ ರೂಪಿಸುತ್ತೇನೆ ಎಂದರು.

ಕೋಲಾರ ಜೆಡಿಎಸ್ ಮುಖಂಡ ಸಿ.ಎಂ.ಆರ್. ಶ್ರೀನಾಥ್ ಮಾತನಾಡಿ, ವೆಂಕಟಶಿವಾರೆಡ್ಡಿಯವರAತಹ ಹಿರಿಯ ರಾಜಕಾರಣಿಗಳ ಆಶೀರ್ವಾದ ನಮ್ಮಂತಹವರಿಗೆ ಬೇಕಾಗಿದೆ. ಸುಮಾರು ೫೦ ವರ್ಷಗಳಿಂದ ಯಾವುದೇ ರೀತಿಯ ಕಪ್ಪು ಚುಕ್ಕಿಯಿಲ್ಲದ ರೀತಿಯಲ್ಲಿ ರಾಜಕಾರಣವನ್ನು ಮಾಡಿಕೊಂಡು ಬಂದಿದ್ದಾರೆ. ಇಂತವರ ಆದರ್ಶಗಳು ನಮ್ಮಂತವರಿಗೆ ಅವಶ್ಯಕತೆ ಇದೆ. ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಹೆಚ್ಚು ಮಾವು ಮತ್ತು ಟೊಮೆಟೋ ಬೆಳೆಯುವ ರೈತರ ಸಂಖ್ಯೆ ಹೆಚ್ಚಾಗಿದ್ದಾರೆ. ಈ ಭಾಗದಲ್ಲಿ ಮಾವು ಮತ್ತು ಟೊಮೆಟೋ ತಿರುಳು ತೆಗೆಯುವ ಘಟಕ ಸ್ಥಾಪನೆ ಆಗಬೇಕಾಗಿದೆ. ಕೇಂದ್ರದಲ್ಲಿ ನಮ್ಮ ಪಕ್ಷದವರಾದ ಕುಮಾರಸ್ವಾಮಿಯವರು ಬೃಹತ್ ಕೈಗಾರಿಕಾ ಮಂತ್ರಿ ಆಗಿರುವುದರಿಂದ ಅವರ ಮೇಲೆ ಒತ್ತಡ ತಂದು ಈ ಭಾಗದಲ್ಲಿ ತಿರುಳು ತೆಗೆಯುವ ಘಟಕವನ್ನು ಸ್ಥಾಪನೆಗೆ ಒತ್ತು ನೀಡಬೇಕಾಗಿದೆ ಎಂದು ವೆಂಕಟಶಿವಾರೆಡ್ಡಿಯವರನ್ನು ಒತ್ತಾಯಿಸಿದರಲ್ಲದೆ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯಗಳನ್ನು ಒದಗಿಸಲು ಕುಮಾರಸ್ವಾಮಿಯವರ ಬಳಿ ಒತ್ತಡ ತರಬೇಕೆಂದು ಕೋರಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಕೋಲಾರ ಜೆಡಿಎಸ್ ಮುಖಂಡ ಸಿ.ಎಂ.ಆರ್ ಶ್ರೀನಾಥ್, ತಾಲ್ಲೂಕು ವಕ್ಕಲಿಗರ ಸಂಘದ ಅಧ್ಯಕ್ಷ ವೇಣುಗೋಪಾಲ್ ರೆಡ್ಡಿ,ಜೆ.ತಿಮ್ಮಸಂದ್ರ ಗ್ರಾ.ಪಂ ಅಧ್ಯಕ್ಷ ಶಂಕರ ರೆಡ್ಡಿ, ಜೆಡಿಎಸ್ ಮುಖಂಡರಾದ ಗೋಪಿನಾಥ್ ರೆಡ್ಡಿ, ಕಿರಣ್ ರೆಡ್ಡಿ, ಸುಧಾಕರ ರೆಡ್ಡಿ, ರಾಮಕೃಷ್ಣಾರೆಡ್ಡಿ, ಮುನೇಂದ್ರಯ್ಯ ಹಾಜರಿದ್ದರು.

ಚಿತ್ರ ೨೧ ಕೆ.ಎಲ್.ಆರ್. ೦೫ : ಶಾಸಕ ವೆಂಕಟಶಿವಾರೆಡ್ಡಿಯವರ ಹುಟ್ಟುಹಬ್ಬ ಅಂಗವಾಗಿ ಕಲ್ಲೂರು ಗ್ರಾಮದಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net