

ಹಿರಿಯೂರು: ಕನ್ನಡ ನಾಡಿನ ಭಾಷೆ, ಜಲ, ಪರಿಸರ ಸಂರಕ್ಷಣೆಗೆ ಕನ್ನಡಿಗರು ಒಗ್ಗೂಡಿ ಹೋರಾಟ ಮಾಡಬೇಕಿದೆ ಎಂದು ಹಿರಿಯ ಸಾಹಿತಿ ಪ್ರೊ.ಜಿ.ಪರಮೇಶ್ವರಪ್ಪ ಹೇಳಿದರು.
ತಾಲೂಕಿನ ಬಾಲೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶ್ರೀ ಜ್ಯೋತಿ ಸ್ವರೂಪಿಣಿ ಮಹಿಳಾ ಲಲಿತ ಕಲಾ ಸಂಘ ಸಹಯೋಗದಲ್ಲಿ ಮಂಗಳವಾರ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಕನ್ನಡ ಗೀತ ಗಾಯನ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿ ಲಭಿಸಿದ್ದು, ಸರಳವಾದ ಮುತ್ತಿನ ಮಣಿಯಂತಿರುವ ವಿಶ್ವದ ಏಕೈಕ ಭಾಷೆ ಕನ್ನಡವಾಗಿದೆ. ಆದಿ ಕವಿ ಪಂಪನಿಂದ ಹಿಡಿದು ಆಧುನಿಕ ಕವಿ ಚಂಪಾವರೆಗೂ ನೂರಾರು ಕವಿಗಳು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
ರಾಜ್ಯದಲ್ಲಿ ವಿವಿಧ ಭಾಷೆಯ ಜನರು ಹಲವು ರೀತಿಯ ಜನಾಂಗ ಇದ್ದರೂ ಇಲ್ಲಿ ಸಮಗ್ರತೆ, ಐಕ್ಯ ಹಾಗೂ ಕೋಮು ಸೌಹಾರ್ದದಿಂದ ಬಾಳುವ ಮೂಲಕ ಕರ್ನಾಟಕ ಮಾದರಿ ರಾಜ್ಯವಾಗಿದೆ ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ ಮಾತನಾಡಿ, ಜಿಲ್ಲೆಯ ಜಾನಪದ ಕಲೆಗಳು ನಾಡಿಗೆ ಪ್ರಸಿದ್ಧಿಯಾಗಿವೆ. ನಾಡೋಜ, ಸಿರಿಯಜ್ಜಿ, ಬಿದರಕೆರೆಯ ತೋಪಜ್ಜಿಯ ಕೊಡುಗೆ ಬಹುದೊಡ್ಡದಾಗಿದೆ. ಸೋಬಾನೆ, ಭಜನೆ, ಬೀಸುವ ಕಲ್ಲಿನ ಪದ, ಗೊರವನ ಕುಣಿತ, ತಮಟೆ ವಾದ್ಯ, ವೀರಗಾಸೆ, ಪೂಜಾ ಕುಣಿತ, ಜಾನಪದ ಕಲೆಗಳು ನಾಡಿಗೆ ಹಿರಿಮೆ ತಂದಿವೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರ್ತಿಕೋಟೆ ಮಹಾಸ್ವಾಮಿ ಮಾತನಾಡಿ, ಸಾಹಿತ್ಯ, ಸಂಗೀತ, ಕಲೆ, ಜಾನಪದ ಹಾಗೂ ಸಂಕೀರ್ಣ ಕ್ಷೇತ್ರದಲ್ಲಿ ದುಡಿದ ಜಿಲ್ಲೆಯ ಸ್ಥಳೀಯ ಕಲಾವಿದರಿಗೆ ಸಾಹಿತಿಗಳಿಗೆ, ಸಂಗೀತಗಾರರಿಗೆ, ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು. ಬೇರೆ ಜಿಲ್ಲೆಯವರಿಗೆ ಪ್ರಶಸ್ತಿ ನೀಡದೆ ಸ್ಥಳೀಯರಿಗೆ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿದರು.
ಎಸ್‌ಡಿಎಂಸಿ.ಅಧ್ಯಕ್ಷ ಬಿ.ಟಿ.ಶ್ರೀಧರ್, ಮುಖ್ಯ ಶಿಕ್ಷಕ ಜೆ.ನಿಜಲಿಂಗಪ್ಪ, ಹಿರಿಯ ಕಲಾವಿದರಾದ ರವಿಯಣ್ಣ, ಮಂಜಣ್ಣ, ಚೇತನ್, ಭಾಗ್ಯಜ್ಯೋತಿ, ಅರುಣಾಕ್ಷಿ, ತಿಮ್ಮಣ್ಣ, ಶಿಕ್ಷಕರಾದ ಕೆ.ಮಂಜುನಾಥ್, ಬಿ.ರುದ್ರಮ್ಮ, ಅಭಿಲಾಷ, ತಬಲ ವಾದಕರಾದ ಎಸ್.ಶಿವಲಿಂಗಪ್ಪ, ಅಭಿ ಇತರರಿದ್ದರು.