ನಶಿಸಿ ಹೋಗುತ್ತಿದೆ ನೀಲಂ ತಳಿ

10 Srinivaspur -1
Published on

ಶ್ರೀನಿವಾಸಪುರ: ಕಡಿಮೆ ಇಳುವರಿ ಹಾಗೂ ಕಾಯಿಯ ಗಾತ್ರ ಕಡಿಮೆ ಆಗಿದ್ದರೂ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಮಾರಾಟವಾಗುವ ನೀಲಂ ಮಾವಿನ ತಳಿ ಈಗ ಅಳಿವಿನಂಚಿನಲ್ಲಿದ್ದು, ಬಹುತೇಕ ಕಡೆ ಈ ತಳಿ ನಶಿಸಿ ಹೋಗಿದೆ. ನೀಲಂ ತಳಿಗಳಿಂದ ರೈತನಿಗೆ ಇಳುವರಿ ಬರುವುದಿಲ್ಲವೆಂದು ಮರಗಳನ್ನು ತೆಗೆದು ಇಳುವರಿ ಬರುವ ಹಾಗೂ ಉತ್ತಮ ಬೆಳೆ ಬರುವ ಬಾದಾಮಿ, ಬೇನಿಷಾ, ಮಲ್ಲಿಕಾ ಹಾಗೂ ತೋತಾಪೂರಿ ಬೆಳೆಯಲು ಆರಂಭಿಸಿದ್ದರಿಂದ ನೀಲಂ ಅಳಿವಿನಂಚಿಗೆ ಬಂದಿದೆ.

ನೀಲಂ, ರಸಪೂರಿ, ಲಡ್ಡು, ಖುದ್ದೂಸ್, ಮಲಗೊವ ಇವುಗಳು ಹಳೇ ತಳಿಗಳಾಗಿದ್ದು, ಮಾವಿನಲ್ಲಿ ಕೊನೇ ತಳಿ ಎಂದರೆ ನೀಲಂ. ಮಾವಿನ ಸುಗ್ಗಿ ಇನ್ನೇನು 15 ದಿನದೊಳಗೆ ಮುಗಿಯಲಿದೆ. ಆದರೂ ತಾಲೂಕಿನಲ್ಲಿ ಶೇ.5 ರಷ್ಟು ನೀಲಂ ತಳಿಯ ಕಾಯಿ ಉಳಿದುಕೊಂಡಿವೆ. ಉಳಿದಂತೆ ರಸಪೂರಿ ಮತ್ತು ಲಡ್ಡು, ಮಲಗೊವ ಈ ತಳಿಗಳು ಶೇ.1.5 ಮಾತ್ರ ಫಸಲು ಉಳಿದಿದೆ.

ನೀಲಂ ಇಳುವರಿಯೂ ಕಡಿಮೆ ಹಾಗೂ ಕಾಯಿ ಗಾತ್ರ ಕಡಿಮೆ ಇರುತ್ತದೆ ಎಂದು ತೋಟಗಳಲ್ಲಿರುವ ಹಳೇ ಮರ ಮಾತ್ರ ಉಳಿಸಿಕೊಂಡಿದ್ದಾರೆ. ಇದು ಮಾವಿನ ಸುಗ್ಗಿಯಲ್ಲಿ ಕೊನೆಯದಾಗಿ ಹಣ್ಣಾಗುವ ಕಾಯಿಯಾಗಿದ್ದು, ಈ ಕಾಯಿಗೆ ವಾಟೆ ಕೊರೆಯುವ ಹುಳದ ಬಾಧೆ ಇರುವುದರಿಂದ ರೈತರು ಈ ತಳಿ ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ. ತೋಟಗಳಲ್ಲಿರುವ ಹಳೇ ಮರ ನಾಶವಾದರೆ ನೀಲಂ ತಳಿಯೂ ನಾಶವಾಗುತ್ತದೆ. ನೀಲಂ ತಳಿಯ ಹಣ್ಣುಗಳು ತಿನ್ನಲು ರುಚಿಯಾಗಿದ್ದರೂ ಇಳುವರಿ ಬರುವುದಿಲ್ಲ ಎಂದು ರೈತರು ನಿರ್ಲಕ್ಷಿಸಿದ್ದಾರೆ. ಇದು ಹಳೆಯ ದೇಶಿ ತಳಿಯಾಗಿದೆ. ಈ ವರ್ಷ ಮಾರುಕಟ್ಟೆಯಲ್ಲಿ ಒಂದು ಟನ್ 5 ಸಾವಿರದಿಂದ 20 ಸಾವಿರ ರೂವರೆಗೆ ಮಾರಾಟವಾಗುತ್ತಿದೆ.

ನೀಲಂ ತಳಿ ದಿನೇ ದಿನೆ ನಶಿಸಿ ಹೋಗುತ್ತಿದೆ. ಇಳುವರಿ ಕಡಿಮೆ ಹಾಗೂ ಕಾಯಿ ಗಾತ್ರವೂ ಕಡಿಮೆ ಆಗಿರುವುದರಿಂದ ಹೊಸದಾಗಿ ಈ ತಳಿಯ ಸಸಿ ನಾಟಿ ಮಾಡಲು ರೈತರು ಮುಂದಾಗುತ್ತಿಲ್ಲ. ತಾಲೂಕಿನಲ್ಲಿ ಹಳೇ ಮರಗಳು ಮಾತ್ರ ಉಳಿದುಕೊಂಡಿವೆ. ಈ ವರ್ಷ ಈ ತಳಿಯ ಕಾಯಿಗೆ ಉತ್ತಮ ಬೆಲೆಯೂ ಸಿಗುತ್ತಿದೆ. ಚಿನ್ನಪ್ಪರೆಡ್ಡಿ, ಮಾವು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net