

ಕೆ.ಆರ್.ನಗರ: ಪಟ್ಟಣದಲ್ಲಿ ವ್ಯಾಪಾರ ವೃದ್ಧಿಗೊಳಿಸುವ ನಿಟ್ಟಿನಲ್ಲಿ ವರ್ತಕರು ಮತ್ತು ಪುರಸಭೆಯೊಂದಿಗೆ ಸಭೆ ನಡೆಸಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪುರಸಭೆಯ ವಾಣಿಜ್ಯ ಮಳಿಗೆಗಳ ಬಾಡಿಗೆದಾರರ ಸಂಘ ವತಿಯಿಂದ ಪಟ್ಟಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪುರಸಭೆಯ 84 ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ನವೆಂಬರ್‌ನಲ್ಲಿ ನಡೆಯಲಿದ್ದು, ಪ್ರತಿಷ್ಠೆಗಾಗಿ ದುಬಾರಿ ಹಣಕ್ಕೆ ಹರಾಜು ಕೂಗಬಾರದು. ಇಲ್ಲಿ ನಡೆಯುವ ವ್ಯಾಪಾರಕ್ಕೆ ತಕ್ಕಂತೆ ಕೂಗಬೇಕು ಎಂದು ಮನವಿ ಮಾಡಿದರು.
ಪುರಸಭೆಯ ಆಡಳಿತ ಮಂಡಳಿ ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ವ್ಯಾಪಾರಸ್ಥರಿಗೆ ಅನುಕೂಲವಾಗುವ ರೀತಿಯಲ್ಲಿ ಹರಾಜು ಪ್ರಕ್ರಿಯೆ ನಡೆಸಲಾಗುವುದು. ಇದಕ್ಕೆ ವರ್ತಕರು ಸಹಕಾರ ನೀಡಬೇಕು. ಜತೆಗೆ ಗ್ರಾಹಕರಿಗೆ ಉತ್ತಮ ಪದಾರ್ಥ ನೀಡಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ, 1990ರಲ್ಲಿ ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲ್ ಅವರ ಸಹಕಾರದಿಂದ ಅನುದಾನ ತಂದು ಪುರಸಭೆ ವತಿಯಿಂದ ಮಳಿಗೆಗಳನ್ನು ನಿರ್ಮಿಸಲಾಯಿತು. ಪುರಸಭೆ ಆಡಳಿತ ಮಂಡಳಿ ಇದರ ಲಾಭ ಪಡೆದು ನಗರದ ಜನತೆಗೆ ಮೂಲಸೌಕರ್ಯ ಒದಗಿಸಬೇಕು ಎಂದು ಸಲಹೆ ನೀಡಿದರು.
ಬಜಾರ್, ವಿವಿ ರಸ್ತೆ ಸೇರಿದಂತೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಫುಟ್‌ಪಾತ್ ವ್ಯಾಪಾರಿಗಳು ಮತ್ತು ವಾಹನಗಳ ದಟ್ಟಣೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಪುರಸಭೆ ಆಡಳಿತ ಮಂಡಳಿ ಮತ್ತು ಶಾಸಕರು ಪೊಲೀಸ್ ಇಲಾಖೆ ಸಹಕಾರ ಪಡೆದು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗದಂತೆ ಕ್ರಮ ವಹಿಸಬೇಕು ಎಂದು ಸಲಹೆ ನೀಡಿದರು.
ಪುರಸಭೆ ಸದಸ್ಯರಾದ ಕೆ.ಜಿ.ಸುಬ್ರಮಣ್ಯ, ಸೈಯದ್‌ಸಿದ್ದಿಕ್, ಶಂಕರ್, ಶಿವಕುಮಾರ್, ಮಿಕ್ಸರ್ ಶಂಕರ್, ಮಾಜಿ ಸದಸ್ಯ ವಿನಯ್, ಮುಖಂಡರಾದ ಕಾಮಧೇನು ಧರ್ಮ, ವೃಷಬೇಂದ್ರಪ್ಪ, ಲೋಕೇಶ್, ಸಿ.ವಿ.ಮೋಹನ್‌ಕುಮಾರ್, ರಾಮಚಂದ್ರ, ಜಗದೀಶ್, ನಾಗರಾಜು, ಬೇಕರಿಉಮೇಶ್, ಗೋಪಾಲ್, ಪಾಪಣ್ಣಶೆಟ್ಟಿ, ಪುಟ್ಟಸ್ವಾಮಿ, ಕೆ.ಜಿ.ಮಧುಸೂದನ್, ರಾಜು, ಗಂಗರಾಜು, ವಿಜಯಕುಮಾರ್, ಹ್ಯಾರಿಸ್ ಇತರರು ಹಾಜರಿದ್ದರು.