ನವೀಕರಿಸಬಹುದಾದ ಇಂಧನ ಬಳಕ್ಕೆ ಹೆಚ್ಚಾಗಲಿ: ಸಚಿವ ಆರಗ ಜ್ಞಾನೇಂದ್ರ

Published on

ಶಿವಮೊಗ್ಗ: ವಿದ್ಯುತ್ ಜೀವನದ ಅವಿಭಾಜ್ಯ ಅಂಗವಾಗಿದ್ದು ಪೆಟ್ರೋಲ್, ಡೀಸೆಲ್ ಬಳಕೆ ಕಡಿಮೆ ಮಾಡುವ ಮೂಲಕ ಅಸಾಂಪ್ರದಾಯಿಕ ಇಂಧನದ ಬಳಕೆ ಹೆಚ್ಚಿಸಬೇಕಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಕುವೆಂಪು ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ, ಇಂಧನ ಇಲಾಖೆ, ಮೆಸ್ಕಾಂ (ಮಂಗಳೂರು ವಿದ್ಯುಚ್ಚಕ್ತಿ ಸರಬರಾಜು ಕಂಪನಿ) ಶಿವಮೊಗ್ಗ ವೃತ್ತದ ಆಶ್ರಯದಲ್ಲಿ ಉಜ್ವಲ ಭಾರತ, ಉಜ್ವಲ ಭವಿಷ್ಯ ಘೋಷಣೆಯಡಿ ವಿದ್ಯುತ್ ಃ2047 ಮಹೋತ್ಸವದಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಪೆಟ್ರೋಲ್, ಡಿಸೇಲ್‌ಗಾಗಿ ಲಕ್ಷಾಂತರ ಕೋಟಿ ಬಂಡವಾಳ ವ್ಯಯಿಸಲಾಗುತ್ತಿದೆ. ಮುಂದಿನ 10 ವರ್ಷದಲ್ಲಿ ತೈಲ ಬಳಕೆ ಕಡಿಮೆ ಆಗಲಿದ್ದು ಎಲೆಕ್ಟ್ರಿಕಲ್ ವಾಹನಗಳ ಬಳಕೆ ಹೆಚ್ಚಾಗಲಿದೆ. ಈ ಮೂಲಕ ವಿದೇಶಿ ವಿನಿಮಯ ಉಳಿಸುವುದರಿಂದ ದೇಶದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.

ವಿದ್ಯುತ್ ಇಲ್ಲದೆ ಯಾವುದೇ ಕೆಲಸಗಳು ಆಗುವುದಿಲ್ಲ. ನಮ್ಮ ಬದುಕಿಗೆ ಆವರಿಸಿಕೊಂಡಿದ್ದು ಬಾಳಿನಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ವಿದ್ಯುತ್ ಒಂದು ದೊಡ್ಡ ಜಾಲವಾಗಿದ್ದು ಗ್ರಾಹಕರಿಗೆ ಉತ್ತಮ ವಿದ್ಯುತ್ ಸೇವೆ ನೀಡುತ್ತಿದ್ದು, ಅದರಲ್ಲೂ ವಿಶೇಷವಾಗಿ ಲೈನ್‌ಮನ್‌ಗಳು ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.

ಎಂಎಲ್‌ಸಿ ಡಿ.ಎಸ್.ಅರುಣ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಅನೇಕ ಉತ್ತಮ ಯೋಜನೆಗಳನ್ನು ನೀಡಿವೆ. 2047ರ ಹೊತ್ತಿಗೆ ಆಮದು ಮಾಡಿಕೊಳ್ಳುವುದು ಸ್ಥಗಿತಗೊಂಡು, ರಫ್ತು ಮಾಡುವ ಸಂಕಲ್ಪ ನಮ್ಮದಾಗಬೇಕು. ನವೀಕರಿಸಬಹುದಾದ ಇಂಧನದ ಬಗ್ಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿ.ನ ಉಪ ಮಹಾಪ್ರಬಂಧಕ ಮಂಗೇಶ್ ಬನ್ಸೊಡ್ ಪ್ರಾಸ್ತಾವಿಕ ಮಾತನಾಡಿದರು. ಮೆಸ್ಕಾಂ ನಿರ್ದೇಶಕರಾದ ದಿನೇಶ್, ಗಿರಿರಾಜ್, ಶಿವರುದ್ರಪ್ಪ, ಮುಖಂಡರಾದ ಮಾಲತೇಶ್, ರಾಜೇಶ್ ಕಾಮತ್, ವಸಂತಕುಮಾರ್, ಮೋಹನ್, ರಮೇಶ್ ಹೆಗ್ಡೆ, ಮುಖ್ಯ ಇಂಜಿನಿಯರ್ ಬಸಪ್ಪ, ಅಧೀಕ್ಷಕ ಇಂಜಿನಿಯರ್ ಶಶಿಧರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net