

ಬೆಳಗಾವಿ: ಆಧುನಿಕ ಜಗತ್ತಿನಲ್ಲಿ ಪ್ರತಿ ಕ್ಷೇತ್ರದಲ್ಲೂ ಪುರುಷರಿಗೆ ಸಮನಾಗಿ ಮುಂದೆ ಸಾಗುತ್ತಿರುವ ಮಹಿಳೆಯರು ಆರ್ಥಿಕ ಸ್ವಾವಲಂಬನೆಯಲ್ಲೂ ದೃಢ ಹೆಜ್ಜೆ ಇಟ್ಟಿದ್ದಾರೆ. ಇದೀಗ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯ ಕಾಮಗಾರಿಗಳಲ್ಲೂ ಮಹಿಳೆಯರೇ ಮುಂದಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ನರೇಗಾದಡಿ ಏಪ್ರಿಲ್‌ನಿಂದ ಈವರೆಗೆ 59.69 ಲಕ್ಷ ಮಾನವ ದಿನಗಳು ಸೃಜನೆಯಾಗಿದ್ದು, ಅದರಲ್ಲಿ 30.60 ಲಕ್ಷ ಮಾನವ ದಿನಗಳಲ್ಲಿ ಮಹಿಳೆಯರೇ ಪಾಲ್ಗೊಂಡು ಸೈ ಎನಿಸಿಕೊಂಡಿದ್ದಾರೆ. ಒಟ್ಟು ಕಾಮಗಾರಿಯಲ್ಲಿ ಶೇ. 52 ಮಹಿಳೆಯರು ನರೇಗಾದಡಿ ಕೆಲಸ ನಿರ್ವಹಿಸಿದ್ದಾರೆ.
ಸಮಾನ ಕೂಲಿ: ಅಸಂಘಟಿತ ವಲಯದಲ್ಲಿ ಮಹಿಳೆಯರಿಗೆ ಪುರುಷರಿಗಿಂತ ಕಡಿಮೆ ಕೂಲಿ ನೀಡಲಾಗುತ್ತಿದೆ. ಆದರೆ, ನರೇಗಾದಲ್ಲಿ ಸಮಾನ ಕೆಲಸಕ್ಕೆ ಸಮಾನ ಕೂಲಿ ನೀಡಲಾಗುತ್ತಿದೆ. ಪ್ರತಿ ಜಿಲ್ಲೆಯಲ್ಲಿ ಮಹಿಳೆಯರು ನರೇಗಾ ಕಾಮಗಾರಿಗಳಲ್ಲಿ ಪಾಲ್ಗೊಳ್ಳಬೇಕು ಎಂಬುದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆಶಯವಾಗಿದ್ದು, ದಿನಕ್ಕೆ 289 ರೂ. ಕೂಲಿ ಹಾಗೂ 10 ರೂ. ಸಲಕರಣೆ ವೆಚ್ಚ ನೀಡುತ್ತಿದೆ. ಗ್ರಾಮಗಳ ಸಮೀಪದಲ್ಲಿಯೇ ಉದ್ಯೋಗ ಲಭಿಸುತ್ತಿದ್ದು, ಸ್ಥಳೀಯ ಮಹಿಳೆಯರು ಅದರ ಲಾಭ ಗಿಟ್ಟಿಸಿಕೊಳ್ಳುತ್ತಿದ್ದಾರೆ.
ಕಾಯಕ ಮಿತ್ರ ಹುದ್ದೆ: 20 ಸಾವಿರಕ್ಕಿಂತ ಹೆಚ್ಚಿನ ಮಾನವ ದಿನ ಸೃಜನೆ ಮಾಡುವ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲೂ ತಲಾ ಒಬ್ಬ ಮಹಿಳೆಯನ್ನು ‘ಕಾಯಕ ಮಿತ್ರ’ ಹುದ್ದೆಗೆ ನೇಮಕ ಮಾಡಿಕೊಳ್ಳಲು ಸರ್ಕಾರ ಆದೇಶಿಸಿದೆ. ಅದರಂತೆ ಜಿಲ್ಲೆಯಲ್ಲಿ 157 ಗ್ರಾಪಂಗಳಲ್ಲಿ ಮಹಿಳೆಯರನ್ನು ‘ಕಾಯಕ ಮಿತ್ರ’ರನ್ನಾಗಿ ನೇಮಿಸಲಾಗಿದೆ. ಈ ಹುದ್ದೆಗೆ ಕನಿಷ್ಠ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಹೊಂದಿರಬೇಕು. ನರೇಗಾದಡಿ ಕನಿಷ್ಠ 200 ದಿನ ಕೆಲಸ ನಿರ್ವಹಿಸಿರಬೇಕು. ವಿಧವೆ, ಅಂಗವಿಕಲ ಮಹಿಳೆಯರಿಗೆ ನೇಮಕಾತಿಯಲ್ಲಿ 5 ಅಂಕ ಹೆಚ್ಚುವರಿಯಾಗಿ ನೀಡಲಾಗುತ್ತದೆ.
ಖಾತ್ರಿ ಬಗ್ಗೆ ಮಾಹಿತಿ: ಗ್ರಾಪಂಗಳಲ್ಲಿ ನೇಮಕವಾಗುವ ‘ಕಾಯಕ ಮಿತ್ರ’ರು ಮನೆಗಳಿಗೆ ಭೇಟಿ ನೀಡಿ, ಉದ್ಯೋಗ ಖಾತ್ರಿ ಬಗ್ಗೆ ಮಾಹಿತಿ ನೀಡುತ್ತಾರೆ. ಉದ್ಯೋಗ ಚೀಟಿ ಇಲ್ಲದವರಿಗೆ ಚೀಟಿ ಮಾಡಿಸಿಕೊಟ್ಟು, ಕೆಲಸಕ್ಕೆ ಬರಲು ಪ್ರೇರೇಪಿಸುವ ಕೆಲಸ ಮಾಡುತ್ತಾರೆ. ಮಹಿಳಾ ಸ್ವ-ಸಹಾಯ ಸಂಘಗಳಿಗೂ ಈ ಬಗ್ಗೆ ತಿಳಿ ಹೇಳುತ್ತಾರೆ. ಅಲ್ಲದೆ, ಗ್ರಾಮಗಳಲ್ಲಿನ ನರೇಗಾ ಕಾಮಗಾರಿಗಳ ದಾಖಲೆಗಳನ್ನು ನಿರ್ವಹಿಸುವ ಕಾರ್ಯದಲ್ಲೂ ತೊಡಗಿಕೊಳ್ಳುತ್ತಾರೆ.
ಕಳೆದ ಎರಡು ವರ್ಷದಿಂದ ಕರೊನಾ ಲಾಕ್‌ಡೌನ್‌ನಿಂದ ಕೆಲಸದಿಂದ ವಂಚಿತರಾಗಿದ್ದ ಗ್ರಾಮೀಣ ಮಹಿಳೆಯರಿಗೆ ನರೇಗಾ ಕೆಲಸಗಳು ಕೈ ಹಿಡಿದಿವೆ. ಪುರುಷರಿಗೆ ಸರಿಸಮಾನವಾಗಿ ವೇತನವೂ ಲಭಿಸುತ್ತಿರುವುದರಿಂದ ನರೇಗಾ ಯೋಜನೆಗೂ ಹೆಚ್ಚಿನ ಮಹತ್ವ ಬಂದಿದೆ. ಬೆಳಗಾವಿ ಜಿಲ್ಲೆಯಲ್ಲಿ 506 ಗ್ರಾಮ ಪಂಚಾಯಿತಿಗಳಿದ್ದು, ಈ ಪೈಕಿ 255 ಗ್ರಾಪಂಗಳು ಮಾತ್ರ ನರೇಗಾದಲ್ಲಿ 20 ಸಾವಿರಕ್ಕಿಂತಲೂ ಹೆಚ್ಚು ಮಾನವ ದಿನಗಳನ್ನು ಸೃಜಿಸುತ್ತಿವೆ. ಹೀಗಾಗಿ, ಈ ಪಂಚಾಯಿತಿಗಳಿಗೆ ಕಾಯಕ ಮಿತ್ರ ಹುದ್ದೆ ಸೃಷ್ಟಿಸಲಾಗುತ್ತಿದೆ. ನಂತರ ದಿನಗಳಲ್ಲೂ ಯಾವ ಪಂಚಾಯಿತಿ ನಿಗದಿತ ಮಾನವ ದಿನ ಸೃಜಿಸುತ್ತದೆಯೋ ಆ ಪಂಚಾಯಿತಿಗೆ ‘ಕಾಯಕ ಮಿತ್ರ’ ಹುದ್ದೆ ಮಂಜೂರು ಮಾಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನರೇಗಾ ಕಾಮಗಾರಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದಕ್ಕೆ ‘ಕಾಯಕ ಮಿತ್ರ’ ಹುದ್ದೆ ಅನುಕೂಲವಾಗಲಿದೆ. ಜಿಲ್ಲೆಯಲ್ಲಿ 255 ಗ್ರಾಪಂಗಳಿಗೆ ಇದೇ ಮೊದಲ ಬಾರಿಗೆ ಈ ಹುದ್ದೆ ಸೃಷ್ಟಿಸಲಾಗಿದೆ. ಇದು ರಾಜ್ಯದ ಎಲ್ಲ ಜಿಲ್ಲೆಗಳಿಗೂ ಅನ್ವಯಿಸಲಿದೆ.| ಎಚ್.ವಿ. ದರ್ಶನ ಸಿಇಒ, ಜಿಪಂ, ಬೆಳಗಾವಿ
| ಜಗದೀಶ ಹೊಂಬಳಿ