

ಯಳಂದೂರು: ತಾಲೂಕಿನ ಗೌಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪಿಯಲ್ಲಿ ಪ್ರಸಕ್ತ ಸಾಲಿನಲ್ಲಿ 1.03 ಕೋಟಿ ರೂ. ಕಾಮಗಾರಿ ನಡೆದಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವನಂಜಮ್ಮ ಮಾಹಿತಿ ನೀಡಿದರು.
ಗ್ರಾಮ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸಾಮಾಜಿಕ ಲೆಕ್ಕ ತಪಾಸಣಾ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು. ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ಅರಣ್ಯ, ಕೃಷಿ, ರೇಷ್ಮೆ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳು, ಗ್ರಾಮ ಪಂಚಾಯಿತಿಯ ಒಟ್ಟು 224 ಕಾಮಗಾರಿಗಳು ನಡೆದಿವೆ. ಇದರಲ್ಲಿ 16.79 ಲಕ್ಷ ರೂ.ಕೂಲಿ ಹಣ ಪಾವತಿಸಲಾಗಿದ್ದು, 87.78 ಲಕ್ಷ ರೂ. ಸಾಮಗ್ರಿಗಳಿಗೆ ವ್ಯಯ ಮಾಡಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯು ಪಂಚಾಯಿತಿ ಅಭಿವೃದ್ಧಿಗೆ ಸಹಕಾರಿಯಾಗಿದ್ದು, ಇದರಿಂದ ಗ್ರಾಮೀಣರಿಗೆ ಕೂಲಿ ಲಭ್ಯವಾಗುವ ಜತೆಗೆ ಗ್ರಾಮಗಳ ಅಭಿವೃದ್ಧಿಯೂ ಆಗಲಿದೆ. ಅಲ್ಲದೆ ರೈತರು ತಮ್ಮ ಜಮೀನುಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು, ರಸ್ತೆ ನಿರ್ಮಿಸಿಕೊಳ್ಳಲು ಇದರಿಂದ ಸಾಧ್ಯವಿದ್ದು ಪ್ರತಿಯೊಬ್ಬರೂ ಇದರ ಲಾಭ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಬನ್ನಿ ಸಾರಿಗೆ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಬ್ಯಾಂಕ್ ಖಾತೆ ಇಲ್ಲದ ಕಾರ್ಮಿಕರ ಕೂಲಿ ಮೊತ್ತವನ್ನು ಬೇರೆಯವರ ಖಾತೆಗೆ ಹಾಕಲಾಗಿದ್ದು, ಕೆಲಸ ಮಾಡಿದವರಿಗೆ ಕೂಲಿ ಇಲ್ಲದಂತಾಗಿದೆ ಎಂದು ಕೆಲ ಕಾರ್ಮಿಕರು ದೂರಿದರು. ಈ ಬಗ್ಗೆ ಕೂಡಲೇ ಕ್ರಮ ವಹಿಸುವುದಾಗಿ ಪಿಡಿಒ ಗಿರೀಶ್ ಭರವಸೆ ನೀಡಿದರು.
ಗ್ರಾಪಂ ಉಪಾಧ್ಯಕ್ಷ ಆರ್.ರಘು, ಸದಸ್ಯರಾದ ಚಂದ್ರಶೇಖರ್, ಪ್ರಭುಸ್ವಾಮಿ, ಚಿನ್ನಸ್ವಾಮಿ, ಉಮೇಶ್, ನಾಗರಾಜು, ಸುಂದರ್ ಪ್ರಸನ್ನಕುಮಾರ್, ನೋಡಲ್ ಅಧಿಕಾರಿ ಮಲ್ಲಿಕಾರ್ಜುನಸ್ವಾಮಿ, ಲೆಕ್ಕ ಸಹಾಯಕ ನಾಗೇಶ್ ಇತರರು ಇದ್ದರು.