ನಮ್ಮ ಶಾಸಕರು ಪಕ್ಷ ತೊರೆಯುವವರು ಯಾರೂ ಇಲ್ಲ: ಎಚ್.ಡಿ.ಕುಮಾರಸ್ವಾಮಿ

ನಮ್ಮ ಶಾಸಕರು ಪಕ್ಷ ತೊರೆಯುವವರು ಯಾರೂ ಇಲ್ಲ: ಎಚ್.ಡಿ.ಕುಮಾರಸ್ವಾಮಿ
Published on

ಹಾಸನ: ಕಾಂಗ್ರೆಸ್ ಪಕ್ಷದ ಬಲವಂತಕ್ಕೆ ಮತ್ತು ಆಮಿಷಗಳಿಗೆ ನಮ್ಮ ಶಾಸಕರು ಪಕ್ಷ ತೊರೆಯುವವರು ಯಾರೂ ಇಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ನಗರದ ಹೊರವಲಯದ ಹೊಯ್ಸಳ ರೆಸಾರ್ಟ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳವಾರ ಸಂಜೆ ಪಕ್ಷದ ಶಾಸಕರ ಸಭೆ ನಡೆಸಿದ್ದು, 19 ಶಾಸಕರ ಪೈಕಿ 18 ಶಾಸಕರು ಭಾಗವಹಿಸಿದ್ದಾರೆ. ಶಾಸಕ ಶರಣ ಗೌಡ ಕಂದಕೂರು ನಮ್ಮ ಮನೆ ಮಗ ಇದ್ದ ಹಾಗೆ. ಸ್ವಲ್ಪ ಗೊಂದಲದಲ್ಲಿದ್ದಾರೆ. ಅದನ್ನು ಸರಿಪಡಿಸುತ್ತೇವೆ. ಪಕ್ಷ ಬಿಡುವುದಾಗಲಿ, ಆಮಿಷಗಳಿಗೆ ಒಳಗಾಗುವುದಿಲ್ಲ ಎಂದರು.

ಜೆಡಿಎಸ್‌ನ 5ರಿಂದ 8 ಶಾಸಕರು ಕಾಂಗ್ರೆಸ್‌ಗೆ ಹೋಗುತ್ತಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಈ ಗೊಂದಲ ಸರಿಪಡಿಸಬೇಕು ಎಂದು ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಅವರು ನಮ್ಮ ಬಳಿ ಹೇಳಿದಾಗ, ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವಾಗ ರಾಜ್ಯದ ಹೊರಗೆ ಹೋಗುವುದು ಬೇಡ, ಇಲ್ಲೇ ಸಭೆ ಮಾಡೋಣ ಎಂದು ಶಾಸಕರು ಹೇಳಿದಾದ ಹಾಸನಾಂಬೆ ದರ್ಶನ ಪಡೆದು ಇಲ್ಲೇ ಸಭೆ ನಡೆಸಲು ತೀರ್ಮಾನಿಸಲಾಯಿತು. ಹೀಗಾಗಿ ಎಲ್ಲಾ ಗೊಂದಲಗಳಿಗೆ ಬಲವಾದ ಸಂದೇಶ ಕೊಡಲು ಎಲ್ಲರೂ ಒಗ್ಗೂಡಬೇಕಾಯಿತು. ಸಭೆಯಲ್ಲಿ ಶಾಸಕರ ಸಮಸ್ಯೆ, ಮುಂದಿನ ಲೋಕಸಭೆ ಚುನಾವಣೆ ತಯಾರಿ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿ:

ಗುಪ್ತಚರ, ಕಾಂಗ್ರೆಸ್ ಹೈಕಮಾಂಡ್ ಮಾಹಿತಿ ಪ್ರಕಾರ ಕಾಂಗ್ರೆಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕರು, ಸಚಿವರೊಂದಿಗೆ ಉಪಾಹಾರ ಸಭೆ ನಡೆಸಿ ಜೆಡಿಎಸ್-ಬಿಜೆಪಿಯಿಂದ ಪ್ರಮುಖ 50 ಜನರನ್ನು ಕರೆತರಲು ಟಾಸ್ಕ್ ನೀಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ ನಮ್ಮ ಶಾಸಕರನ್ನು ಪಕ್ಷಕ್ಕೆ ಸೆಳೆಯಲು ಯಾಕೆ ಮಾನಸಿಕ ಹಿಂಸೆ ನೀಡುತ್ತೀರಾ? ಯಾಕೆ ಈ ಕಸರತ್ತು? ಯಾಕೆ ಔತನಕೂಟದ ಸಭೆ ಪ್ರಾರಂಭವಾಗಿದೆ ಎಂದು ಪ್ರಶ್ನಿದ ಅವರು, ನಿಮ್ಮ ಹೆಗ್ಗಣ ಸತ್ತು ಬಿದ್ದಿರುವುದು ನಿಮ್ಮ ತಟ್ಟೆಯಲ್ಲಿ, ಹೀಗಿರುವಾಗ ಕೀಳುಮಟ್ಟದ ರಾಜಕಾರಣ ಮಾಡುವುದನ್ನು ನಿಲ್ಲಿಸಿ ಎಂದು ಕಾಂಗ್ರೆಸ್ ಮುಖಂಡರಿಗೆ ತಿರುಗೇಟು ನೀಡಿದರು.

ಕಾಂಗ್ರೆಸ್ ಸಚಿವರು ನಮ್ಮನ್ನು ಪಿಪಲ್ ಲೆಸ್ ಜೆಡಿಎಸ್, ಲೀಡರ್‌ಲೆಸ್ ಬಿಜೆಪಿ ಎಂದು ವ್ಯಂಗ್ಯವಾಡುತ್ತಾರೆ. ಹೀಗಿರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರದಿಂದ ಬರ ಪರಿಹಾರ ಕೊಡಿಸಿ ಎಂದು ನಮ್ಮನ್ನು ಏಕೆ ಕೇಳಬೇಕು? ಹದಿನಾಲ್ಕು ಬಾರಿ ಬಜೆಟ್ ಮಂಡಿಸಿ ಆರ್ಥಿಕ ತಜ್ಞರಾಗಿದ್ದೀರಿ, ನಿಮಗೆ 17 ಸಾವಿರ ಕೋಟಿ ರೂ. ಬರ ಪರಿಹಾರ ಸಿಗುತ್ತದೆಯೋ ಇಲ್ಲವೋ ಎಂಬುದು ನಿಮಗೆ ಗೊತ್ತಿಲ್ಲವೇ? ಕೇಂದ್ರ ಬರ ಅಧ್ಯಯನ ತಂಡ ಪರಿಶೀಲನೆ ಮಾಡಿ ಹೋಗಿ ಇಷ್ಟು ದಿನ ಕಳೆದರೂ ವರದಿ ನೀಡಿದ್ದಾರೋ ಇಲ್ಲವೋ ಎಂಬುದು ನಿಮಗೆ ಗೊತ್ತಿಲ್ಲವೇ? ಇಷ್ಟು ದಿನ ಏನು ಮಾಡುತ್ತಿದೀರಿ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.

ಸಿದ್ದರಾಮಯ್ಯ ಸತ್ಯಹರಿಶ್ವಂದ್ರ:

ಕುಮಾರಸ್ವಾಮಿ ಹೇಳುವುದೆಲ್ಲ ಸುಳ್ಳು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ಸತ್ಯ ಹೇಳುತ್ತೇನೆ ಎಂದು ಹೆಗಲ ಮೇಲೆ ಬೋರ್ಡ್ ಹಾಕಿಕೊಂಡು ಓಡಾಡುತ್ತಿಲ್ಲ. ನನಗೆ ಬರುವ ಮಾಹಿತಿ ಪಡೆದು ವಾಸ್ತವಾಂಶ ಹೇಳುತ್ತೇನೆ ಅಷ್ಟೇ. ನೀವೇ ಸತ್ಯಹರಿಶ್ವಂದ್ರ ಎಂದು ಹೇಳಿಕೊಂಡು ಓಡಾಡುತ್ತಿದ್ದಿರಿ. ಸಿದ್ದರಾಮನಹುಂಡಿಯಲ್ಲಿ ಸತ್ಯಹರಿಶ್ಚಂದ್ರ ಹಾದು ಹೋಗಿದ್ದರಿಂದ ನೀವು ಸತ್ಯವನ್ನೇ ಹೇಳುತ್ತೀರಾ ಎಂದು ಟಾಂಗ್ ನೀಡಿದ ಅವರು, ಸಿದ್ದರಾಮಯ್ಯ ಅವರ ಹುಬ್ಲೋಟ್ ವಾಚ್ ಕಥೆ ಮರೆತಿಲ್ಲ. ಕದ್ದ ವಾಚ್ ಹಾಕಿಕೊಂಡು ಎರಡು ವರ್ಷ ಓಡಾದಿದ್ದೀರಿ. ನಿಮ್ಮಿಂದ ನಾವು ಕಲಿಯಬೇಕಿಲ್ಲ. ನಿಮ್ಮ ಮಂತ್ರಿಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಿ. ನಮ್ಮ ಬಗ್ಗೆ ಮಾತನಾಡಲು ಬರಬೇಡಿ ಎಂದು ಎಚ್ಚರಿಸಿದರು.

ನ.15 ನಂತರ ಬೇರೆ ಪಕ್ಷದಿಂದ ಹಲವರು ಕಾಂಗ್ರೆಸ್‌ಗೆ ಸೇರುತ್ತಾರೆ ಎಂಬ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಕರೆದುಕೊಂಡು ಹೋಗಲಿ. ಅವರನ್ನು ಹಿಡಿದುಕೊಂಡು ಇರುವವರು ಯಾರು? ಇಂಡಿಯಾ ಮೈತ್ರಿಕೂಟದಿಂದ ಒಬ್ಬೊಬ್ಬರೆ ಹೊರ ಹೋಗುತ್ತಿದ್ದಾರೆ. ಮೊದಲು ಅದನ್ನು ಸರಿಪಡಿಸಿಕೊಳ್ಳಿ. ಇದು ಬಹಳ ದಿನ ನಡೆಯಲ್ಲ ಎಂದರು.

ದೇವೇಗೌಡರ ಸ್ಪರ್ಧೆ ಜನರ ನಿರ್ಧಾರ:

ಮುಂದಿನ ಲೋಕಸಭಾ ಚುನಾವಣೆಗೆ ಹಾಸನ ಕ್ಷೇತ್ರದಿಂದ ಎಚ್.ಡಿ. ದೇವೇಗೌಡರು ಸ್ಪರ್ಧೆ ಮಾಡಬೇಕೆಂದು ಶಾಸಕರು ಅವರ ಅಭಿಪ್ರಾಯ ಹೇಳಿದ್ದಾರೆ. ಅಂತಿಮವಾಗಿ ಜಿಲ್ಲೆಯ ಜನರ ಅಭಿಪ್ರಾಯ ಮುಖ್ಯ. ಜನರ ಅಭಿಪ್ರಾಯ ಪಡೆದು ನಿರ್ಧಾರ ಮಾಡುತ್ತೇವೆ. ದೇವೇಗೌಡರಿಗೆ ವಯಸ್ಸಿನ ತೊಂದರೆ ಇದೆ. ಹಾಸನದಲ್ಲಿ ದೇವೇಗೌಡರ ಕುಟುಂಬ ಬಿಟ್ಟು ಒಬ್ಬ ಸಾಮಾನ್ಯ ಕಾರ್ಯಕರ್ತ ಗೆಲ್ಲಬಹುದು ಎಂದು ಜನ ತೋರಿಸಿಕೊಟ್ಟಿದ್ದಾರೆ. ಈ ಪಕ್ಷವನ್ನು ಅಷ್ಟು ಸುಲಭವಾಗಿ ಮುಗಿಸಲು ಆಗುವುದಿಲ್ಲ. ಇದೇ ಪಕ್ಷದಲ್ಲೇ ತಿಂದು-ಉಂಡು ಬೆಳೆದು ಬೈದುಕೊಂಡು ಹೋಗುವವರಿಗೆ ಉತ್ತರ ನೀಡುವ ಕಾಲ ಬರುತ್ತದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net