ನನ್ನ ರಾಜಕೀಯ ಅನುಭವಗಳನ್ನು ಧಾರೆ ಎರೆಯಲು ಸಿದ್ಧ

9
Published on

ಚುನಾವಣಾ ರಾಜಕೀಯದಿಂದ ನಾನು ದೂರವಾಗಿದ್ದರೂ ರಾಜಕೀಯ ಅನುಭವಗಳನ್ನು ಯುವ ರಾಜಕಾರಣಿಗಳು ಸೇರಿದಂತೆ ನಾಡಿನ ಜನತೆಗೆ ಧಾರೆ ಎರೆಯಲು ಸಂಪೂರ್ಣವಾಗಿ ಸಿದ್ಧನಿದ್ದೇನೆ ಎಂದು ಮಾಜಿ ಸಚಿವ ಹಾಗೂ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಹೇಳಿದರು.

ನಗರದ ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರ್ಸ್‌ ಸಭಾಂಗಣದಲ್ಲಿ ಶನಿವಾರ ಅನ್ವೇಷಣಾ ಸೇವಾ ಟ್ರಸ್ಟ್ ಮತ್ತು ಅರಸು ಜಾಗೃತಿ ಅಕಾಡೆಮಿ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ‘ಧ್ವನಿ ಕೊಟ್ಟ ಧಣಿ’ ಪ್ರಶಸ್ತಿ ಪ್ರದಾನ ಮತ್ತು ಸಿಂಧ್ಯಾ ಅವರ 77ನೇ ಹುಟ್ಟು ಹಬ್ಬದ ಶುಭಹಾರೈಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾರಿಗೆ ಇಲಾಖೆ ಸಚಿವನಾಗಿದ್ದಾಗ ಇಲಾಖೆಯ ಸುಧಾರಣೆ ಮತ್ತು ಅಭಿವೃದ್ಧಿಗೆ ವರದಿ ನೀಡಿದ್ದೆ. ಅದನ್ನು ಈಗ ಕೇಂದ್ರದ ನೀತಿ ಆಯೋಗ ಅಧ್ಯಯನ ನಡೆಸುತ್ತಿದೆ ಎಂದು ಹೇಳಿದರು. ಈ ಹಿಂದೆ ಇದ್ದ ಚುನಾವಣಾ ವ್ಯವಸ್ಥೆಗೂ ಈಗಿನ ಚುನಾವಣಾ ವ್ಯವಸ್ಥೆಗೂ ಭಾರಿ ವ್ಯತ್ಯಾಸವಿದ್ದು, ಈಗಿನ ಚುನಾವಣಾ ಪದ್ಧತಿಯಲ್ಲಿ ಬದಲಾವಣೆಯಾಗಬೇಕಿದೆ ಎಂದರು.

ಭಾಷಣದ ವೇಳೆ ತಮ್ಮ ತಾಯಿಯನ್ನು ನೆನೆದು ಭಾವುಕರಾದ ಸಿಂಧ್ಯಾ ಅವರು, ತಾವು ಶಿಕ್ಷಣ ಪಡೆದು ಈ ಮಟ್ಟಿಗೆ ಬೆಳೆಯಲು ಆಕೆಯ ಕೊಡುಗೆಯೇ ಕಾರಣ ಎಂದು ಸ್ಮರಿಸಿದರು.

ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ದೂರದೃಷ್ಟಿಯ ನಾಯಕರಾಗಿದ್ದು, ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸಾಮಾನ್ಯ ಬಡ ಕುಟುಂಬದ ಯುವಕ ಕೂಡ ರಾಜಕೀಯಕ್ಕೆ ಬರಬಹುದು ಎಂಬುದಕ್ಕೆ ಸಿಂಧ್ಯಾ ಅವರು ಸಾಕ್ಷಿಯಾಗಿದ್ದಾರೆ ಎಂದರು.

ಶಾಸಕ ತನ್ವೀರ್‌ಸೇಠ್ ಮಾತನಾಡಿ, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮೂಲಕ ಮಕ್ಕಳಿಗೆ ಪ್ರೇರಣೆ ಮಾರ್ಗದರ್ಶನ ನೀಡುತ್ತಿರುವ ಸಿಂಧ್ಯಾ ಅವರು ತಮ್ಮ ಅನುಭವದ ಮೂಲಕ ಸಮಾಜದ ಅಭಿವೃದ್ಧಿಗೆ ನೆರವಾಗಲಿ ಎಂದು ಆಶಿಸಿದರು. ಮಾಜಿ ಸಚಿವ ಎಂ.ಶಿವಣ್ಣ ಮಾತನಾಡಿ, ಸಿಂಧ್ಯಾ ಅವರು ಶುದ್ಧಹಸ್ತದ ರಾಜಕಾರಣಿಯಾಗಿದ್ದು, ತಮ್ಮ ರಾಜಕೀಯ ಅಧಿಕಾರಾವಧಿಯಲ್ಲಿ ಹಲವು ಖಾತೆಗಳನ್ನು ಯಾವುದೇ ಕಪ್ಪುಚುಕ್ಕೆ ಇಲ್ಲದೇ ಯಶಸ್ವಿಯಾಗಿ ನಿಭಾಯಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ 77 ನೇ ಹುಟ್ಟು ಹಬ್ಬ ಆಚರಿಸಿಕೊಂಡ ಸಿಂಧ್ಯಾ ಅವರನ್ನು ಸನ್ಮಾನಿಸಲಾಯಿತು. ಬಳಿಕ ವಿವಿಧ ಕ್ಷೇತ್ರಗಳ ಸಾಧಕರಿಗೆ ‘ಧ್ವನಿ ಕೊಟ್ಟ ಧನಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್, ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರ್ಸ್‌ನ ಅಧ್ಯಕ್ಷ ಡಾ.ಆರ್.ದೀಪು, ಮೈಸೂರು ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಎ.ಎಸ್.ಸತೀಶ್, ಅರಸು ಜಾಗೃತಿ ಅಕಾಡೆಮಿ ಚಾರಿಟಬಲ್ ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಡಾ.ಎಂ.ಜಿ.ಆರ್.ಅರಸ್, ಅನ್ವೇಷಣಾ ಸೇವಾ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷ ಅಮರನಾಥ ರಾಜೇ ಅರಸ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net