ನನ್ನ ಮಾತಿಂದ ನೋವಾಗಿದ್ದರೆ ಕ್ಷಮೆ ಕೇಳುವೆ

05 HDK 01
ಎಚ್.ಡಿ.ಕೋಟೆ ಅಂಬೇಡ್ಕರ್ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಮಹಿಷಾಸುರ ದಸಾರ ಪೂರ್ವಭಾವಿ ಸಭೆಯಲ್ಲಿ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿದರು.
Published on

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳತ್ತ ವಕೀಲರೊಬ್ಬರು ಶೂ ಎಸೆದ ಘಟನೆ ಖಂಡಿಸಿ ಯಾದಗಿರಿಯಲ್ಲಿ ನಡೆದ ಪ್ರತಿಭಟನಾ ರ‌್ಯಾಲಿ ವೇಳೆ ತಾವು ಆಡಿದ ಮಾತನ್ನು ಕತ್ತರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡಲಾಗಿದೆ. ನ್ಯಾಯಪೀಠಕ್ಕೆ ಅಪಮಾನ ಮಾಡಿದ ಘಟನೆ ಬಗ್ಗೆ ತಮಗೆ ನೋವಿದೆ. ಹೀಗಾಗಿ ಅಂತಹ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಒಂದು ವೇಳೆ ತಮ್ಮ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದಿಸಿ, ಕ್ಷಮೆ ಕೇಳುವೆ ಎಂದು ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ತಿಳಿಸಿದರು.

ಸಂವಿಧಾನಕ್ಕಿಂತ ಸನಾತನವೇ ದೊಡ್ಡದು ಎಂದು ಶೂ ಎಸೆದವರು ಸಮರ್ಥಿಸಿಕೊಂಡು ಇನ್ನೂ ಕ್ಷಮೆ ಯಾಚಿಸಿಲ್ಲ. ಸಂವಿಧಾನದ ಮುಂದೆ ಯಾರೂ ದೊಡ್ಡವರಲ್ಲ. ಹೀಗಿದ್ದರೂ ನ್ಯಾಯಪೀಠಕ್ಕೆ ಅಪಮಾನ ಮಾಡಿದವರು ಇನ್ನೂ ಕ್ಷಮೆ ಯಾಚಿಸದಿರುವುದು ಬೇಸರದ ಸಂಗತಿ. ಈ ನೋವಿನಲ್ಲಿ ತಾವು ಮಾತನಾಡಿದ್ದು, ಅದರ ಪೂರ್ಣ ಭಾಗದ ಬದಲು ಕತ್ತರಿಸಿ ವೈರಲ್ ಮಾಡಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ನ್ಯಾಯಾಧೀಶರು, ವಕೀಲರನ್ನು ಅಪಮಾನಿಸುವ ಮನಸ್ಥಿತಿ ತಮ್ಮದಲ್ಲ. ಸಂವಿಧಾನಕ್ಕೆ, ನ್ಯಾಯಾಧೀಶರು, ವಕೀಲರಿಗೆ ಅಪಮಾನವಾಗುವ ಘಟನೆ ನಡೆದಾಗ ಮೊದಲು ವಿರೋಧಿಸುವವರೇ ನಾವು ಎಂದು ಸ್ಪಷ್ಟ ಪಡಿಸಿದರು. ಮಾಜಿ ಮೇಯರ್ ಪುರುಷೋತ್ತಮ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net