ನನ್ನ ಗೆಲುವು ತಡೆಯಲು ಸಾಧ್ಯವಿಲ್ಲ

WhatsApp Image 2022-11-12 at 4.04.54 PM
Published on

ಬೆಟ್ಟದಪುರ/ರಾವಂದೂರು: ಎರಡೂ ಬಾರಿ ಸೋಲನ್ನು ಅನುಭವಿಸಿ ಮೂರನೇ ಬಾರಿಗೆ ಗೆಲವು ಕಂಡಿರುವ ನನಗೆ ತಾಲೂಕಿನ ಜನರ ಆರ್ಶೀವಾದ ಮೂಲ ಶಕ್ತಿಯಾಗಿದ್ದು, 2023ರ ವಿಧಾನಸಭಾ ಚುನಾವಣೆಯಲ್ಲಿ ನನ್ನ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಶಾಸಕ ಕೆ.ಮಹದೇವ್ ಹೇಳಿದರು.


ಸಮೀಪದ ಕಳ್ಳಿಕೊಪ್ಪಲು ಗ್ರಾಮದಲ್ಲಿ ಶನಿವಾರ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳೇ ನನಗೆ ಶ್ರೀರಕ್ಷೆಯಾಗಿದೆ. ನಾನು ಮಾಡಿರುವ ಅಭಿವೃದ್ಧಿ ಕಾಮಗಾರಿಗಳು ತಾಲೂಕಿನ ಜನರ ಮನಸ್ಸಿನಲ್ಲಿ ಉಳಿದಿದೆ. ಈಗಾಗಲೇ ಅನೇಕರು ಪಕ್ಷಕ್ಕೆ ಸೇರ್ಪಡೆಗೊಂಡು ಬೆಂಬಲ ವ್ಯಕ್ತಪಡಿಸಿದ್ದಾರೆ. ಜನರು ಕೆಲಸ ಮಾಡುವ ಎತ್ತಿಗೆ ಮೇವು ನೀಡುತ್ತಾರೆಯೇ ಹೊರತು ಸೋಮಾರಿ ಎತ್ತಿಗೆ ಅಲ್ಲ ಎಂದು ಅಭಿಪ್ರಾಯಪಟ್ಟರು.


ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಒಳ್ಳೆಯ ಬಾಂಧವ್ಯ ಇದೆ. ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ಮಾಜಿ ಶಾಸಕರು ಅನುದಾನ ತಂದು ತಾಲೂಕಿನ ಅಭಿವೃದ್ಧಿಗೆ ಶ್ರಮಪಟ್ಟಿದ್ದರೆ ಇಂದು ಜನರು ಹೆಚ್ಚಾಗಿ ಸಮಸ್ಯೆಗಳನ್ನು ತೋಡಿಕೊಳ್ಳುತ್ತಿರಲಿಲ್ಲ. ಕ್ಷೇತ್ರದ ಎಲ್ಲರಿಗೂ ಅನುಕೂಲವಾಗುವಂತ ರೀತಿಯಲ್ಲಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದೇನೆ ಎಂದರು.


ಜೆಡಿಎಸ್ ಯುವ ಮುಖಂಡ ಗಗನ್ ಮಾತನಾಡಿ, ಶಾಸಕರು ಮಾಡುವಂಥ ಅಭಿವೃದ್ಧಿ ಕೆಲಸಗಳನ್ನು ಸಹಿಸಲಾಗದೆ ಮಾಜಿ ಶಾಸಕರು ನಾನು ತಂದ ಅನುದಾನದಿಂದ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆಂದು ಆರೋಪ ಮಾಡುತ್ತಿದ್ದಾರೆ ಎಂದರು.


ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಬಿ.ಜೆ ದೇವರಾಜು, ಮುರಳೀಧರ್, ಕಾಳಿಂಗೇಗೌಡ, ಮಹದೇವ, ಕರಿಗೌಡ, ಸಿದ್ದರಾಮೇಗೌಡ, ಮರೀಗೌಡ, ಸಣ್ಣಸ್ವಾಮೀಗೌಡ, ರಾಮಚಂದ್ರ, ಶಂಕರ್, ಚಂದ್ರೇಗೌಡ, ಚನ್ನೇಗೌಡ, ಶಿವಣ್ಣ, ಮಲ್ಲಿಕಾರ್ಜುನ್, ಧನಂಜಯ್, ಇಂಜಿನಿಯರ್ ಮಲ್ಲಿಕಾರ್ಜುನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net