ನನ್ನ ಅನುಭವಿದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಇಲ್ಲ; ಟಿ.ಬಿ.ಜಯಚಂದ್ರ| KPCC President

Jayachandra
Published on

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ವಿಚಾರವಾಗಿ ಬಾಯಿ ಮುಚ್ಕೊಂಡು ಇರಿ(Keep your mouth shut about KPCC president) ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಲ್ವಾ? ಎಂದು ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ(T B Jayachandra) ಪರೋಕ್ಷವಾಗಿ ಸಚಿವ ರಾಜಣ್ಣ ವಿರುದ್ಧ ಗರಂ ಆದರು.

ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಅನುಭವದಲ್ಲಿ ಯಾವ ಬದಲಾವಣೆಯೂ ಆಗುತ್ತಿಲ್ಲ. ನಮ್ಮೆಲ್ಲರ ಗಮನ ಸ್ಥಳೀಯ ಚುನಾವಣೆಗಳ ಮೇಲಿದೆ. ಹೈಕಮಾಂಡ್ ಕೂಡ ಚುನಾವಣೆಯ ಮೇಲೆಯೇ ಗಮನ ಕೇಂದ್ರೀಕರಿಸಿದೆ. ಹಾಗಾಗಿ ಮಲ್ಲಿಕಾರ್ಜುನ ಖರ್ಗೆ ಅವರ ಮಾತನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಕರ್ನಾಟಕದಲ್ಲಿ ಯಾವ ಮಾತೂ ಆಗಿಲ್ಲ. ಬೇರೆ ಬೇರೆ ರಾಜ್ಯಗಳಲ್ಲಿ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ. ಖರ್ಗೆ ಹೇಳಿದ ನಂತರ ಬೇರೆ ರಾಜ್ಯಗಳಲ್ಲಿ ಬದಲಾವಣೆಯಾಗಿದೆ. ಆದರೆ ಕರ್ನಾಟಕದ ಬಗ್ಗೆ ಅವರು ಏನನ್ನೂ ಹೇಳಿಲ್ಲ. ಶಾಸಕರು, ಹಿರಿಯ ನಾಯಕರು, ಮಂತ್ರಿಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಎಚ್ಚರಿಸಿದರು.

2028ರಲ್ಲಿ ನಡೆಯುವ ಚುನಾವಣೆಯಲ್ಲಿ ತಾವೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಡಿ.ಕೆ. ಶಿವಕುಮಾರ್ ನೀಡಿರುವ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಡಿ.ಕೆ. ಶಿವಕುಮಾರ್ ಪಕ್ಷದ ಅಧ್ಯಕ್ಷರಾಗಿರುವುದರಿಂದ ಕಾರ್ಯಕರ್ತರಿಗೆ ಆತ್ಮವಿಶ್ವಾಸ ತುಂಬಲು ಕೆಲವೊಮ್ಮೆಆ ರೀತಿ ಹೇಳಿಕೆ ನೀಡಬೇಕಾಗುತ್ತದೆ. ಅದರಲ್ಲಿ ತಪ್ಪು ಹುಡುಕುವ ಅಗತ್ಯವಿಲ್ಲ ಎಂದು ಸಮರ್ಥಿಸಿಕೊಂಡರು.

ಸಂಪುಟ ಪುನರ್ ರಚನೆ ಕುರಿತ ಪ್ರಶ್ನೆಗೆ, ಆಡಳಿತ ಶೈಲಿ ಹೇಗಿರಬೇಕು ಎಂದು ತೀರ್ಮಾನ ಮಾಡುವವರು ಸಿಎಂ, ವರಿಷ್ಠರು. ವರಿಷ್ಠರು ಅಂದರೆ ಮಲ್ಲಿಕಾರ್ಜುನ ಖರ್ಗೆಯವರು. ಖರ್ಗೆ ಕರ್ನಾಟಕದವರು. ಅವರ ಜೊತೆ ನಾನು ಉಪನಾಯಕನಾಗಿ ಕೆಲಸ ಮಾಡಿದ್ದೇನೆ. ಅವರು ಇಡುವ ಹೆಜ್ಜೆ ಏನು ಎಂಬುದು ನನಗೆ ಚೆನ್ನಾಗಿ ಗೊತ್ತು. ಅವರು ಪಕ್ಷದ ದೃಷ್ಟಿಯಿಂದ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧ ಎಂದು ಹೇಳಿದರು.

ಅಧಿಕಾರದ ದಾಹಕ್ಕೆ ಎಲ್ಲೆ ಇಲ್ಲ. ಪಕ್ಷದ ಚೌಕಟ್ಟಿನಲ್ಲಿ ಕೊಟ್ಟಿರುವ ಹುದ್ದೆಯನ್ನೂ ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದೇನೆ. ಯಾವುದೇ ವಿವಾದ ಮಾಡಿಕೊಳ್ಳದೆ ಸಾಗುತ್ತಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ಸಚಿವ ಸಂಪುಟ ಪುನರ್ ರಚನೆ ಅಂದಾಗ ನಾನು ಒತ್ತಾಯ ಮಾಡುತ್ತೇನೆ ಎಂದು ಹೇಳಿದರು.

ಸಚಿವ ಸತೀಶ್ ಜಾರಕಿಹೊಳಿ 2028ಕ್ಕೆ ಸಿಎಂ ಹುದ್ದೆಗೆ ಟವಲ್ ಹಾಕಿರುವ ಪ್ರಶ್ನೆಗೆ, 2028ರ ಭವಿಷ್ಯವನ್ನು ನಾವ್ಯಾರೂ ಮಾಡುವುದು ಬೇಡ. 138 ಸ್ಥಾನ ಯಾರಿಗೂ ಕೊಡದೆ ನಮಗೆ ಕೊಟ್ಟಿದ್ದಾರೆ. ಜನರ ವಿಶ್ವಾಸ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡೋಣ ಎಂದು ಪ್ರತಿಕ್ರಿಯಿಸಿದರು.

ಬೆಂಗಳೂರು ಉಳಿಯಬೇಕಾದರೆ ಬ್ರ್ಯಾಂಡ್ ಬೆಂಗಳೂರು ಆಗಬೇಕು. ಬ್ರ್ಯಾಂಡ್ ಬೆಂಗಳೂರು ಸುಮ್ಮನೆ ಆಗುವುದಿಲ್ಲ. ಮೇಕೆದಾಟು ಯೋಜನೆ ಆಗಲೇಬೇಕು. ಬ್ರ್ಯಾಂಡ್ ಬೆಂಗಳೂರು ಎಂಜಾಯ್ ಮಾಡುತ್ತಿರುವುದು ಬೇರೆ ದೇಶದ ಜನ ಎಂದರು.

ಹಿರಿಯ ನಾಯಕ ಎಚ್.ಡಿ.ದೇವಡಗೌಡರನ್ನು ನಾವು ಗೌರವಿಸುತ್ತೇವೆ. ಅವರು ಕೃಷ್ಣಾ-ಗೋದಾವರಿ ಜೋಡಣೆ ಅಂತರಾಜ್ಯ ವಿವಾದ ಚರ್ಚೆಗೂ ಮೊದಲು ಮೇಕೆದಾಟು, ಕೃಷ್ಣ ಮೇಲ್ದಂಡೆ ವಿವಾದ ಬಗೆಹರಿಸಲು ಆದ್ಯತೆ ಕೊಡಲಿ ಎಂದು ಜಯಚಂದ್ರ ಟಾಂಗ್ ಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net