ನನೆಗುದಿಗೆ ಬಿದ್ದ ಚಿಕ್ಕಹುಣಸೂರು ಕೆರೆ ಅಭಿವೃದ್ಧಿ

CHIKKAHUNSUR KERE
ಹುಣಸೂರು ನಗರದ ಸಮೀಪದ ಚಿಕ್ಕಹುಣಸೂರು ಕೆರೆಯ ವಿಹಂಗಮ ನೋಟ.
Published on

ಹುಣಸೂರು: ನಗರದ ನಾಗರಿಕರು ಹಲವು ವರ್ಷಗಳಿಂದ ನಿರೀಕ್ಷಿಸುತ್ತಿರುವ ಚಿಕ್ಕಹುಣಸೂರು ಕೆರೆ ಅಭಿವೃದ್ಧಿ ಕಾಮಗಾರಿ ನನೆಗುದಿಗೆ ಬಿದ್ದಿದೆ. ಪ್ರಕೃತಿ ಸೌಂದರ್ಯದ ನಡುವೆ ಹಾಗೂ ನಗರದಿಂದ ಕೂಗಳತೆ ದೂರದಲ್ಲಿರುವ ಈ ಕೆರೆಯನ್ನು ಉಳಿಸಿ ಅಭಿವೃದ್ಧಿಪಡಿಸಬೇಕೆನ್ನುವ ಪರಿಸರ ಪ್ರೇಮಿಗಳ ಕೂಗು ಇಂದಿಗೂ ಕನಸಾಗಿಯೇ ಉಳಿದಿದೆ.

2017ರಲ್ಲಿ ಅಂದಿನ ಸರ್ಕಾರ ಗೋವಿಂದನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಹುಣಸೂರುಕೆರೆ ಅಭಿವೃದ್ಧಿಯನ್ನು ಪ್ರವಾಸೋದ್ಯಮ ಇಲಾಖೆಗೆ ವಹಿಸಿ ಒಂದು ಕೋಟಿ ರೂ. ಅನುದಾನ ನಿಗದಿಪಡಿಸಿತು. ಅದರಂತೆ ಕೆರೆಯ ಒತ್ತುವರಿ ತೆರವುಗೊಳಿಸುವುದು, ಗಡಿ ಗುರುತಿಸುವುದು, ಬೇಲಿ ನಿರ್ಮಾಣ, ಕೆರೆಯ ಸುತ್ತ ವಾಕಿಂಗ್‌ಪಾತ್, ಕೆರೆ ಬದಿಯಲ್ಲಿ ಸ್ಟೋನ್ ಪಿಚಿಂಗ್ ನಿರ್ಮಾಣದೊಂದಿಗೆ ಐಟಿಸಿ ಕಂಪನಿಯ ಸಹಯೋಗದಲ್ಲಿ ಔಷಧ ಸಸ್ಯಗಳ ಉದ್ಯಾನವನದ ನಿರ್ಮಾಣಕ್ಕೆ ಕ್ರಮ ವಹಿಸಲಾಗಿತ್ತು. ಮೊದಲ ಹಂತವಾಗಿ 25 ಲಕ್ಷ ರೂ. ಅನುದಾನ ಬಿಡುಗಡೆಯಾಯಿತು.

ಕಾಮಗಾರಿ ಆರಂಭಗೊಂಡ ನಂತರ ಕೋವಿಡ್ ಇತರ ಕಾರಣಗಳಿಂದ ಕಾಮಗಾರಿ ಸ್ಥಗಿತಗೊಂಡಿತು. ಸರ್ಕಾರ ಬದಲಾದ ನಂತರ ಮತ್ತೆ ಯೋಜನೆಗೆ ನನೆಗುದಿಗೆ ಬಿತ್ತು. ಹಾಗೂ, ಹೀಗೂ ಮತ್ತೆ 40 ಲಕ್ಷ ರೂ. ಹಾಗೂ 15 ಲಕ್ಷ ರೂ. ಅನುದಾನ ಬಿಡುಗಡೆಯಾದರೂ ಕಾಮಗಾರಿ ವಿಳಂಬದಿಂದ ನಿರ್ಧಾರಿತ ಯೋಜನೆಯಂತೆ ಕಾವಗಾರಿ ಮುಂದೆ ಸಾಗಲೇ ಇಲ್ಲ. ಇದೀಗ ಇನ್ನೂ 25 ಲಕ್ಷ ರೂ. ಅನುದಾನ ಬಾಕಿ ಇದ್ದು, ಕೈಗೊಂಡಿದ್ದ ಕಾಮಗಾರಿ ದುಸ್ಥಿತಿ ತಲುಪಿದೆ. ವಾಕಿಂಗ್‌ಪಾತ್ ಸುತ್ತ ಗಿಡಗಂಟಿ ಬೆಳೆದು ಅಕ್ರಮ ಚಟುವಟಿಕೆಗಳ ತಾಣವಾಗಿದ್ದು, ಒತ್ತುವರಿ ತೆರವು ಕಣ್ಣೊರೆಸುವ ತಂತ್ರವಾಗಿದೆ. ಈ ಕುರಿತು ಲೌಡ್ ಸ್ಪೀಕರ್‌ನಲ್ಲಿ ಸ್ಥಳೀಯರು ಮತ್ತು ಜನಪ್ರತಿನಿಧಿಗಳ ಅಭಿಪ್ರಾಯ ಹೀಗಿದೆ.

ಶೀಘ್ರ ಅನುದಾನ ಬಿಡುಗಡೆಗೆ ಕ್ರಮ
ಪ್ರವಾಸೋದ್ಯಮ ಇಲಾಖೆ ಈಗಾಗಲೇ ಬಾಕಿ ಇರುವ 25 ಲಕ್ಷ ರೂ.ಗಳ ಪೈಕಿ 20 ಲಕ್ಷ ರೂ.ಗಳ ಅನುದಾನವನ್ನು ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದೆ. ಆದರೆ ಈ ಅನುದಾನ ಕೆರೆಯ ಅಭಿವೃದ್ಧಿಗೆ ಸಾಕಾಗದು. ಹಾಗಾಗಿ ಇತರ ಮೂಲಗಳು, ಸರ್ಕಾರೇತರ ಸಂಘ, ಸಂಸ್ಥಗಳ ಸಹಯೋಗದಲ್ಲಿ ಕೆರೆಯ ಸಮಗ್ರ ಅಭಿವೃದ್ಧಿಗೆ ಕ್ರಮವಹಿಸಲಾಗಿದ್ದು, ಸಾರ್ವಜನಿಕರ ಸಹಕಾರವೂ ಅಗತ್ಯ.
ಜಿ.ಡಿ.ಹರೀಶ್‌ಗೌಡ ಶಾಸಕ, ಹುಣಸೂರು

ಒತ್ತುವರಿ ತೆರವು ಆಗಿಲ್ಲ
ಕಾಟಾಚಾರಕ್ಕೆ ಕಾಮಗಾರಿ ನಡೆದಂತಿದ್ದು, ಜನರ ಹಣ ಪೋಲಾಗಿದೆ. ಕಾಮಗಾರಿ ಅರಂಭಕ್ಕೂ ಮೊದಲು ಕೆರೆ ಒತ್ತುವರಿಯನ್ನು ತೆರವುಗೊಳಿಸಿ ಗಡಿ ಗುರುತಿಸಿಕೊಳ್ಳಬೇಕಿತ್ತು. ಆದರೆ, ನೆಪಮಾತ್ರಕ್ಕೆ ಕಣ್ಣೊರೆಸುವ ಕಾರ್ಯ ನಡೆದಿದೆ. ಒತ್ತುವರಿ ತೆರವಿಗೆ ತೆರಳಿದ ಅಧಿಕಾರಿಗಳಿಗೆ ರಾಜಕೀಯ ಒತ್ತಡ ತಂದು ತೆರವು ಕಾರ್ಯಾಚರಣೆ ಅಪೂರ್ಣಗೊಳಿಸಲಾಗಿದೆ. ನಗರಕ್ಕೆ ಕಳಶಪ್ರಾಯವಾಗಬೇಕಿದ್ದ ಸ್ಥಳ ಅವ್ಯವಸ್ಥೆಯ ತಾಣವಾಗಿದೆ.
ಸುನೀತಾ ಜಯರಾಮೇಗೌಡ ಚಿಕ್ಕಹುಣಸೂರು

ನೈತಿಕ ಚಟುವಟಿಕೆಗಳ ತಾಣ
ಪ್ರಕೃತಿ ಸೌಂದರ್ಯವನ್ನು ಸವಿಯುವ ನಾಗರಿಕರ ಕನಸು ಕನಸಾಗಿಯೇ ಉಳಿದಿದೆ. ಈ ಹಿಂದೆ ಇದ್ದ ಕೆರೆ ನೈರ್ಮಲ್ಯದಿಂದ ಕೂಡಿತ್ತು. ಇದೀಗ ವಾಕಿಂಗ್ ಪಾಥ್ ನಿರ್ಮಿಸಿ ಅದರ ಸುತ್ತ ಗಿಡಗಂಟಿ ಬೆಳೆದು ನಿಂತ ಪರಿಣಾಮ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಅಶುಚಿತ್ವದಿಂದಾಗಿ ಇಡೀ ಪರಿಸರ ದುರ್ನಾತದಿಂದ ಕೂಡಿದೆ. ಸುತ್ತಮುತ್ತಲ ನಿವಾಸಿಗಳಿಗೆ ರೋಗರುಜಿನಗಳು ಕಾಣಿಸಿಕೊಳ್ಳುವ ಮುನ್ನ ತಾಲೂಕು ಆಡಳಿತ ಎಚ್ಚೆತ್ತುಕೊಳ್ಳಬೇಕು.
ಡಾ.ಎಸ್.ಶ್ರೀಕಾಂತ್ ನಿರ್ದೇಶಕರು, ಡೀಡ್ ಸಂಸ್ಥೆ

ಅಧಿಕಾರಿಗಳ ನಿರ್ಲಕ್ಷೃ ಸರಿಯಲ್ಲ
ಹುಣಸೂರು ನಗರದಲ್ಲಿ ಒಂದೇ ಒಂದು ಸುಸಜ್ಜಿತ ಉದ್ಯಾನವಿಲ್ಲ. ಪ್ರವಾಸೋದ್ಯಮ ಇಲಾಖೆ ಚಿಕ್ಕಹುಣಸೂರು ಕೆರೆ ಅಭಿವೃದ್ಧಿಗೆ ಮುಂದಾಗಿದ್ದು ನಮಗೆಲ್ಲರಿಗೂ ಸಂತಸ ತಂದಿತ್ತು. ಆದರೆ ಅಧಿಕಾರಿಗಳ ತೀವ್ರ ನಿರ್ಲಕ್ಷ್ಯ ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿ ವರ್ತನೆಯಿಂದಾಗಿ ಇಂದು ಕೆರೆ ಇನ್ನಷ್ಟು ಹಾಳಾಗುತ್ತಿದೆ. ಸ್ಥಳೀಯ ನಿವಾಸಿಗಳು ತೀವ್ರ ಪ್ರತಿರೋಧ ತೋರದಿದ್ದರೆ ಮುಂದಿನ ದಿನಗಳಲ್ಲಿ ಕೆರೆ ಕಣ್ಮರೆಯಾದರೂ ಅಚ್ಚರಿಪಡಬೇಕಿಲ್ಲ.
ಮಹದೇವ್ ಚಿಕ್ಕಹುಣಸೂರು ನಿವಾಸಿ

ಒಳಚರಂಡಿ ನೀರು ಬಿಟ್ಟಿದ್ದಾರೆ
ಹುಣಸೂರು-ರತ್ನಪುರಿ ರಸ್ತೆ ಅಭಿವೃದ್ಧಿ ಕಾರ್ಯದ ನೆಪವೊಡ್ಡಿ ಕನಿಷ್ಠ ಪಕ್ಷ ಎರಡು ವರ್ಷ ಈ ಭಾಗದ ಒಳಚರಂಡಿ ನೀರನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೆರೆಯ ಒಡಲಿಗೆ ಬಿಟ್ಟಿದ್ದಾರೆ. ಕೆರೆಯಲ್ಲಿ ಆಗಾಗ್ಗೆ ಮೀನುಗಳ ಮಾರಣಹೋಮ ನಡೆಯುತ್ತಿದೆ. ಇದಕ್ಕೆಲ್ಲ ಹೊಣೆ ಯಾರು? ನಮ್ಮೆಲ್ಲರ ಆಸ್ತಿಯಾಗಬೇಕಿದ್ದ ಕೆರೆ ಇದೀಗ ಅವಸಾನದತ್ತ ಸಾಗುತ್ತಿದೆ. ಸಂಬಂಧಪಟ್ಟ ಇಲಾಖೆ ಕೂಡಲೇ ಇತ್ತ ಗಮನಹರಿಸಿ ಕೆರೆಯನ್ನು ಉಳಿಸಿಕೊಡಬೇಕು.
ಶಿವಲಿಂಗೇಗೌಡ, ಚಿಕ್ಕಹುಣಸೂರು

ಸಮಯ ಕಳೆಯಲು ಉತ್ತಮ ಜಾಗ ಇಲ್ಲ
ಹುಣಸೂರು ನಗರದಲ್ಲಿ ನಾಗರಿಕರು ವೀಕೆಂಡ್‌ನಲ್ಲಿ ಸಮಯ ಕಳೆಯಲು ಅವಕಾಶವೇ ಇಲ್ಲವಾಗಿದೆ. ಬಡಾವಣೆಗಳಲ್ಲಿ ಉದ್ಯಾನಗಳಿಲ್ಲ. ಜತೆಗೆ ಮೂಲಸೌಕರ್ಯಗಳ ಕೊರತೆಯಂತೂ ಹೇಳತೀರದಾಗಿದೆ. ಇಂತಹ ಸ್ಥಿತಿಯಲ್ಲಿ ಹುಣಸೂರು ಜಿಲ್ಲೆಯಾಗುವ ಅರ್ಹತೆ ಇದೆಯೇ ಎನ್ನುವ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಸೂರ್ಯಾಸ್ತಮಾನದ ದೃಶ್ಯವನ್ನು ಕಣ್ತುಂಬಿಕೊಳ್ಳಲು ಚಿಕ್ಕಹುಣಸೂರು ಕೆರೆ ಪ್ರಶಸ್ತ ಸ್ಥಳವಾಗಿದ್ದು, ಪ್ರವಾಸೋದ್ಯಮ ಇಲಾಖೆ ಕೆರೆಯನ್ನು ಹಾಳುಗೆಡವದೆ ಅಭಿವೃದ್ಧಿಪಡಿಸುವತ್ತ ಗಮನಹರಿಸಬೇಕು.
ಮೋದೂರು ಮಹೇಶಾರಾಧ್ಯ ಚಿಂತಕರು, ಹುಣಸೂ
ರು

ಹೆಚ್ಚುವರಿ ಅನುದಾನ ಅಗತ್ಯ
ಪ್ರವಾಸೋದ್ಯಮ ಇಲಾಖೆ ಇದೀಗ 20 ಲಕ್ಷ ರೂ. ಅನುದಾನ ಬಿಡುಗಡೆಯ ಸಿದ್ಧತೆ ನಡೆಸಿದ್ದು, ಉಳಿಕೆ ಕಾಮಗಾರಿ ಕೈಗೊಳ್ಳಬಹುದಾಗಿದೆ. ಆದರೆ ಇಡೀ ಕೆರೆಯ ಆವರಣದ ಶುಚಿ ಕಾರ್ಯವನ್ನು ಮತ್ತೆ ಮಾಡಬೇಕಿದ್ದು, ಇದಕ್ಕಾಗಿ ಹೆಚ್ಚುವರಿ ಅನುದಾನದ ಅಗತ್ಯವಿದೆ. ಈ ಕುರಿತು ಶಾಸಕರಿಗೆ ಈಗಾಗಲೇ ಮಾಹಿತಿ ನೀಡಿದ್ದು, ಕ್ರಮವಹಿಸುವ ಭರವಸೆ ನೀಡಿದ್ದಾರೆ.
ಪ್ರಮೋದ್, ಎಇಇ, ಕೆಆರ್‌ಐಡಿಎಲ್, ಮೈಸೂರು

ಸಾರ್ವಜನಿಕರ ಹಣ ಲೂಟಿ
ವರ್ಷ ಕಳೆದಂತೆ ಚಿಕ್ಕಹುಣಸೂರು ಕೆರೆ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಅಭಿವೃದ್ಧಿ ಹೆಸರಿನಲ್ಲಿ ಸಾರ್ವಜನಿಕರ ಹಣ ಲೂಟಿ ಆಗುತ್ತಿದೆ. ಕೆರೆಯ ಹೂಳನ್ನು ತೆಗೆಯುವ ಕಾರ್ಯ ಆಗಬೇಕು. ಒತ್ತುವರಿ ತೆರವುಗೊಳಿಸಿದಲ್ಲಿ ಕೆರೆಯ ವಿಸ್ತೀರ್ಣ ಮತ್ತಷ್ಟು ಹೆಚ್ಚಲಿದೆ. ಪ್ರಾಣಿಪಕ್ಷಿಗಳ ಜೀವಸಂಕುಲಕ್ಕೆ ಅಗತ್ಯವಾಗಿರುವ ಈ ಕೆರೆಯನ್ನು ಉಳಿಸಿಕೊಳ್ಳುವ ಹೊಣೆಗಾರಿಗೆ ನಗರದ ನಾಗರಿಕರದ್ದಾಗಿದೆ.
ಪ್ರಕಾಶ್, ಪರಿಸರ ಪ್ರೇಮಿ, ಹುಣಸೂರು

ನರೇಗಾ ಯೋಜನೆಯಡಿ ಕ್ರಮ ವಹಿಸಲಿ
ಐದು ವರ್ಷ ಕಳೆದರೂ ಒಂದು ಕೋಟಿ ರೂ.ಗಳನ್ನು ಸರ್ಕಾರ ನೀಡುತ್ತಿಲ್ಲವೆಂದರೆ ನಮ್ಮ ಆಡಳಿತ ವ್ಯವಸ್ಥೆಯ ದುಸ್ಥಿತಿ ತಿಳಿಯಬಹುದಾಗಿದೆ. ಹುಣಸೂರು ನಗರಕ್ಕೆ ಸಮೀಪವಿರುವ ಈ ಕೆರೆಯ ಅಭಿವೃದ್ಧಿಗೆ ಜನಪ್ರತಿನಿಧಿಗಳ ನಿರ್ಲಕ್ಷೃವೇ ಕಾರಣ. ನರೇಗಾ ಯೋಜನೆಯಡಿ ಕೆರೆಯ ಅಭಿವೃದ್ಧಿಗೆ ಪೂರಕ ಕ್ರಮಗಳನ್ನು ಕೈಗೊಳ್ಳಲು ಅವಕಾಶವಿದ್ದಲ್ಲಿ ಗ್ರಾ.ಪಂ.ನವರು ಮುಂದಾಗಬೇಕು.
ದೇವರಾಜ್, ನಗರಸಭಾ ಸದಸ್ಯ, ಹುಣಸೂರು ನಗರಸಭೆ

ಹೋರಾಟ ಅನಿವಾರ್ಯ
ತಾಲೂಕು ಆಡಳಿತ ಹುಣಸೂರು ಸಮೀಪವಿರುವ ಚಿಕ್ಕಹುಣಸೂರು ಕೆರೆಯನ್ನು ಉಳಿಸಲೇಬೇಕು. ಕರವೇ ವತಿಯಿಂದ ಈ ಕುರಿತು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಲೇ ಬರಲಾಗಿದೆ. ಆದರೆ ಪರಿಣಾಮ ಮಾತ್ರ ಶೂನ್ಯ. ಸಹಕಾರ ಹಸ್ತ ಚಾಚುವ ಕೈಗಳು ಸಾಕಷ್ಟಿವೆ. ನಾಗರಿಕರೂ ಈ ಕುರಿತು ಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿದೆ.
ಪುರುಷೋತ್ತಮ, ಅಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net