ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದ ನೃತ್ಯ ರೂಪಕ

nataka
ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಬಸವಣ್ಣನವರ 44 ವಚನಗಳನ್ನಾಧರಿತ ನೀನಲ್ಲದೇ ಮತ್ಯಾರು ಇಲ್ಲವಯ್ಯ ನೃತ್ಯ ರೂಪಕ ನಾಟಕ ಪ್ರದರ್ಶನ ನಡೆಯಿತು.
Published on

ಚಿಕ್ಕಮಗಳೂರು: ಸಾಂಸ್ಕೃತಿಕ ಸಂಘಟನೆಗಳು, ಶಿವಕುಮಾರ ಕಲಾ ಸಂಘ ಸಾಣೇಹಳ್ಳಿ ಸಮ್ಮುಖದಲ್ಲಿ ನಡೆದ ನೀನಲ್ಲದೇ ಮತ್ಯಾರು ಇಲ್ಲವಯ್ಯ ನೃತ್ಯ ರೂಪಕ ನಾಟಕ ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಚಿಕ್ಕಕುರುಬರಹಳ್ಳಿ ಬಸವತತ್ವದ ಪೀಠದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಮಾತನಾಡಿ, ಸಾಂಸ್ಕೃತಿಕ ಆಯಾಮದಲ್ಲಿ ತತ್ವ ಪ್ರದರ್ಶನ ಮಾಡಿದರೆ ಜನ ಸಾಮಾನ್ಯರಲ್ಲಿ ಎಂತಹ ಪರಿಣಾಮ ಬೀರುತ್ತದೆ ಎಂಬುದಕ್ಕೆ ನೃತ್ಯ ರೂಪಕ ಸಾಕ್ಷಿಯಾಗಿದೆ. ಈ ಬಗ್ಗೆ ದೇಶದ ಪ್ರಧಾನಮಂತ್ರಿ ಶ್ಲಾಘಿಸುತ್ತಾರೆ ಎಂದರೆ ಇದೊಂದು ಸಾಮಾನ್ಯ ಸಂಗತಿಯಲ್ಲ. ಇದು ಅಪರೂಪದ ನೃತ್ಯ ರೂಪಕ ಎಂದು ಹೇಳಿದರು.
ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಬಸವಣ್ಣನವರ 12ನೇ ಶತಮಾನದ ವಚನಗಳು ಇಂದಿಗೂ ಪ್ರಸ್ತುತ. ಬಹು ಭಾಷೆಯಲ್ಲಿ ವಚನ ರೂಪಕವನ್ನು ದೇಶದಾದ್ಯಂತ ಪ್ರಸ್ತುತ ಪಡಿಸಿರುವುದು ಹೆಮ್ಮೆಯ ಸಂಗತಿ ಎಂದರು.
ಬಸವಣ್ಣನವರ 44 ವಚನಗಳನ್ನಾಧರಿತ ನೀನಲ್ಲದೇ ಮತ್ಯಾರು ಇಲ್ಲವಯ್ಯ ನೃತ್ಯ ರೂಪಕ ಕಾಫಿನಾಡಿಗರ ಮೆಚ್ಚುಗೆಗೆ ಪಾತ್ರವಾಯಿತು. ನೃತ್ಯ ರೂಪಕದ ಪರಿಕಲ್ಪನೆ ಹಿರಿಯ ಕಲಾವಿದ ಶ್ರೀನಿವಾಸ್ ಜಿ. ಕಪ್ಪಣ್ಣ ಅವರದ್ದಾಗಿದ್ದು ಸಿ.ಅಶ್ವತ್ ಸಂಯೋಜನೆ ಮಾಡಿದ್ದ ಗೀತೆಗಳನ್ನು ಈ ರೂಪಕದಲ್ಲಿ ಅಳವಡಿಸಲಾಗಿತ್ತು. ವಸ್ತ್ರ ವಿನ್ಯಾಸ, ನೃತ್ಯ ಸಂಯೋಜನೆ, ನಿರ್ದೇಶನವನ್ನು ಸ್ನೇಹ ಕಪ್ಪಣ್ಣ ನಿರ್ವಹಿಸಿದರು. 25 ಕಲಾವಿದರು ನೃತ್ಯ ರೂಪಕದಲ್ಲಿ ಭಾಗಿಯಾಗಿದ್ದರು.
ಜಿಪಂ ಸಿಇಒ ಡಾ.ಬಿ.ಗೋಪಾಲಕೃಷ್ಣ, ಅಪರ ಜಿಲ್ಲಾಧಿಕಾರಿ ನಾರಾಯಣ ಕನಕ ರಡ್ಡಿ, ರವೀಶ್ ಕ್ಯಾತನಬೀಡು, ಚಟ್ನಳ್ಳಿ ಮಹೇಶ್, ಸೋಮಶೇಖರ್ ಬಿಸ್ಲೇಹಳ್ಳಿ, ಮಂಜುನಾಥ್ ಸ್ವಾಮಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net