ಮಂಗಳೂರು: ವೀರೂ ಟಾಕೀಸ್ ಪ್ರೊಡಕ್ಷನ್ ಸಂಸ್ಥೆಗೆ ನೀಡಿದ ನಲವತ್ತು ಲಕ್ಷ ರೂಪಾಯಿಗಳ ಚೆಕ್ ಬೌನ್ಸ್ ಪ್ರಕರಣದಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟಿ ಪದ್ಮಜಾ ರಾವ್ ವಿರುದ್ಧ ಮಂಗಳೂರಿನ ಜೆ.ಎಂ.ಎಫ್.ಸಿ ಐದನೇ ನ್ಯಾಯಾಲಯವು ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದೆ.
ಸದ್ರಿ ವಾರಂಟ್‌ನ್ನು ಈಗಾಗಲೇ ತಲಘಟ್ಟಪುರ ಪೊಲೀಸ್ ಠಾಣೆಗೆ ರವಾನಿಸಲಾಗಿದ್ದು, ಪದ್ಮಜಾ ರಾವ್ ರವರನ್ನು ಬಂಧಿಸಿ ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿದೆ.
ನಟ, ನಿರ್ದೇಶಕ ವಿರೇಂದ್ರ ಶೆಟ್ಟಿ ಒಡೆತನದ ವೀರೂ ಟಾಕೀಸ್ ಪ್ರೊಡಕ್ಷನ್ ಹೌಸ್‌ನಿಂದ ಹಿರಿಯ ನಟಿ ಪದ್ಮಜಾ ರಾವ್ ಅವರು ಹಂತ ಹಂತವಾಗಿ ಸುಮಾರು ನಲವತ್ತೊಂದು ಲಕ್ಷ ರೂಪಾಯಿಗಳನ್ನು ಬ್ಯಾಂಕ್ ಖಾತೆಯ ಮೂಲಕ ಸಾಲ ಪಡೆದುಕೊಂಡಿದ್ದು, ಈ ಸಾಲದ ಭದ್ರತೆಗಾಗಿ ನಲ್ವತ್ತು ಲಕ್ಷ ರೂಪಾಯಿಗಳ ಚೆಕ್ ಅನ್ನು ನೀಡಿದ್ದರು.
ಪದ್ಮಜಾ ರಾವ್ ಸಾಲ ವಾಪಾಸು ಮಾಡದೆ ವಂಚಿಸಿದಾಗ ವೀರೂ ಟಾಕೀಸ್ ಸಂಸ್ಥೆಯಿಂದ ಸದ್ರಿ ಚೆಕ್ ಅನ್ನು ಪದ್ಮಜಾ ರಾವ್ ಖಾತೆಗೆ ಹಾಕಲಾಗಿತ್ತು. ಆದರೆ ಖಾತೆಯಲ್ಲಿ ಹಣವಿಲ್ಲದೆ ಚೆಕ್ ಬೌನ್ಸ್ ಆಗಿತ್ತು. ಈ ಬಗ್ಗೆ ಮಂಗಳೂರಿನ ಜೆ.ಎಂ.ಎಫ್.ಸಿ ಐದನೇ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗಿತ್ತು. ನ್ಯಾಯಾಲಯಕ್ಕೆ ಹಾಜರಾಗಲು ಆದೇಶಿಸಿದ್ದ ಸಮನ್ಸ್ ಅನ್ನು ಸ್ವೀಕರಿಸಲು ನಿರಾಕರಿಸುತ್ತಾ ಬಂದಿದ್ದನ್ನು ಗಮನಿಸಿದ ನ್ಯಾಯಾಲಯ ಅವರ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದೆ.