ನಟ ಉಪೇಂದ್ರ ಬಂಧನಕ್ಕೆ ಒತ್ತಾಯಿಸಿ ದಸಂಸ ಪ್ರತಿಭಟನೆ

ನಟ ಉಪೇಂದ್ರ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಸರಗೂರು ತಾಲೂಕಿನ ತಹಸೀಲ್ದಾರ್ ಕಚೇರಿ ಆವರಣದಲ್ಲಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವತಿಯಿಂದ ಬುಧವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಪರಶಿವಮೂರ್ತಿ ಅವರಿಗೆ ಮನವಿ ಸಲ್ಲಿಸಲಾಯಿತು. ದೊಡ್ಡಸಿದ್ದು, ಸಣ್ಣಕುಮಾರ್, ಗೊವಿಂದರಾಜು, ಶಿವಣ್ಣ, ಕೃಷ್ಣ, ಮಲ್ಲೇಶ್ ಇದ್ದರು.
23 SARAG 1
Published on

ಸರಗೂರು: ನಟ ಉಪೇಂದ್ರ ಅವರು ಪರಿಶಿಷ್ಟ ಜಾತಿಯನ್ನು ಅವಮಾನಿಸಿದ್ದು ಅವರನ್ನು ತಕ್ಷಣವೇ ಬಂಧಿಸಬೇಕು ಎಂದು ಒತ್ತಾಯಿಸಿ ಇಲ್ಲಿನ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸದಸ್ಯರು ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.


ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನಾಕಾರರು ಜಮಾಯಿಸಿ, ಉಪೇಂದ್ರ ಊರು ಇದ್ದ ಕಡೆ ಹೊಲಗೇರಿ ಎಂಬ ಪದ ಬಳಕೆ ಮಾಡಿ ಶೋಷಿತ ಸಮುದಾಯಕ್ಕೆ ನೋವುಂಟು ಮಾಡಿದ್ದಾರೆ. ಹಾಗಾಗಿ ಅವರ ಮೇಲೆ ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.


ಸಮಿತಿ ತಾಲೂಕು ಸಂಚಾಲಕ ಕೂಡಗಿ ಗೋವಿಂದರಾಜು ಮಾತನಾಡಿ, ಯಾವುದೇ ಒಂದು ಜಾತಿಯನ್ನು ಅವಹೇಳನ ಮಾಡುವುದು ಸರಿಯಲ್ಲ. ನಟ ಉಪೇಂದ್ರ ಮತ್ತು ಎಸ್.ಎಸ್.ಮಲ್ಲಿಕಾರ್ಜುನ್ ಈ ಇಬ್ಬರೂ ಮುಖಂಡರು ಉದ್ದೇಶಪೂರ್ವಕವಾಗಿ ಜಾತಿ ನಿಂದನೆ ಮಾಡುವ ಮೂಲಕ ಸಂವಿಧಾನ ಹಾಗೂ ಈ ನೆಲದ ಕಾನೂನಿಗೆ ಅಪಮಾನ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ.ಪರಮೇಶ್ವರ ಅವರಿಗೆ ಸಂವಿಧಾನ ಮತ್ತು ಪರಿಶಿಷ್ಟ ಜಾತಿ, ಪಂಗಡಗಳ ಬಗ್ಗೆ ಕಾಳಜಿ ಇದ್ದರೆ ಕೂಡಲೇ ಕ್ರಮ ಜರುಗಿಸಲಿ. ಇಲ್ಲದಿದ್ದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದರು.


ತಾಲೂಕು ಸಂಚಾಲಕ ಸಣ್ಣಕುಮಾರ್ ಮಾತನಾಡಿ, ನಟ ಉಪೇಂದ್ರ ದಲಿತರ ಬಗ್ಗೆ ಹಗುರವಾಗಿ ಮಾತನಾಡುತ್ತಿರುವುದು ಸರಿಯಲ್ಲ. ಇದು ಅವರಿಗೆ ಶೋಭೆ ತರುವಂತಹ ವಿಚಾರವಲ್ಲ. ನಟರಾಗಿ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುವುದು, ಧಕ್ಕೆ ತರುವುದು ಸರಿಯಲ್ಲ. ಕೂಡಲೇ ಅವರನ್ನು ಬಂಧಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.


ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಚಲನಚಿತ್ರ ನಟ ಚೇತನ್ ಅವರು ಒಂದು ಟ್ವೀಟ್ ಮಾಡಿದ್ದಕ್ಕೆ ಕೋಮು ಸೌಹಾರ್ದಕ್ಕೆ ಧಕ್ಕೆಯಾಗಿದೆ ಎಂದು ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಉಪೇಂದ್ರ ಅವರು ಹೇಳಿಕೆ ನೀಡಿ ಹಲವು ದಿನಗಳು ಕಳೆದರೂ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ ಇರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.


ನಂತರ ತಹಸೀಲ್ದಾರ್ ಪರಶಿವಮೂರ್ತಿ ಅವರ ಮೂಲಕ ಮುಖ್ಯಮಂತ್ರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ತಾಲೂಕು ಸಂಘಟನಾ ಸರಗೂರು ಅಭಿವೃದ್ಧಿ ಹೋರಾಟ ಸಮಿತಿ ಸಂಚಾಲಕ ಸರಗೂರು ಕೃಷ್ಣ, ಆದಿ ಕರ್ನಾಟಕ ಮಹಾಸಭಾ ಪ್ರಧಾನ ಕಾರ್ಯದರ್ಶಿ ಚೆನ್ನಿಪುರ ಮಲ್ಲೇಶ್, ಸಮಿತಿ ಜಿಲ್ಲಾ ಉಪ ಪ್ರಧಾನ ಸಂಚಾಲಕ ದೊಡ್ಡಸಿದ್ದು, ಸಾಗರೆ ನಾಗರಾಜು, ಬಸವರಾಜು, ಆದಿ ಕರ್ನಾಟಕ ಮಹಾಸಭಾ ಅಧ್ಯಕ್ಷ ಸರಗೂರು ಶಿವಣ್ಣ, ನಾಗರಾಜು, ಸಮಿತಿಯ ಸಂಘಟನೆ ಸಂಚಾಲಕ ಚಂದ್ರ, ಸದಸ್ಯರಾದ ನಾಗೇಂದ್ರ, ಮಣಿಕಂಠ ಮಠದಕಟ್ಟೆ, ಸಿಂಗಯ್ಯ, ರಂಗಯ್ಯ, ದಯಾನಂದ, ನಾರಾಯಣ್, ಮದಹೇವ ಕೂಲ್ಯ, ಇದಹಿಯಿತ್, ವೆಂಕಟರಾಮು, ಮೂರ್ತಿ, ಅಣ್ಣಯ್ಯಸ್ವಾಮಿ, ಸಿದ್ದಪ್ಪ, ಅನು, ವಸಂತ ಪಾಟಿಲ್, ಮಂಜು, ಮಹೇಶ್ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net