ನಗರಸಭೆ ಪೌರಾಯುಕ್ತೆ, ಎಇಇಗೆ ಜಿಲ್ಲಾಧಿಕಾರಿ ತರಾಟೆ

HUN-SEP-21-3(DC VISIT TO CMC BUSINESS MALL)
ಹುಣಸೂರು ನಗರಸಭೆಯಿಂದ ನಿರ್ಮಾಣದ ಹಂತದಲ್ಲಿರುವ ಮಳಿಗೆಗಳ ಸಂಕೀರ್ಣಕ್ಕೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರಸಭಾ ಸದಸ್ಯ ಕೃಷ್ಣರಾಜ ಗುಪ್ತ, ಸಿರಾಜ್, ಪರಿಸರ ಇಂಜಿನಿಯರ್ ರೂಪಾ ಇತರರು ಇದ್ದರು.
Published on

ಹುಣಸೂರು: ನಗರಸಭೆ ನಿರ್ಮಾಣ ಮಾಡುತ್ತಿರುವ ವ್ಯಾಪಾರ ಮಳಿಗೆಗಳ ಸಂಕೀರ್ಣ ಅನೈರ್ಮಲ್ಯ ವೀಕ್ಷಣೆ ಮಾಡಿದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಪೌರಾಯುಕ್ತೆ ಹಾಗೂ ಎಇಇ ಅವರನ್ನು ತರಾಟೆಗೆ ತೆಗೆದುಕೊಂಡರು.


2010ರ ನಗರೋತ್ಥಾನ ಯೋಜನೆಯಡಿ 1.30 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮಳಿಗೆ ಸಂಕೀರ್ಣ ಇನ್ನೂ ಪೂರ್ಣಗೊಳ್ಳದೆ ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿವರ್ತಿತವಾಗಿದೆ ಎಂದು ನಗರಸಭಾ ಸದಸ್ಯ ಕೃಷ್ಣರಾಜ ಗುಪ್ತ ಅವರು ಜಿಲ್ಲಾಧಿಕಾರಿ ಗಮನಕ್ಕೆ ತಂದಾಗ ಸ್ಥಳ ಪರಿಶೀಲನೆ ನಡೆಸೋಣವೆಂದು ಮಳಿಗೆಗಳ ಸಂಕೀರ್ಣಕ್ಕೆ ತೆರಳಿ ಪರಿಸ್ಥಿತಿಯನ್ನು ಕಂಡು ಡಿಸಿ ದಂಗಾದರು.


ಕಟ್ಟಡದ ನೆಲ ಅಂತಸ್ತಿನ ಸೆಲ್ಲಾರ್‌ನ ತುಂಬ ಕೆರೆಯಂತೆ ನೀರು ತುಂಬಿರುವುದನ್ನು ಕಂಡು ಕಸಿವಿಸಿಗೊಂಡರು. ಕಟ್ಟಡದ ಸುತ್ತ ನಿರ್ಮಾಣವಾಗಿರುವ ಚರಂಡಿ ತುಂಬ ನೀರು ನಿಂತಿರುವುದನ್ನು ಕಂಡು ಆಕ್ರೋಶಗೊಂಡು ಸ್ಥಳದಲ್ಲಿದ್ದ ನಗರಸಭೆ ಎಇಇ ಶರ್ಮಿಳಾ ಅವರನ್ನು ಇದೇನು ಕಥೆ ಎಂದು ಪ್ರಶ್ನಿಸಿದರು. ವಿಷಯ ತಿಳಿಸಿದ ಎಇಇ ಮತ್ತು ಪೌರಾಯುಕ್ತೆ ಕೆ.ಎಂ.ಮಾನಸ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಅವರು ನಗರಸಭೆ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಯೇ ಈ ಸಮಸ್ಯೆಗೆ ಮೂಲ ಕಾರಣವಾಗಿದೆ. ಸುತ್ತಮುತ್ತಲ ನಾಗರಿಕರು ಮನೆ ಬಾಗಿಲು ಮುಚ್ಚಿಕೊಂಡು ಇದ್ದಾರೆ ಎಂದು ಹೇಳಿದರು.


ಸೆಲ್ಲಾರ್‌ನಲ್ಲಿ ನೀರು ನಿಂತರೆ ಪಂಪ್ ಬಳಸಿ ಹೊರ ಹಾಕುವಷ್ಟು ಶಕ್ತಿಯೂ ನಿಮ್ಮಲ್ಲಿಲ್ಲವೇ? ನಗರದ ಮಧ್ಯೆ ಇಂಥ ಅನೈರ್ಮಲ್ಯ ಸರಿಯೇ? ಕಾಮಗಾರಿ ನಿಂತುಹೋಗಿರುವುದು ಏಕೆ? ಏನು ಸಮಸ್ಯೆ ಕಾಡಿದೆ? ನೀರನ್ನು ಖಾಲಿ ಮಾಡಲು ಅಗತ್ಯ ಪಂಪ್ ಶೀಘ್ರ ಖರೀದಿಸಿ. 1-2 ಲಕ್ಷ ರೂ.ಗಳವರೆಗಿನ ಖರ್ಚಾದರೆ ನನಗೆ ಕಳುಹಿಸಿ ಅನುಮೋದನೆ ನೀಡುತ್ತೇನೆ. ಇನ್ನೊಂದು ವಾರದಲ್ಲಿ ಈ ಜಾಗ ಸ್ವಚ್ಛವಾಗಬೇಕು. ಈ ಕುರಿತು ನನಗೆ ಮಾಹಿತಿ ನೀಡಿ ಎಂದು ಸೂಚಿಸಿದರು.


ನಗರಸಭಾ ಸದಸ್ಯ ಕೃಷ್ಣರಾಜ ಗುಪ್ತ, ಸಮಸ್ಯೆ ಕುರಿತು ಪ್ರತಿ ಬಾರಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸುತ್ತಲೇ ಇದ್ದೇನೆ. ಅಧಿಕಾರಿಗಳು ಸ್ಪಂದಿಸಿಲ್ಲ. ಕಟ್ಟಡದ ಪಕ್ಕದಲ್ಲೇ ಎಪಿಎಂಸಿಯ ರೈತ ಸಂತೆ ಪ್ರಾಂಗಣವಿದ್ದು, ನಿರ್ಮಾಣಗೊಂಡು ದಶಕಗಳೇ ಸಂದರೂ ಈವರೆಗೆ ವ್ಯಾಪಾರ ವಹಿವಾಟು ನಡೆಯದೆ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಅದನ್ನು ನಗರಸಭೆಗೆ ಹಸ್ತಾಂತರಿಸಿದಲ್ಲಿ ನಿರ್ವಹಣೆ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅವರಲ್ಲಿ ಕೋರಿದಾಗ, ಈ ಕುರಿತು ಎಪಿಎಂಸಿ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಎಂದರು.


ಪೌರಾಯುಕ್ತೆ ಕೆ.ಎಂ.ಮಾನಸ, ಪರಿಸರ ಇಂಜಿನಿಯರ್ ಎಲ್.ರೂಪಾ, ನಗರಸಭಾ ಸದಸ್ಯ ಸಿರಾಜ್, ಸತೀಶ್‌ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net