

| ಕಾರಂಗುಟ್ಟೆನಾರಾಯಣಸ್ವಾಮಿ ಕೋಲಾರ
ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂ.ಮೌಲ್ಯದ ಸರ್ಕಾರಿ ಆಸ್ತಿ ಕಬಳಿಸಲು ಮುಂದಾದ, ನಗರದ ಮಹಿಳಾ ಸಮಾಜ ಶಿಕ್ಷಣ ಸಂಸ್ಥೆಯ ಇಬ್ಬರು ಹಾಗೂ ಸರ್ಕಾರಿ ಅಧಿಕಾರಿಯೊಬ್ಬರ ವಿರುದ್ಧ ನಗರ ಠಾಣೆಯಲ್ಲಿ ವಂಚನೆ ಮತ್ತು ಸರ್ಕಾರಿ ಸಂಸ್ಥೆಗಳಿಗೆ ಮೋಸ ಎಸಗಿದ ಆರೋಪದಲ್ಲಿ ದೂರು ದಾಖಲಾಗಿದೆ. ಪೊಲೀಸರು ತನಿಖೆ ತೀವ್ರಗೊಳಿಸಿರುವುದರಿಂದ ಈ ಮೂವರಿಗೆ ಬಂಧನ ಭೀತಿ ಎದುರಾಗಿದೆ.
ನಗರಸಭೆ ಆಸ್ತಿಯಲ್ಲಿ ಅಕ್ರಮವಾಗಿ ಮಹಿಳಾ ಸಮಾಜ ಶಿಕ್ಷಣ ಸಂಸ್ಥೆ ತನ್ನ ಚಟುವಟಿಕೆ ನಡೆಸುತ್ತಿದೆ. ಸುಮಾರು 15ಕೋಟಿ ರೂ. ಬೆಲೆ ಬಾಳುವ ಆಸ್ತಿ ಕಬಳಿಸಲು ಸಂಚು ರೂಪಿಸಲಾಗಿದೆ. ಇದನ್ನು ತಡೆದು ಆಸ್ತಿ ಉಳಿಸಬೇಕು ಎಂದು ನಗರಸಭೆ ಸದಸ್ಯರಾದ ಮುರಳೀಗೌಡ ಮತ್ತು ಪ್ರವಿಣ್ಗೌಡ ಈ ಹಿಂದೆ ಠಾಣೆಗೆ ದೂರು ಸಲ್ಲಿಸಿದ್ದರು. ಆದರೆ, ಎಫ್ಐಆರ್ ದಾಖಲಿಸಲು ಪೊಲೀಸರು ವಿಳಂಬ ಮಾಡಿದ್ಧರಿಂದ, ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದರು. ಮನವಿ ಪುರಸ್ಕರಿಸಿರುವ ನ್ಯಾಯಾಧೀಶರು ಪ್ರಿನ್ಸಿಪಾಲ್ ನವೀನಾ, ಕಾರ್ಯದರ್ಶಿ ನಂದನಾ, ಸಬ್ರಿಜಿಸ್ಟ್ರಾರ್ ಪ್ರಸನ್ನ ವಿರುದ್ಧ ವಂಚನೆ ಪ್ರಕರಣ ದಾಖಲಿಸಲು ಆದೇಶಿಸಿದ್ದು, ವಿವಿಧ ಸೆಕ್ಷೆನ್ಗಳ ಅಡಿಯಲ್ಲಿ ನ.18 ರಂದು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಕರಣದ ವಿವರ : 1960ರಲ್ಲಿ ನಗರಸಭೆಯು ಸಂಸ್ಥೆಗೆ 50 ವರ್ಷಕ್ಕೆ 80*60 ವಿಸ್ತೀರ್ಣದ ನಿವೇಶನ ಗುತ್ತಿಗೆ ಆಧಾರದಲ್ಲಿ ಮಂಜೂರು ಮಾಡಿದ್ದ ಅವಧಿ 2010ರಲ್ಲಿ ಮುಕ್ತಾಯಗೊಂಡಿತ್ತು. ಆದರೆ ನಗರಸಭೆ ಅಧಿಕಾರಿಗಳು ನಿವೇಶನ ಹಿಂಪಡೆಯದೆ 2015ರಲ್ಲಿ ಮತ್ತೆ 12 ವರ್ಷಕ್ಕೆ ಗುತ್ತಿಗೆ ನವೀಕರಿಸಿ 100 ರೂ. ಛಾಪಾ ಕಾಗದದ ಮೇಲೆ ಕರಾರು ಪತ್ರ ಬರೆದು ಕೊಟ್ಟಿದ್ದರು. ನಗರಸಭೆಯ ಈ ನಿರ್ಧಾರವನ್ನು ಪ್ರಶ್ನಿಸಿ ಸದಸ್ಯ ಮುರಳೀಗೌಡ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಲೋಕಾಯುಕ್ತ ಅಧಿಕಾರಿಗಳ ಸೂಚನೆ ಆಧರಿಸಿ, 2018ರಲ್ಲಿ ಅಂದಿನ ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಡಳಿತಾಧಿಕಾರಿಯೂ ಆಗಿದ್ದ ಜೆ.ಮಂಜುನಾಥ ಗುತ್ತಿಗೆ ನವೀಕರಣ ಕಾನೂನು ಬಾಹಿರ ಎಂದು ರ್ನಿಣಯ ರದ್ದುಗೊಳಿಸಿದ್ದರು. ಇದರ ಜತೆಗೆ, ಈ ಜಾಗವನ್ನು ಕೂಡಲೇ ವಶಕ್ಕೆ ಪಡೆಯುವಂತೆ ಅಧೀನ ಅಧಿಕಾರಿಗಳಿಗೆ ಆದೇಶಿಸಿದ್ದರು. ಆದರೆ, ಜಿಲ್ಲಾಧಿಕಾರಿ ಆದೇಶದಂತೆ ನಗರಸಭೆ ಕೊಟ್ಟಿದ್ದ ನೋಟಿಸನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆಹೋದ ಮಹಿಳಾ ಸಮಾಜ ಸಂಸ್ಥೆಗೆ 8 ವಾರ ತಾತ್ಕಾಲಿಕ ತಡೆಯಾಜ್ಞೆ ದೊರೆತಿತ್ತು. ಇದಾದ ನಂತರ ಕರೊನಾ ಕಾರಣಕ್ಕಾಗಿ ವಿಳಂಬವಾದ್ದರಿಂದ ತಡೆಯಾಜ್ಞೆ ತೆರವಾಗಿರಲಿಲ್ಲ. ಇದೇ ವೇಳೆಗೆ ವರ್ಷಾರಂಭದಲ್ಲಿ ನಗರಸಭೆಯ ಮತ್ತೋರ್ವ ಸದಸ್ಯ ಪ್ರವಿಣ್ಗೌಡ ಪ್ರಕರಣದಲ್ಲಿ ಸ್ವಯಂ ಇಚ್ಛೆಯಿಂದ ನಗರಸಭೆ ಆಸ್ತಿಯ ಪರ ದೂರುದಾರರಲ್ಲಿ ಸೇರ್ಪಡೆಯಾದರು. ಇವರು ಸಾಕಷ್ಟು ದಾಖಲೆ ಸಂಗ್ರಹಿಸಿ ವಕೀಲರಿಗೆ ಒದಗಿಸಿದ್ದರು.
ಇಲ್ಲಿಂದ ಪ್ರಕರಣದ ವಿಚಾರಣೆ ವೇಗ ಪಡೆದುಕೊಂಡಿತ್ತು. ಈ ಮಧ್ಯೆ, ಏಳೆಂಟು ವರ್ಷಗಳಿಂದಲೂ ಸಿಗದಿದ್ದ ಆಸ್ತಿ ದಾಖಲೆಗಳು ಎಂದು ಹೇಳಲಾದ ಕೆಲವು ದಾಖಲೆಗಳು ದಿಢೀರ್ ಹೈಕೋರ್ಟ್ಗೆ ಸಲ್ಲಿಕೆಯಾಗಿದ್ದವು. ಮಹಿಳಾ ಸಮಾಜಕ್ಕೆ ನಗರಸಭೆಯಿಂದ ಕೊಟ್ಟಿರುವ ನಿವೇಶನವು ಗುತ್ತಿಗೆಯದಲ್ಲ, 1963ರಲ್ಲಿ ಅಂದಿನ ಆಡಳಿತ ಮಂಡಳಿಯು ಸಾಮಾನ್ಯ ಸಭೆಯಲ್ಲಿ ತೆಗೆದುಕೊಂಡ ತೀಮಾರ್ನದಂತೆ 1070 ರೂ.ಗೆ 140*125 (17 ಸಾವಿರ ಚದರ ಅಡಿ) ನಿವೇಶನವನ್ನು ನಗರಸಭೆ ಅಧ್ಯಕ್ಷರೇ ಖುದ್ದಾಗಿ ಕ್ರಯ ಮಾಡಿಕೊಟ್ಟಿದ್ದಾರೆ. ಹೀಗಾಗಿ ಪ್ರಕರಣ ಇತ್ಯರ್ಥಗೊಳಿಸಬೇಕು ಎಂದು ಮಹಿಳಾ ಸಮಾಜ ಸಂಸ್ಥೆಗೆ ಹೊಸದಾಗಿ ನೇಮಕವಾಗಿದ್ದ ಕಾರ್ಯದರ್ಶಿ ನಂದನಾ ಹೈಕೋರ್ಟ್ಗೆ ಮನವಿ ಮಾಡಿದ್ದರು.
ಇಷ್ಟು ವರ್ಷದಿಂದ ದೊರೆಯದಿದ್ದ ಆಸ್ತಿ ಕ್ರಯ ಪತ್ರಗಳು ದಿಢೀರ್ ಪ್ರತ್ಯಕ್ಷವಾದ ಬಗ್ಗೆ ಮುರಳೀಗೌಡ, ಪ್ರವಿಣ್ಗೌಡಗೆ ಅನುಮಾನ ಮೂಡಿದ್ದು, ಕಚೇರಿಗಳಿಗೆ ತೆರಳಿ ಪರಿಶೀಲಿಸಿದರು. ಆಗ, ಪ್ರಾಚಾರ್ಯೆ ನವೀನಾ ಉಪ ನೋಂದಣಾಧಿಕಾರಿ ಕಚೇರಿಯಿಂದ ಪಡೆದಿರುವ ದೃಢೀಕರಿಸಿದ ಋಣಭಾರ ಪತ್ರ ಹಾಗೂ ಕ್ರಯ ಪತ್ರಗಳನ್ನು ಅಕ್ರಮವಾಗಿ ಸೃಷ್ಟಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿವೆ. ಕೂಡಲೇ ಉಪ ನೋಂದಾಣಾಧಿಕಾರಿ ಕಚೇರಿ ಹಾಗೂ ನಗರಸಭೆಗೆ ಅಧಿಕೃತ ಮಾಹಿತಿಗಾಗಿ ಪ್ರವಿಣ್ಗೌಡ ಅರ್ಜಿ ಸಲ್ಲಿಸಿದ್ದರು.
ಬಳಿಕ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ದೊರೆತ ಮಾಹಿತಿಯಲ್ಲಿ ಆಸ್ತಿ ಕಬಳಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು, ಪುಟಗಟ್ಟಲೆ ಹಾಳೆಗಳನ್ನೇ ತಿದ್ದಿರುವುದು, ಕೆಲವು ಮಾಹಿತಿಗಳನ್ನು ನಾಶ ಮಾಡಿರುವುದು ಕಂಡುಬಂದಿದೆ. ಅದೇ ರೀತಿ ಸಂಸ್ಥೆಯ ಕಟ್ಟಡವಿರುವ ನಿವೇಶನವು ಈಗಲೂ ತನ್ನ ಆಸ್ತಿಯಾಗಿದೆ ಎಂಬುದನ್ನು ಸಾಬೀತು ಮಾಡುವ ದಾಖಲೆಗಳನ್ನು ನಗರಸಭೆಯು ಅಧಿಕೃತವಾಗಿ ಒದಗಿಸಿತ್ತು. ಈ ಹಿನ್ನೆಲೆಯಲ್ಲಿ ಮುರಳೀಗೌಡ, ಪ್ರವಿಣ್ಗೌಡ ಅ.29 ರಂದು ಠಾಣೆಗೆ ದೂರು ಸಲ್ಲಿಸಿದ್ದರು. ಆದರೆ, ನಗರಠಾಣೆ ಪೊಲೀಸರು ದೂರು ದಾಖಲಿಸಲು ಮತ್ತೆ ಮೀನಮೇಷ ಎಣಿಸಿದ್ದರು. ದೂರದಾರರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ ಅವರನ್ನು ಭೇಟಿ ಮಾಡಿ ವಿವರಿಸಿದ್ದರು. ಆದರೂ ಮೊಕದ್ದಮೆ ಹೂಡುವ ಸಾಧ್ಯತೆಗಳು ಕಡಿಮೆಯಾಗಿತ್ತು. ಕಡೆಗೆ ಅನ್ಯ ಮಾರ್ಗವಿಲ್ಲದೆ ಅರ್ಜಿದಾರರು ಕೋಲಾರದ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದರು. ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯವು, ಅರ್ಜಿದಾರರ ಆರೋಪದಲ್ಲಿನ ಅಂಶಗಳು ಮೇಲ್ನೋಟಕ್ಕೆ ಸರಿ ಎಂದು ಕಂಡು ಬಂದಿದ್ದರಿಂದ 420 ಸೆಕ್ಷನ್ ಸೇರಿ ವಿವಿಧ ಸೆಕ್ಷನ್ಗಳ ಅಡಿ ದೂರು ದಾಖಲಿಸುವಂತೆ ಸೂಚನೆ ಕೊಟ್ಟಿದೆ. ಕೋರ್ಟ್ ಸೂಚನೆ ಮೇರೆಗೆ ನಗರ ಠಾಣೆಯಲ್ಲಿ ನ.18 ರಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.