ನಗರಸಭೆ ಆಸ್ತಿ ಒತ್ತುವರಿ ವಿವರ ಸಲ್ಲಿಸಿ

HUN-JUNE-16-1(DC MEETING)
Published on


ಹುಣಸೂರು: ಪಟ್ಟಣದಲ್ಲಿ ನಗರಸಭೆಯ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಅನ್ಯರ ಪಾಲಾಗುತ್ತಿದ್ದು, ನಕಲಿ ಖಾತೆಗಳು ಹಾಗೂ ದಾಖಲೆಗಳು ಸೃಷ್ಟಿಯಾಗುತ್ತಿವೆ ಎಂದು ಸದಸ್ಯ ಸತೀಶ್‌ಕುಮಾರ್ ದೂರಿದರು.

ನಗರಸಭೆ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಅಧ್ಯಕ್ಷತೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಸೇತುವೆ, ಚಿಕ್ಕಹುಣಸೂರು ಮುಂತಾದ ಕಡೆ ನಗರಸಭೆ ಆಸ್ತಿ ಅನ್ಯರ ಪಾಲಾಗುತ್ತಿದೆ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಪಟ್ಟಣದಲ್ಲಿ ಒತ್ತುವರಿಯಾಗಿರುವ ನಗರಸಭೆ ಆಸ್ತಿ ವಿವರವನ್ನು ಜು.1ರೊಳಗೆ ನನಗೆ ಕಳುಹಿಸಿಕೊಡಬೇಕೆಂದು ಪೌರಾಯುಕ್ತ ಸುಜಯ್‌ಕುಮಾರ್ ಅವರಿಗೆ ಸೂಚಿಸಿದರು. ಒತ್ತುವರಿ ಸಮಸ್ಯೆ ಕುರಿತು ಕಾನೂನು ತಜ್ಞರನ್ನು ಒಳಗೊಂಡ ಸಭೆಯನ್ನು ನಡೆಸಲಾಗುವುದು ಎಂದರು.

ಸರ್ಕಾರಿ ಜಾಗ ಖಾಸಗಿ ವ್ಯಕ್ತಿಗೆ ಇ-ಸ್ವತ್ತು: ಸದಸ್ಯ ಕೃಷ್ಣರಾಜ ಗುಪ್ತಾ ಮಾತನಾಡಿ, ನಗರದ ಎನ್‌ಎಸ್ ತಿಟ್ಟು ಬಡಾವಣೆಯ ಸರ್ಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿಗೆ ನಗರಸಭೆ ಅಧಿಕಾರಿಗಳು ಇ-ಸ್ವತ್ತು ಮಾಡಿಕೊಟ್ಟಿದ್ದಾರೆ. ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಂತೆಮಾಳ ಪ್ರಾಂಗಣದಲ್ಲಿರುವ ಎಪಿಎಂಸಿ ಸುಪರ್ದಿಯಲ್ಲಿರುವ ರೈತ ಸಂತೆ ಪ್ರಾಂಗಣ ಬಳಕೆಗೆ ಬಾರದೆ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಅದನ್ನು ನಗರಸಭೆಗೆ ಹಸ್ತಾಂತರಿಸಿದರೆ ಬಳಸಿಕೊಳ್ಳಬಹುದಾಗಿದೆ ಎಂದು ಕೋರಿದರು. ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಸೂಚಿಸಿದರು.

ವಿವೇಕಾನಂದ ಮಾತನಾಡಿ, ಹುಣಸೂರು ನಗರಸಭೆಯಲ್ಲಿ ಖಾಸಗಿ ವ್ಯಕ್ತಿಗಳು ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಕುರಿತು ಲೋಕಾಯುಕ್ತಕ್ಕೂ ನಾನು ದೂರು ನೀಡಿದ್ದೇನೆ. ಸರ್ಕಾರದ ರಹಸ್ಯ ಕಡತಗಳು ಅನ್ಯರ ಕೈ ಸೇರುತ್ತಿವೆ. ಅನ್ಯವ್ಯಕ್ತಿಗಳು ಕರ್ತವ್ಯ ನಿರ್ವಹಿಸುತ್ತಿರುವುದರ ಕುರಿತು ನನ್ನಲ್ಲಿ ಸಿಡಿ ದಾಖಲೆ ಇದೆ. ಕೂಡಲೇ ಕ್ರಮ ವಹಿಸಬೇಕು ಎಂದು ಲಿಖಿತ ದೂರು ಮತ್ತು ಸಿಡಿಗಳನ್ನು ಜಿಲ್ಲಾಧಿಕಾರಿಗೆ ಒಪ್ಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಜಿಲ್ಲಾ ನಗರಾಭಿವೃದ್ಧಿ ಪ್ರಾಧಿಕಾರ(ಡಿಯುಡಿಸಿ)ದ ಮೂಲಕ ಸಿಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಪೌರಾಯುಕ್ತರಿಗೆ ಸೂಚಿಸಿದರು.

ಎಸ್‌ಸಿವಿಡಿಎಸ್ ಚಿತ್ರಮಂದಿರದ ಗೋಳು: ಹುಣಸೂರು ನಗರಸಭೆ ಆಸ್ತಿಯಾಗಿರುವ ಎಸ್‌ಸಿವಿಡಿಎಸ್ ಚಿತ್ರಮಂದಿರವನ್ನು ಬಾಡಿಗೆಗೆ ಪಡೆದಿದ್ದ ವ್ಯಕ್ತಿ ನಗರಸಭೆಗೆ 55 ಲಕ್ಷ ರೂ.ಗಳ ಕಂದಾಯ ಬಾಕಿ ಉಳಿಸಿಕೊಂಡಿದ್ದಾರೆ. ಎರಡು ವರ್ಷಗಳಿಂದ ಬಾಕಿ ಇರುವ ಕಂದಾಯ ವಸೂಲಿ ಮಾಡಬೇಕು ಎಂದು ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದರೂ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ ಎಂದು ಸದಸ್ಯ ಶರವಣ ದೂರಿದರು.
ಬಾಡಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಿ ಹಣ ವಸೂಲಿ ಮಾಡಿ. ಹೊಸದಾಗಿ ಟೆಂಡರ್ ಕರೆದು ಹೊಸಬರಿಗೆ ಬಾಡಿಗೆಗೆ ನೀಡುವಂತೆ ಡಿಸಿ ನಿರ್ದೇಶನ ನೀಡಿದರು.

ಮಳಿಗೆಗಳ ಬಾಡಿಗೆ ವಸೂಲಾಗುತ್ತಿಲ್ಲ: ವರ್ಷದ ಹಿಂದೆ ನಗರಸಭೆ ಮಳಿಗೆಗಳನ್ನು ಬಹಿರಂಗ ಹರಾಜು ಮಾಡಲಾಗಿದ್ದರೂ ಈ ಮಳಿಗೆಗಳಿಂದ ಹರಾಜು ಮೊತ್ತದ ಬಾಡಿಗೆಯನ್ನು ಅಧಿಕಾರಿಗಳು ಪಡೆಯುತ್ತಿಲ್ಲ. ಕಾರಣ ಕೇಳಿದರೆ, ಜಿಲ್ಲಾಧಿಕಾರಿಗಳ ಒಪ್ಪಿಗೆ ಸಿಕ್ಕ ನಂತರವಷ್ಟೇ ಬಾಡಿಗೆ ವಸೂಲಿ ಮಾಡಲು ಸಾಧ್ಯ ಎಂದು ನೆಪ ಹೇಳುತ್ತಾರೆ. ಹರಾಜು ಪ್ರಕ್ರಿಯೆ ನಡೆದು 6 ತಿಂಗಳಾದರೂ ನಿಮ್ಮ ಬಳಿಗೆ ಕಡತಗಳನ್ನು ನೀಡಿಲ್ಲ. ಇದರಿಂದ ನಗರಸಭೆಗೆ ಬರಬೇಕಾದ ಆದಾಯ ಇಲ್ಲದಂತಾಗಿದೆ ಎಂದು ಸದಸ್ಯರಾದ ಸತೀಶ್‌ಕುಮಾರ್, ಹರೀಶ್, ಶರವಣ ಕೃಷ್ಣರಾಜ ಗುಪ್ತ ಇತರರು ಆರೋಪಿಸಿದರು.
ಈ ಕುರಿತು ಇಲಾಖಾ ತನಿಖೆ ನಡೆಸಲು ಆದೇಶಿಸಿದ ಡಿಸಿ, ಸಂಬಂಧಪಟ್ಟ ಅಧಿಕಾರಿ ತಪ್ಪಿತಸ್ಥ ಎಂದಾದಲ್ಲಿ ಅವರನ್ನು ಕರ್ತವ್ಯದಿಂದ ವಜಾಗೊಳಿಸಲು ಆದೇಶಿಸಲಾಗುವುದು ಎಂದು ಹೇಳಿದರು.

ನೀರು ವಿತರಣೆಯಲ್ಲಿ ದೋಷ: ಜಲ ಮಂಡಳಿ ಎಇ ಸಯ್ಯದ್ ಅಫ್ಸರ್ ಮಾತನಾಡಿ, ಹುಣಸೂರು ನಗರಕ್ಕೆ ಪ್ರತಿದಿನ 14 ಎಂಎಲ್‌ಡಿ ನೀರು ಸರಬರಾಜಾಗುತ್ತಿದ್ದು, 11.3 ಎಂಎಲ್‌ಡಿ ನೀರು ಸಾಕಾಗುತ್ತಿದೆ. ಆದರೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. 60 ವರ್ಷಗಳ ಹಿಂದೆ ಹಾಕಿದ್ದ ಪೈಪ್‌ಲೈನ್‌ಗಳಿದ್ದು, ದುಸ್ಥಿತಿಯಲ್ಲಿವೆ. ಹೀಗಾಗಿ ನಗರಸಭೆಯ 10 ವಾರ್ಡ್‌ಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಸಮಸ್ಯೆ ನಿವಾರಣೆಗಾಗಿ ಕೇಂದ್ರ ಸರ್ಕಾರದ ಅಮೃತ್ 2.0 ಯೋಜನೆಯಡಿ 29.9 ಕೋಟಿ ರೂ.ವೆಚ್ಚದಡಿ ವಿತರಣಾ ಸರಪಳಿಯ ಕಾಮಗಾರಿ ಕೈಗೊಂಡಿದ್ದು, ಹೆಚ್ಚುವರಿಯಾಗಿ 15 ಕೋಟಿ ರೂ.ಗಳ ಅನುದಾನದ ಅವಶ್ಯಕತೆಯಿದೆ ಎಂದು ವಿವರಿಸಿದರು.

ಸದಸ್ಯ ಸ್ವಾಮಿಗೌಡ ಮಾತನಾಡಿ, ಹುಣಸೂರಿನಲ್ಲಿ 8 ಸಾವಿರ ಅನಧಿಕೃತ ನಲ್ಲಿ ಸಂಪರ್ಕಗಳಿವೆ. ನಗರಸಭೆ ಈ ಎಲ್ಲ ಸಂಪರ್ಕಗಳನ್ನು ಸಕ್ರಮಗೊಳಿಸಿದಲ್ಲಿ ನಗರಸಭೆಗೆ ಆದಾಯ ಬರಲಿದೆ. ಅಲ್ಲದೇ ನೀರು ಪೋಲಾಗುವುದನ್ನು ತಪ್ಪಿಸಬಹುದಾಗಿದೆ ಎಂದರು.

ಚರಂಡಿ ಹೂಳು ತೆಗೆಸಿರಿ: ನಗರದ ಕಲ್ಕುಣಿಕೆ ಬಡಾವಣೆಯಲ್ಲಿ ಚರಂಡಿಯಲ್ಲಿ ಹೂಳು ತುಂಬಿಕೊಂಡಿದ್ದು, ಮಳೆ ಬಂದರೆ ಮನೆಯೊಳಗೆ ನೀರು ನುಗ್ಗಿ ನಿವಾಸಿಗಳು ಸಮಸ್ಯೆ ಅನುಭವಿಸುವಂತಾಗಿದೆ. ವರ್ಷವಾದರೂ ಕಾಮಗಾರಿ ಮಾಡುತ್ತಿಲ್ಲವೆಂದು ಸದಸ್ಯ ಶರವಣ ದೂರಿದಾಗ, ಎಇಇ ಶರ್ಮಿಳಾ ಅವರಿಗೆ ಜಿಲ್ಲಾಧಿಕಾರಿ ತರಾಟೆಗೆ ತಗೆದುಕೊಂಡರು.ಮುಂಗಾರು ಮಳೆ ಆರಂಭಕ್ಕೂ ಮುನ್ನ ಇಂತಹ ಸಮಸ್ಯೆಗಳನ್ನು ಪರಿಹರಿಸುವಂತೆ ಸೂಚಿಸಿದ್ದೆ. ನೀವು ಇನ್ನೂಮಾಡಿಲ್ಲ. ಈ ಕುರಿತು ಪೌರಾಯುಕ್ತರು ಪರಿಶೀಲಿಸಿ ಎಇಇ ಕರ್ತವ್ಯ ನಿರ್ವಹಣೆಯಲ್ಲಿ ಬೇಜವಾಬ್ದಾರಿ ಎಸಗಿದ್ದರೆ ನಮಗೆ ತಿಳಿಸಬೇಕು. ನಾನು ಕಾನೂನು ಕ್ರಮ ಕೈಗೊಳ್ಳಲಿದ್ದೇನೆ. ಇನ್ನೊಂದು ವಾರದೊಳಗೆ ಚರಂಡಿಯ ಹೂಳು ತೆಗೆಸಬೇಕೆಂದು ತಾಕೀತು ಮಾಡಿದರು.

ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ, ಲಕ್ಷ್ಮಣತೀರ್ಥ ನದಿಗೆ ಕೊಳಚೆ ನೀರು ಸೇರದಂತೆ ಕ್ರಮವಹಿಸಲು ಇದೀಗ ಉಪಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹುಣಸೂರು ನಗರ ವ್ಯಾಪ್ತಿಯಲ್ಲಿ ದಲಿತ ಮುಖಂಡರ ಬೇಡಿಕೆಯಂತೆ ಅಂಬೇಡ್ಕರ್ ಪುತ್ಥಳಿ ಸ್ಥಾಪನೆಗೆ ಸೂಕ್ತ ಸ್ಥಳ ಗುರುತಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಗರವ್ಯಾಪ್ತಿಯ ಬಡಾವಣೆಗಳಲ್ಲಿ ರಸ್ತೆಗಳಿಗೆ ಹೆಸರಿಟ್ಟು ನಾಮಫಲಕ ಅಳವಡಿಸಬೇಕು ಎಂದು ಸೂಚಿಸಿದರು.ಸಭೆಯಲ್ಲಿ ಜಿಲ್ಲಾ ಯೋಜನಾ ನಿರ್ದೇಶಕಿ ಶುಭಾ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ವೇತಾ ಮಂಜುನಾಥ್, ಪೌರಾಯುಕ್ತ ಸುಜಯ್‌ಕುಮಾರ್ ಸದಸ್ಯರು ಮತ್ತು ಆಧಿಕಾರಿಗಳು ಭಾಗವಹಿಸಿದ್ದರು.

ಸಭೆಯಲ್ಲಿ ಮಾಹಿತಿ ಮಂಡಿಸಿ: ಏಪ್ರಿಲ್ 2023ರ ಸಾಮಾನ್ಯ ನಿಧಿ ಖರ್ಚಿನ ವಿವರದಲ್ಲಿ ಎಲ್‌ಇಡಿ ಬೀದಿದೀಪ ಸರಬರಾಜು ಮಾಡಿ ಅಳವಡಿಸಿದ ಬಿಲ್ ಬಾಬ್ತು 1.02 ಲಕ್ಷ ರೂ.ಗಳು, ಹೈಮಾಸ್ಟ್‌ಬೀದಿ ದೀಪ ದುರಸ್ತಿಗಾಗಿನ 94 ಸಾವಿರ ರೂ.ಗಳು, ಪೌರಕಾರ್ಮಿಕರ ದಿನಾಚರಣೆ ಬಿಲ್ 81 ಸಾವಿರ ರೂ.ಗಳ ಕುರಿತು ತನಿಖೆ ನಡೆಸಿ ಸಂಪೂರ್ಣ ಮಾಹಿತಿಯನ್ನು ಮುಂದಿನ ಸಾಮಾನ್ಯ ಸಭೆಯಲ್ಲಿ ಮಂಡಿಸಬೇಕು. ತಪ್ಪು ಕಂಡುಬಂದಲ್ಲಿ ಸಭೆಯ ನಿರ್ಣಯದಂತೆ ಕ್ರಮವಹಿಸಿದರೆಂದು ಜಿಲ್ಲಾಧಿಕಾರಿಗಳು ಪೌರಾಯುಕ್ತರಿಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net