ನಗರದಲ್ಲಿ ಗೋಹತ್ಯೆ ನಡೆಸಿದರೆ ಆಸ್ತಿ ಮುಟ್ಟುಗೋಲು

Varasiddhi venugopal.jpg WEB
Published on

ಚಿಕ್ಕಮಗಳೂರು: ನಗರದಲ್ಲಿ ಕಸಾಯಿ ಖಾನೆಗಳು ಬಹುತೇಕ ಬಂದ್​ಆಗಿದ್ದು, ಗೋಹತ್ಯೆ ಕಂಡುಬಂದಲ್ಲಿ ಅಂತಹ ವ್ಯಕ್ತಿಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಹತ್ಯೆಮಾಡಿ ಮಾಂಸ ಮಾರಾಟ ಮಾಡುತ್ತಿದ್ದ ಕಸಾಯಿಖಾನೆಗಳನ್ನು ತೆರವುಗೊಳಿಸಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದರು.

ಇಂದಿರಾಗಾಂಧಿ ಬಡಾವಣೆಯಲ್ಲಿ ನಗರಸಭೆ ಜಾಗದಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಳ್ಳಲು ಅವಕಾಶ ನೀಡಿ ಕೆಲವರಿಂದ ಲಕ್ಷಾಂತರ ರೂ. ಹಣ ಪಡೆದಿರುವ ಬಗ್ಗೆ ದೂರುಗಳು ಕೇಳಿ ಬಂದಿವೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗುವುದು. ಈ ಬಡಾವಣೆಯಲ್ಲಿ ಅಕ್ರಮವಾಗಿ ನಿರ್ಮಸಿದ್ದ 35 ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ನಗರದಲ್ಲಿ ಪರವಾನಗಿ ಪಡೆಯದೇ ಅಕ್ರಮ ಕಟ್ಟಡ ನಿರ್ವಿುಸುತ್ತಿದ್ದರೆ ಅಥವಾ ನಿರ್ವಿುಸಿದ್ದರೆ ಅವುಗಳನ್ನು ಪಟ್ಟಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, 13 ಜನರಿಗೆ ಈಗಾಗಲೇ ನೋಟೀಸ್ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿಯೇ ಮೊದಲ ಬಾರಿಗೆ 177 ಪೌರಕಾರ್ವಿುಕರಿಗೆ ನಗರಸಭೆಯಿಂದ 9.70 ಲಕ್ಷ ರೂ.ಆರೋಗ್ಯ ವಿಮೆಯನ್ನು ಎಸ್​ಬಿಐ ಜನರಲ್ ಇನ್ಸೂರೆನ್ಸ್ ಗ್ರೂಪ್ ಮೆಡಿಕ್ಲೈಮ್ ಪಾಲಿಸಿ ಮಾಡಿಸಲಾಗಿದೆ. ವಿದ್ಯುತ್​ಬಿಲ್ ಕಡಿತಗೊಳಿಸಲು ನಗರದಲ್ಲಿ ವಿದ್ಯುತ್ ಕಂಬಗಳಿಗೆ 300 ಎಲ್​ಇಡಿ ಬಲ್ಬ್​ಗಳನ್ನು ಅಳವಡಿಸಲಾಗುತ್ತಿದೆ ಎಂದರು.

ಉಪ್ಪಳ್ಳಿ ಮಲ್ಲಂದೂರು ರಸ್ತೆಯ ಪೆಟ್ರೋಲ್ ಬಂಕ್ ಹಿಂಭಾಗದ ಖರಾಬು ಮತ್ತು ಹಳ್ಳದ ಜಾಗ ಒತ್ತುವರಿ ಮಾಡಿ ಶೆಡ್​ನಿರ್ವಿುಸಿ ಕೊಂಡಿರುವ ಬಗ್ಗೆ ಉಪ ವಿಭಾಗಾಧಿಕಾರಿಗಳ ಟಾಸ್ಕ್​ಪೋರ್ಸ್ ಸಭೆಯಲ್ಲಿ ಸೂಚಿಸಿದಂತೆ ಒತ್ತುವರಿದಾರರಿಗೆ ನೋಟೀಸ್ ನೀಡಲು ನೀರಾವರಿ ಇಲಾಖೆ ಹಾಗೂ ನಗರಸಭೆ, ಸಿಡಿಎಯಿಂದ ಜಂಟಿ ಪರಿಶೀಲನೆ ನಡೆಸಿ ಸರ್ವೆ ಇಲಾಖೆಯವರು ಗುರುತು ಮಾಡಿರುವ ಒತ್ತುವರಿ ತೆರವುಗೊಳಿಸಲು ಸೂಚಿಸಿದ್ದು, ಶೀಘ್ರದಲ್ಲೇ ತೆರವುಗೊಳಿಸಲಾಗುವುದು ಎಂದರು.

ಉಪಾಧ್ಯಕ್ಷೆ ಉಮಾದೇವಿ ಕೃಷ್ಣಪ್ಪ, ಸದಸ್ಯರಾದ ಟಿ.ರಾಜಶೇಖರ್, ಕವಿತಾಶೇಖರ್, ಅರುಣ್, ರಾಜು, ಮಣಿಕಂಠ, ಕುಮಾರ, ರವಿ, ಮಲ್ಲೇಶ್, ಅಮೃತೇಶ್, ಶೀಲಾ, ಸುಜಾತ, ಪುಷ್ಪಾ, ರೂಪ, ಪೌರಾಯುಕ್ತ ಬಿ.ಸಿ.ಬಸವರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net