ನಗರದ ವಿವಿಧೆಡೆ ಸಂಭ್ರಮದ ಗಣರಾಜ್ಯೋತ್ಸವ

9
Published on

ನಗರದ ವಿವಿಧೆಡೆ ಸಂಘ ಸಂಸ್ಥೆಗಳು, ಶಾಲಾ, ಕಾಲೇಜುಗಳಲ್ಲಿ ಶುಕ್ರವಾರ ಸಡಗರ ಸಂಭ್ರಮದೊಂದಿಗೆ ಗಣರಾಜ್ಯೋತ್ಸವ ಆಚರಿಸಲಾಯಿತು.

ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ವತಿಯಿಂದ ಯಾದವಗಿರಿ ರೈಲ್ವೆ ಕ್ರೀಡಾಂಗಣದಲ್ಲಿ ಭಾನುವಾರ 76ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿಭಾಗವು ತನ್ನ ಪ್ರಮುಖ ಸಾಧನೆಗಳನ್ನು ಪ್ರದರ್ಶಿಸಿದ್ದು, ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿತು.

ವಿಭಾಗೀಯ ರೈಲ್ವೆ ವ್ಯವಸ್ಥಾಪಕರು (ಡಿಆರ್‌ಎಂ) ಶಿಲ್ಪಿ ಅಗರವಾಲ್ ಧ್ವಜಾರೋಹಣ ನಡೆಸಿ, ರೈಲ್ವೆ ಸಂರಕ್ಷಣಾ ಪಡೆ ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್ ಪಥ ಸಂಚಲನ ವೀಕ್ಷಿಸಿದರು. ಶಿಲ್ಪಿ ಅಗರವಾಲ್ ಮಾತನಾಡಿ, ಹಣಕಾಸು ವೃದ್ಧಿ, ಸುರಕ್ಷತಾ ಕ್ರಮ, ಮೂಲಸೌಕರ್ಯ ಸುಧಾರಣೆ ಮತ್ತು ಪ್ರಯಾಣಿಕರ ಸೇವೆಗಳ ವಿಷಯದಲ್ಲಿ ವಿಭಾಗದ ಅತ್ಯುತ್ತಮ ಸಾಧನೆಗಳ ಬಗ್ಗೆ ವಿವರಿಸಿದರು.

ಈ ಸಾಲಿನಲ್ಲಿ 1,000 ಕೋಟಿ ರೂ. ಮೀರಿದ ಆದಾಯವನ್ನು ವಿಭಾಗ ಗಳಿಸಿದ್ದು, ಸರಕು ಆದಾಯ 649.44 ಕೋಟಿ ರೂ. ಮತ್ತು ಪ್ರಯಾಣಿಕರ ಆದಾಯ 315.51 ಕೋಟಿ ರೂ.ಆಗಿದೆ. ವಾಹನಗಳ ಸಾಗಣೆಗಾಗಿ 73 ಎನ್‌ಎಂಜಿ ರೇಕೆಗಳನ್ನು ಲೋಡ್ ಮಾಡುವ ಮೂಲಕ ಮತ್ತು ಆಹಾರ ಧಾನ್ಯಗಳ ಸಾಗಣೆಯಲ್ಲಿ ದೊಡ್ಡ ಪ್ರಮಾಣದ ಬೆಳವಣಿಗೆ ಕಂಡುಬಂದಿದೆ.

ವಿಭಾಗವು 24.95 ದಶಲಕ್ಷ ಪ್ರಯಾಣಿಕರನ್ನು ಸಾಗಿಸಿದ್ದು, ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳ ಸಮಯ ಪ್ರಜ್ಞೆ ಶೇ. 94 ಕಾಯ್ದುಕೊಂಡಿದೆ. ಕುಂಭಮೇಳವನ್ನು ಆಚರಿಸುವ ಪ್ರಯಾಗರಾಜ್ ಸೇರಿದಂತೆ ದೇಶದಾದ್ಯಂತ ಜನಪ್ರಿಯ ಸ್ಥಳಗಳನ್ನು ಸಂಪರ್ಕಿಸಲು ವಿಶೇಷ ರೈಲುಗಳನ್ನು ಪರಿಚಯಿಸಲಾಯಿತು ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net