ವಿಜಯವಾಣಿ ಸುದ್ದಿಜಾಲ ಕೋಲಾರ
ನಗರದ ಹೃದಯಭಾಗದಲ್ಲಿರುವ ಕೋಡಿಕಣ್ಣೂರು, ಕೋಲಾರಮ್ಮನ ಕೆರೆ ಒತ್ತುವರಿ ತೆರೆವುಗೊಳಿಸುವ ಜೊತೆಗೆ ಜಿಲ್ಲಾಧಿಕಾರಿಗಳ ಕಛೇರಿ ಹಿಂಭಾಗ ಇರುವ ಕುಂಬಾರಹಳ್ಳಿ ಕೆರೆಗೆ ನಕಲಿ ಖಾತೆ ಸೃಷ್ಠಿಸಿಕೊಂಡಿದ್ದು, ಕೂಡಲೆ ರದ್ದು ಮಾಡಬೇಕೆಂದು ರೈತ ಸಂಘದ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿ. ಜಿಲ್ಲಾದ್ಯಂತ ಕೆರೆಗಳನ್ನು ಉಳಿಸಬೇಕಾದರೆ ಹೋರಾಟಗಾರರು ನ್ಯಾಯಾಲಯದಲ್ಲಿ ಕೇಸು ದಾಖಲು ಮಾಡಬೇಕಾದ ಪರಿಸ್ಥಿತಿ ಇದೆ. ಸಂಬಳ ಪಡೆಯುವ ಕಂದಾಯ, ಸರ್ವೇ ಅಧಿಕಾರಿಗಳು ಏಕೆ ಸರ್ಕಾರಿ ಭೂಮಿಯನ್ನು ಉಳಿಸಲು ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಜಿಲ್ಲಾದ್ಯಂತ ೩೭೦೦ ಕ್ಕೂ ಹೆಚ್ಚು ಕೆರೆಗಳಿದ್ದು, ಪೂರ್ವಜರು ಕಟ್ಟಿ ಬೆಳೆಸಿದ ಕೆರೆಗಳಾಗಿದ್ದು, ಭೂಗಳ್ಳರ ವಕ್ರ ದೃಷ್ಠಿಯಿಂದ ಕಂದಾಯ ಸರ್ವೇ ಅಧಿಕಾರಿಗಳ ಬೇಜವಬ್ದಾರಿಯಿಂದ ಜಲಮೂಲಗಳು ದಿನೇ ದಿನೇ ಕಣ್ಮರೆಯಗುತ್ತಿರುವುದನ್ನು ಗಂಬೀರವಾಗಿ ಪರಿಗಣಿಸಿರುವ ರೈತರು, ಜಿಲ್ಲೆಯ ಅಭಿವೃದ್ದಿಯ ಕಾಳಜಿಯುಳ್ಳ ಜಿಲ್ಲಾಧಿಕಾರಿ ಎಂ.ಆರ್.ರವಿ ಕೆರೆಗಳ ಒತ್ತುವರಿ ತೆರೆವು ಅಭಿಯಾನಕ್ಕೆ ಚಾಲನೆ ನೀಡಿರುವುದಕ್ಕೆ ಸ್ವಾಗತಾರ್ಹ. ಜೊತೆಗೆ ಯಾವುದೆ ರಾಜಕೀಯ ಒತ್ತಡವಿಲ್ಲದೆ ಕೆರೆಗಳನ್ನು ಕದ್ದಿರುವ ಭೂಗಳ್ಳರ ವಿರುದ್ದ ಕೆರೆ ಕಳ್ಳ ಎಂದು ಕೇಸು ದಾಖಲಿಸಬೇಕೆಂದು ಅಗ್ರಹಿಸಿದರು.
ಕೆರೆ ಒತ್ತುವರಿ ತೆರೆವು ಎಂಬುದು ನೆಪಮಾತ್ರಕ್ಕೆ ಆಗಬಾರದು. ಎಲ್ಲಾ ಕೆರೆಗಳ ಮೂಲ ದಾಖಲೆಗಳನ್ನು ಪರೀಶೀಲಿಸಿ, ಮೂಲ ಎಷ್ಟು ಎಕರೆ ಇದೆ ಎಂಬುದನ್ನು ಖಾತರಿಪಡಿಸಿಕೊಳ್ಳುವ ಜೊತೆಗೆ ಕೆರೆ ಜಮೀನಿಗೆ ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿಕೊಂಡಿರುವ ಪ್ರಕರಣವನ್ನು ಗಂಬೀರವಾಗಿ ಪರಿಗಣಿಸುವ ಜೊತೆಗೆ ಹೃದಯ ಭಾಗದಲ್ಲಿರುವ ಕೋಲಾರಮ್ಮನ ಕೆರೆ, ಕೋಡಿಕಣ್ಣೂರು, ಹಾಗೂ ಜಿಲ್ಲಾಧಿಕಾರಿಗಳ ಕಛೇರಿ ಹಿಂಬಾಗ ಇರುವ ಕುಂಬಾರಹಳ್ಳಿ ಕೆರೆ ಜಮೀನಿಗೆ ಪಹಣಿ ಖಾತೆ ಮಾಡಿಕೊಂಡಿದ್ದಾರೆ. ನೂರಾರು ಎಕರೆ ಒತ್ತುವರಿಯಾಗಿದ್ದು, ಜಿಲ್ಲಾಧಿಕಾರಿಗಳು ಮೊದಲು ಈ ಮೂರು ಕೆರೆಗಳನ್ನು ತೆರೆವು ಮಾಡುವ ಮುಖಾಂತರ ಕೆರೆ ಒತ್ತುವರಿ ತೆರೆವು ಅಭಿಯಾನಕ್ಕೆ ಜೀವ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಜಿಲ್ಲಾದ್ಯಂತ ಹೆಚ್ಚು ಕೆರೆಗಳು ಒತ್ತುವರಿ ಆಗಿರುವುದರ ಜೊತೆಗೆ ಕೆರೆ ಜಮೀನುಗಳಿಗೆ ನಕಲಿ ದಾಖಲೆಗಳನ್ನು ಸೃಷ್ಠಿಮಾಡಿಕೊಂಡಿದ್ದಾರೆ. ಮಾಲೂರು ಹಾಗೂ ಮುಳಬಾಗಿಲಿನಲ್ಲಿ ಈ ಎರಡು ತಾಲ್ಲೂಕುಗಳ ಕೆರೆ ಒತ್ತುವರಿಯನ್ನು ಗಂಬೀರವಾಗಿ ಪರಗಣಿಸುವ ಜೊತೆಗೆ ಮೂಲ ಕೆರೆಗಳ ವಿಸ್ತೀರ್ಣ ತೆರೆವು ಮಾಡುವಂತೆ ಖಡಕ್ ಆದೇಶವನ್ನು ಆಯಾ ತಾಲ್ಲೂಕು ದಂಡಾಧಿಕಾರಿಗಳಿಗೆ ನೀಡಬೇಕಾಗಿದೆ.
ನೆಪ ಮಾತ್ರಕ್ಕೆ ಕೆರೆ ಒತ್ತುವರಿ ಮಾಡಿಕೊಂಡಿರುವ ಅಮಾಯಕ ರೈತರ ೧ ರಿಂದ ೨ ಎಕರೆ ಒತ್ತುವರಿ ಜಾಗವನ್ನು ತೆರೆವುಮಾಡಿ, ಜೆ.ಸಿ.ಬಿ ಪಕ್ಕದಲ್ಲಿ ಪೋಟೋ ಹಿಡಿದು ವರದಿ ಕೊಡುವುದನ್ನು ಬಿಟ್ಟು ಭೂಗಳ್ಳರ ಕಪಿಮುಷ್ಠಿಯಲ್ಲಿರುವ ಹತ್ತಾರು ಎಕರೆ ಒತ್ತುವರಿ ಮಾಡಿಕೊಂಡಿರುವ ಒತ್ತುವರಿಯನ್ನು ತೆರೆವುಗೊಳಿಸಿ, ಸೃಷ್ಠಿಸಿರುವ ನಕಲಿ ದಾಖಲೆಗಳನ್ನು ರದ್ದು ಮಾಡಿ, ಒತ್ತುವರಿ ತೆರೆವುಗೊಳಿಸಿ ಕೆರೆಗಳ ಸುತ್ತಲೂ ಬಯೋ ಪೆನ್ಸಿಂಗ್ ಮಾಡಿ ಕೆರೆಗಳ ಸಂರಕ್ಷಣೆ ಮಾಡಬೇಕೆಂದು ಒತ್ತಾಯಿಸಿದರು.
ಚಿತ್ರ ೧೧ ಕೆ.ಎಲ್.ಆರ್. ೦೧ : ರೈತ ಸಂಘದ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ರವರ ಭಾವಚಿತ್ರ