ನಕ್ಷೆಗೆ ವಿರುದ್ಧವಾಗಿ ಎಪಿಎಂಸಿಯಲ್ಲಿ ಕಟ್ಟಡ ನಿರ್ಮಾಣ

Protest
Published on

ನಗರದ ಬಂಡೀಪಾಳ್ಯ ಎಪಿಎಂಸಿಯಲ್ಲಿ ಕೆಲವರು ನಕ್ಷೆಗೆ ವಿರುದ್ಧವಾಗಿ ಕಟ್ಟಡ ನಿರ್ಮಿಸಿಕೊಂಡು ಬಾಡಿಗೆಗೆ ನೀಡಿದ್ದಾರೆ ಎಂದು ಕರ್ನಾಟಕ ಸೇನಾ ಪಡೆದ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್‌ಗೌಡ ಆರೋಪಿಸಿದರು.

ಹಳೇ ಸಂತೇಪೇಟೆಯಲ್ಲಿ ಆರ್‌ಎಂಸಿ ಪರವಾನಗಿ ಹಾಗೂ ಆರ್‌ಎಂಸಿ ತೆರಿಗೆ ಶುಲ್ಕ ಪಾವತಿಸಿಕೊಂಡು ಬಂದಿರುವ ವ್ಯಾಪಾರಿಗಳಿಗೆ ಬಂಡಿಪಾಳ್ಯ ಎಪಿಎಂಸಿ ಆವರಣದಲ್ಲಿ ವ್ಯಾಪಾರ ನಡೆಸಲು ಖಾಲಿ ನಿವೇಶನ ನೀಡಲಾಗಿತ್ತು. ಇವನ್ನು ಪಡೆದವರು ನಿಯಮಬಾಹಿರವಾಗಿ, ನಕ್ಷೆಗೆ ವಿರುದ್ಧವಾಗಿ ಕಟ್ಟಡ ನಿರ್ಮಿಸಿಕೊಂಡು ಬಾಡಿಗೆಗೆ ನೀಡಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಇದರಿಂದಾಗಿ ಎಪಿಎಂಸಿಗೆ ಜಮೀನು ನೀಡಿದ ರೈತರು ಹಾಗೂ ಸ್ಥಳೀಯ ವ್ಯಾಪಾರಿಗಳಿಗೆ ಅನ್ಯಾಯವಾಗಿದೆ. ಈ ಸಂಬಂಧ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಕೂಡಲೇ ಎಪಿಎಂಸಿ ಅಧಿಕಾರಿಗಳು ಹಾಗೂ ಸರ್ಕಾರ ಕಾನೂನುಬಾಹಿರ ವ್ಯಾಪಾರಿ ಮಳಿಗೆ ತೆರವುಗೊಳಿಸಬೇಕು. ಇಲ್ಲದಿದ್ದಲ್ಲಿ ತೀವ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ದಯಾನಂದ್, ವರಕೋಡು ಕೃಷ್ಣೇಗೌಡ, ಸಿಂಧುವಳ್ಳಿ ಶಿವಕುಮಾರ್, ಹನುಮಂತಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net