ನಕಲಿ ಕ್ಲಿನಿಕ್ ವಿರುದ್ಧ ಕ್ರಮಕ್ಕೆ ಪಟ್ಟು

3-klr-1
Published on

ಕೋಲಾರ: ಜಿಲ್ಲಾದ್ಯಂತ ತಲೆ ಎತ್ತಿರುವ ನಕಲಿ ಕ್ಲಿನಿಕ್‌ಗಳ ವಿರುದ್ಧ ಕ್ರಮ ಕೈಗೊಂಡು ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಸಂಚಾರಿ ಆರೋಗ್ಯ ವಾಹನ ಸೇವೆ ಹಾಗೂ ಪಂಚಾಯಿತಿಗೊಂದು ಫೀವರ್ ಕ್ಲಿನಿಕ್ ತೆರೆಯಬೇಕೆಂದು ರೈತ ಸಂಘದಿಂದ ಆರೋಗ್ಯ ಇಲಾಖೆಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಕರೊನಾ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ನೂರಾರು ನಕಲಿ ಕ್ಲಿನಿಕ್‌ಗಳು ಆರಂಭವಾಗಿವೆ. ಜನ ವಿಧಿ ಇಲ್ಲದೆ ಈ ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ ಪಡೆದು ನಾನಾ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಈ ಕೂಡಲೇ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಮಾತನಾಡಿ, ನೆಗಡಿ, ಕೆಮ್ಮು ಬಂದರೂ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಬರುವಂತೆ ವೈದ್ಯ ಸಿಬ್ಬಂದಿ ಸೂಚಿಸುತ್ತಿದ್ದಾರೆ. ಗರ್ಭಿಣಿಯರು ಹೆರಿಗೆಗೆ ತೆರಳಿದರೂ ಇದೇ ಸಮಸ್ಯೆ ಎಂದು ದೂರಿದರು.

ಸಮಸ್ಯೆ ನಿವಾರಣೆಗೆ ಜನಜಾಗೃತಿ ಮೂಡಿಸಬೇಕು. ಕರೊನಾ ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೂ ಸಂಚಾರಿ ಆರೋಗ್ಯ ವಾಹನ ಸೇವೆ ಮತ್ತು ಫಿವರ್ ಕ್ಲಿನಿಕ್ ತೆರೆಯಬೇಕೆಂದು ಜಿಲ್ಲಾ ಕ್ಷಯಾರೋಗ ನಿಯಂತ್ರಣಾಧಿಕಾರಿ ಡಾ.ಜಗದೀಶ್‌ಗೆ ಮನವಿ ಸಲ್ಲಿಸಿದರು.

ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಬಂಗಾರಪೇಟೆ ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಮುಖಂಡರಾದ ವಿ.ನಳಿನಿ, ಸ್ವಸ್ತಿಕ್ ಶಿವು, ಚಾನ್‌ಪಾಷಾ, ಜಮೀರ್ ಅಹಮದ್, ಕಿರಣ್, ಮುನೀರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net