ವಿಜಯವಾಣಿ ಸುದ್ದಿಜಾಲ ಕೋಲಾರ ವಿಜಯವಾಣಿ ಎಫೆಕ್ಟ್
ಇನ್ನು ಮುಂದೆ ಯಾರೂ ಗ್ರಾಮವನ್ನು ತೊರೆಯಬೇಕಾಗಿಲ್ಲ. ಕಾನೂನನ್ನು ಯಾರೂ ಕೈಗೆತ್ತಿಕೊಳ್ಳಬಾರದು. ವಿಡಿಯೋ ತುಣುಕುಗಳಲ್ಲಿ ಕಾನೂನಿಗೆ ಅಡ್ಡಿಪಡಿಸಿದವರನ್ನು ಹೊರತುಪಡಿಸಿ ಉಳಿದವರ ತಂಟೆಗೆ ಪೋಲಿಸರು ಬರುವುದಿಲ್ಲ. ನೆಮ್ಮದಿಯಾಗಿ ಈ ದಿನದಿಂದಲೂ ಊರಿನಲ್ಲಿ ಬಂದು ವಾಸಿಸಬಹುದು ಎಂದು ಡಿ.ವೈ.ಎಸ್.ಪಿ. ನಂದಕುಮಾರ್ ತಿಳಿಸಿದರು.
ಸೆ.೧೨ ರಂದು ನಂಬಿಹಳ್ಳಿ ಗ್ರಾಮದಲ್ಲಿ ಪತಿಯಿಂದಲೇ ಪತ್ನಿಯನ್ನು ಕೊಲೆಮಾಡಿದ ಸಂದರ್ಭದಲ್ಲಿ ಗ್ರಾಮದವರು ಪತಿಯ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೈಗೊಂಡ ಸಂದರ್ಭದಲ್ಲಿ ಪೋಲಿಸರ ಮತ್ತು ಗ್ರಾಮಸ್ಥರ ಮಧ್ಯೆ ವಾಗ್ವಾದ ಉಂಟಾದ ಸಂದರ್ಭದಲ್ಲಿ ಗ್ರಾಮದ ೧೦೦೦ ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿನ ಪುರುಷರೆಲ್ಲ ಗ್ರಾಮ ತೊರೆದಿದ್ದ ಕಾರಣ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿ ಕೃಷಿ ಚಟುವಟಿಕೆಗಳು, ಜಾನುವಾರುಗಳಿಗೆ ಮೇವು ನೀರು ಇಲ್ಲದೆ ರಾತ್ರಿ ವೇಳೆ ಮಹಿಳೆಯರು ಭಯದ ವಾತಾವರಣದಲ್ಲಿ ಬದುಕುವಂತಹ ಪರಿಸ್ಥಿತಿ ಉಂಟಾಗಿತ್ತು. ಇದನ್ನು ವಿಜಯವಾಣಿ ದಿನಪತ್ರಿಕೆ ಶನಿವಾರ ಸಂಚಿಕೆಯಲ್ಲಿ ಸಮಗ್ರ ವರದಿ ಪ್ರಕಟವಾಗಿತ್ತು.
ಎಚ್ಚೆತ್ತುಕೊಂಡ ಪೋಲಿಸರು ಶನಿವಾರ ಬೆಳ್ಳಿಗ್ಗೆ ಡಿ.ವೈ.ಎಸ್.ಪಿ.ನಂದಕುಮಾರ್, ಸಿ.ಪಿ.ಐ. ದಯಾನಂದ, ಪಿ.ಎಸ್.ಐ.ಈಶ್ವರಪ್ಪ ನೇತೃತ್ವದ ತಂಡ ಗ್ರಾಮದಲ್ಲಿ ಕಾನೂನಿನ ಬಗ್ಗೆ ಅರಿವು ಮತ್ತು ಗ್ರಾಮ ಸಭೆಯನ್ನು ಏರ್ಪಡಿಸಿ, ಕಾನೂನು ಕೈಗೆತ್ತಿಕೊಂಡರೆ ಏನೆಲ್ಲಾ ಅನಾಹುತಗಳಾಗುತ್ತವೆ ಎಂಬುದರ ಬಗ್ಗೆ ಡಿ.ವೈ.ಎಸ್.ಪಿ.ನಂದಕುಮಾರ್ ಗ್ರಾಮಸ್ಥರಿಗೆ ತಿಳಿಸಿ ಘಟನೆಯಾದ ದಿವಸ ಕೊಲೆ ಆರೋಪಿಯ ಮೇಲೆ ಹಲ್ಲೆ ನಡೆಸಿದ್ದರೆ ನೀವೆಲ್ಲರೂ ಜೈಲು ಸೇರಬೇಕಾಗಿತ್ತು. ಪೋಲಿಸರಿಗೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳನ್ನು ವಾಪಸ್ಸು ಪಡೆಯಲು ಸಾಧ್ಯವಿಲ್ಲ. ಸರ್ಕಾರದ ಹಂತದಲ್ಲಿ ಇತ್ಯರ್ಥ ಆಗಬೇಕಾಗಿದೆ. ಸಾವಿರ ಜನರು ತಪ್ಪಿತಸ್ಥರಲ್ಲ. ಇದರಲ್ಲಿ ೧೦-೧೨ ಜನರು ವಿರುದ್ದ ಕೇಸು ಇದ್ದೇ ಇರುತ್ತದೆ. ಇವರನ್ನು ಹೊರತುಪಡಿಸಿ ಉಳಿದವರೆಲ್ಲರು ಊರಿನಲ್ಲಿ ವಾಸಿಸಬಹುದು ಎಂದರು.
ಊರಿನ ಗಸ್ತಿಗಾಗಿ ರಾತ್ರಿ ವೇಳೆ ಪೋಲಿಸ್ ಜೀಪು ಬಂದರೆ ನೀವು ಹೆದರಿ ಬಾಗಿಲುಗಳನ್ನು ಹಾಕಿಕೊಳ್ಳುತ್ತೀರಿ. ಇನ್ನು ಮುಂದೆ ಈ ರೀತಿಯಾಗಿ ಆಗುವುದಿಲ್ಲ. ಯಾರಾದರೂ ಗ್ರಾಮ ತೊರೆದಿದ್ದಾರಿಯೂ ಅವರೆಲ್ಲರನ್ನು ಮತ್ತೆ ವಾಪಸ್ಸು ಕರೆಸಿಕೊಳ್ಳಿ, ದಿನಸಿ ಅಂಗಡಿಗಳು, ಮಿನಿ ಹೋಟೆಲ್‌ಗಳು ಬಾಗಿಲು ತೆರೆಯಬಹುದು ಎಂದು ಸಿ.ಪಿ.ಐ. ದಯಾನಂದ ತಿಳಿಸಿದರು.
ರೈತ ಸಂಘದ ಮುಖಂಡ ಶ್ರೀರಾಮರೆಡ್ಡಿ ನೇತೃತ್ವದಲ್ಲಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ನರಸಿಂಹಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ನರಸಿಂಹಮೂರ್ತಿ, ನರಸಿಂಹರೆಡ್ಡಿ, ಸುಬ್ಬಲಕ್ಷö್ಮಮ್ಮ ಸೇರಿದಂತೆ ಗ್ರಾಮದ ಮುಖಂಡರಾದ ಚೌಡರೆಡ್ಡಿ, ನಾರಾಯಣಸ್ವಾಮಿ ಸೇರಿದಂತೆ ೨೦೦ ಹೆಚ್ಚು ಜನರು ಗ್ರಾಮ ಸಭೆಯಲ್ಲಿ ಭಾಗವಹಿಸಿದ್ದರು. ಕಾಂಗ್ರೇಸ್ ಮುಖಂಡರಾದ ಕೆ.ಕೆ.ಮಂಜು, ಕೋಲಾರದ ಜಯದೇವ್ ಉಪಸ್ಥಿತರಿದ್ದರು.
ಬಾಕ್ಸ್
ಪೋಲಿಸರು ಗ್ರಾಮಸಭೆಯನ್ನು ಮುಗಿಸಿ ಬರುತ್ತಿದ್ದಂತೆಯೇ ಗ್ರಾಮದಲ್ಲಿ ಅಂಗಡಿ ಮುಂಗಟ್ಟುಗಳ ಬಾಗಿಲು ತೆರೆದು ವ್ಯಾಪಾರ ಪ್ರಾರಂಭಿಸಿದರು. ಗ್ರಾಮದಿಂದ ಹೊರ ಹೋಗಿದ್ದವರು ಒಬ್ಬೊಬ್ಬರಾಗಿ ಗ್ರಾಮ ಪ್ರವೇಶ ಮಾಡತೊಡಗಿದರು.
ಬಾಕ್ಸ್
ಇನ್ನು ಮುಂದೆ ಈ ರೀತಿಯ ಸಮಸ್ಯೆಗಳಿಗೆ ಅವಕಾಶ ಮಾಡಿಕೊಡುವುದಿಲ್ಲ. ಪುರುಷರು ಗ್ರಾಮ ಪ್ರವೇಶವನ್ನು ಮಾಡುವಂತೆ ಅವಕಾಶ ಮಾಡಿಕೊಡಿ, ನಮ್ಮ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ವಾಪಸ್ಸು ಪಡೆಯಿರಿ ಎಂದು ಗ್ರಾಮದ ಮಹಿಳೆಯರುವ ಪೋಲಿಸರು ಕೈ ಮುಗಿದು ಬೇಡಿಕೊಂಡರು.
ಚಿತ್ರ ೨೩ ಕೆ.ಎಲ್.ಆರ್. ೦೧ : ಗ್ರಾಮ ಸಭೆಯಲ್ಲಿ ಭಾಗವಹಿಸಿದ್ದ ಗ್ರಾಮಸ್ಥರು
ಚಿತ್ರ ೨೩ ಕೆ.ಎಲ್.ಆರ್. ೦೧ಎ : ಗ್ರಾಮ ಸಭೆಯಲ್ಲಿ ಕಾನೂನಿನ ಬಗ್ಗೆ ತಿಳುವಳಿಕೆ ನೀಡುತ್ತಿರುವ ಡಿ.ವೈ.ಎಸ್.ಪಿ. ನಂದಕುಮಾರ್, ಸಿ.ಪಿ.ಐ. ದಯಾನಂದ, ಪಿ.ಎಸ್.ಐ. ಈಶ್ವರಪ್ಪ ಇದ್ದರು.